ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್​ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ

India suspends its visa operations for indefinite period in Chittagong: ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಬಂದರುನಗರಿಯಾದ ಚಿತ್ತಗಾಂಗ್​ನಲ್ಲಿ ಭಾರತ ವೀಸಾ ಸೇವೆ ನಿಲ್ಲಿಸಿದೆ. ಅಲ್ಲಿಯ ಭಾರತೀಯ ಉಪರಾಯಭಾರ ಕಚೇರಿಯಲ್ಲಿ ವೀಸಾ ಸಂಬಂಧಿತ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹಾದಿ ಎಂಬಾತನ ಹತ್ಯೆಯಾದ ಬಳಿಕ ಬಾಂಗ್ಲಾದೇಶದಾದ್ಯಂತ ಭಾರತ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ.

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್​ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ
ವೀಸಾ

Updated on: Dec 21, 2025 | 7:37 PM

ಢಾಕಾ, ಡಿಸೆಂಬರ್ 21: ಮತ್ತೆ ತೀವ್ರ ರೀತಿಯಲ್ಲಿ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತವು ಚಿತ್ತಗಾಂಗ್ ನಗರದಲ್ಲಿ ತನ್ನ ವೀಸಾ ಆಪರೇಷನ್ಸ್ ಅನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸಿದೆ. ಚಿತ್ತಗಾಂಗ್ ನಗರದಲ್ಲಿ ಭಾರತೀಯ ಉಪರಾಯಭಾರ ಕಚೇರಿಯ (Chittagong Indian Assistant High Commission) ಮೇಲೆ ಬಾಂಗ್ಲಾ ಪ್ರತಿಭಟನಕಾರರು ದಾಳಿ ನಡೆಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೃಹತ್ ಸಂಖ್ಯೆಯಲ್ಲಿದ್ದ ಜನರ ಗುಂಪು ಭಾರತದ ಈ ರಾಜತಾಂತ್ರಿಕ ಕಚೇರಿಗೆ ನುಗ್ಗಲು ಯತ್ನಿಸಿತ್ತಾದರೂ ಭದ್ರತಾ ಪಡೆಗಳು ಅದನ್ನು ವಿಫಲಗೊಳಿಸಿದ್ದವು. ಈಗ ಮುನ್ನೆಚ್ಚರಿಕೆಯಾಗಿ ಕಚೇರಿಯಲ್ಲಿನ ವೀಸಾ ಕಾರ್ಯವನ್ನು ಮುಂದಿನ ಸೂಚನೆಯವರೆಗೂ ನಿಲ್ಲಿಸಲಾಗಿದೆ.

ಬಾಂಗ್ಲಾ ಹೊತ್ತಿ ಉರಿಯುತ್ತಿರುವುದು ಯಾಕೆ?

ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಎಂಬುವವರನ್ನು ಮುಸುಕುಧಾರಿ ವ್ಯಕ್ತಿಗಳು ಡಿಸೆಂಬರ್ 12ರಂದು ಢಾಕಾದ ಬಿಜಯ್​ನಗರ್ ಬಳಿ ತಲೆಗೆ ಗುಂಡಿಕ್ಕಿದ್ದರು. ಸಿಂಗಾಪುರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾರೂ ಚಿಕಿತ್ಸೆ ಫಲಕಾರಿಯಾಗದೇ ಆತ ಡಿ. 18ರಂದು ನಿಧನವೊಂದಿದ್ದ. ಅದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ.

ಇದನ್ನೂ ಓದಿ: ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?

ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಚಿತ್ತಾಂಗ್, ಖುಲ್ನಾ ಮತ್ತು ರಾಜಷಾಹಿಯಲ್ಲಿರುವ ಉಪ ರಾಯಭಾರ ಕಚೇರಿಗಳ ಬಳಿ ತೀವ್ರ ಸ್ವರೂಪದಲ್ಲಿ ಪ್ರತಿಭಟನೆಗಳು ನಡೆದಿವೆ. ಬಂದರು ನಗರಿಯಾದ ಚಿತ್ತಗಾಂಗ್​ನ ಭಾರತದ ಉಪರಾಯಭಾರ ಕಚೇರಿಯಲ್ಲಿ ದುರುಳರು ದಾಂದಲೆ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ ಇವತ್ತಿನಿಂದಲೇ ಎಲ್ಲಾ ವೀಸಾ ಸಂಬಂಧಿತ ಕೆಲಸಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಹತ್ಯೆಯಾದ ಷರೀಫ್ ಉಸ್ಮಾನ್ ಹದಿ ಕಳೆದ ವರ್ಷ ಶೇಖ್ ಹಸೀನಾ ವಿರುದ್ಧ ಎದ್ದ ದಂಗೆಯ ರೂವಾರಿ. ಈತನ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಮುಂಬರುವ ಚುನಾವಣೆಯಲ್ಲೂ ಈತ ಸ್ಪರ್ಧಿಸಿದ್ದ. ಈತನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂಬುದು ಅಲ್ಲಿನ ಕೆಲವರ ಆರೋಪ. ಈ ಹತ್ಯೆ ಘಟನೆಯನ್ನು ಪಾಕ್ ಪ್ರಚೋದಿತ ಶಕ್ತಿಗಳು ತಮ್ಮ ದುರುದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಇದೆ. ಹಿಂದೂ ಧರ್ಮೀಯ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಹಲ್ಲೆ ಎಸಗಿ ಬೆಂಕಿಯಿಂದ ಸುಟ್ಟುಹಾಕಿದ ಘಟನೆಯೂ ಸೇರಿದಂತೆ ಭಾರತ ಹಾಗೂ ಹಿಂದೂ ವಿರೋಧಿ ಕೃತ್ಯಗಳು ಪ್ರತಿಭಟನೆಯಲ್ಲಿ ಹೆಚ್ಚಾಗಿ ಜರುಗುತ್ತಿವೆ. ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎನ್ನುವಂತೆ ದುಷ್ಟ ಶಕ್ತಿಗಳು ಬಿಂಬಿಸಲು ಯತ್ನಿಸುತ್ತಿವೆ.

ಇದನ್ನೂ ಓದಿ: ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ

ಹದಿಯ ಅಂತ್ಯ ವಿಧಿ ಕಾರ್ಯಕ್ರಮದಲ್ಲಿ ಸಾವಿರಾರು ಜನರು ನೆರೆದಿದ್ದರು. ಅಲ್ಲಿ ಭಾರತ ವಿರೋಧಿ ಘೋಷಣೆಗಳು ಜೋರಾಗಿ ಮೊಳಗಿವೆ. ಕಾಶ್ಮೀರದಲ್ಲಿ ಉಗ್ರಗಾಮಿಗಳು ಅನುಸರಿಸುತ್ತಿದ್ದ ತಂತ್ರಗಳೇ ಅಲ್ಲಿ ಕಾಣಿಸುತ್ತಿವೆ. ‘ಡೆಲ್ಲಿ ಆರ್ ಢಾಕಾ- ಢಾಕಾ ಢಾಕಾ’ (ಡೆಲ್ಲಿಯೋ ಢಾಕಾವೋ- ಢಾಕಾ ಢಾಕಾ) ಎಂಬಿತ್ಯಾದಿ ಭಾರತ ವಿರೋಧಿ ಘೋಷಣೆಗಳು ಷರೀಫ್ ಉಸ್ಮಾನ್ ಹದಿ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಕೇಳಿವೆ. ಶೇಖ್ ಹಸೀನಾ ನಿರ್ಗಮನದ ಬಳಿಕ ಬಾಂಗ್ಲಾದೇಶದಲ್ಲಿ ಪಾಕಿಸ್ತಾನೀ ಪರ ಶಕ್ತಿಗಳ ಕೈ ಮೇಲಾಗಿರುವುದು ಸ್ಪಷ್ಟವಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Sun, 21 December 25