ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ
Several killed by gunmen attack at South Africa: ಆಫ್ರಿಕಾ ಖಂಡದಲ್ಲೇ ಮುಂದುವರಿದ ದೇಶವೆನಿಸಿರುವ ಸೌತ್ ಆಫ್ರಿಕಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಘಟನೆಗಳು ಹೆಚ್ಚುತ್ತಿವೆ. ಜೋಹಾನ್ಸ್ಬರ್ಗ್ನಿಂದ 40 ಕಿಮೀ ಹೊರಗಿರುವ ಒಂದು ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಆಗಂತುಕ ವ್ಯಕ್ತಿಗಳಿಂದ ಗುಂಡಿ ದಾಳಿಯಾಗಿದೆ. ಈ ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. 10 ಜನರು ಗಾಯಗೊಂಡಿದ್ದಾರೆ.

ಜೋಹಾನ್ಸ್ಬರ್ಗ್, ಡಿಸೆಂಬರ್ 21: ಜಗತ್ತಿನ ವಿವಿಧೆಡೆ ಭಯೋತ್ಪಾದನೆ ಮತ್ತು ಅಪರಾಧ ದಾಳಿಗಳು ಹೆಚ್ಚುತ್ತಲೇ ಇವೆ. ಆಸ್ಟ್ರೇಲಿಯಾದಲ್ಲಿ ಉಗ್ರರು ಸಾರ್ವಜನಿಕರ ಮೇಲೆ ಗುಂಡಿನ ದಾಳಿ ಎಸಗಿದ ಘಟನೆ ಮರೆಯಾಗುವ ಮುನ್ನವೇ ಸೌತ್ ಆಫ್ರಿಕಾದಲ್ಲಿ ಬಂದೂಕುದಾರಿಗಳಿಂದ ಭೀಕರ ದಾಳಿಯಾಗಿದೆ. ಜೋಹಾನ್ಸ್ಬರ್ಗ್ನ ಹೊರವಲಯದ ಚಿನ್ನದ ಗಣಿ ಸಮೀಪ ಇರುವ ಬೆಕ್ಕೆರ್ಸ್ಡನ್ ಟೌನ್ಶಿಪ್ ಬಳಿ ಆಗಂತುಕ ಬಂದೂಕುದಾರಿಗಳು ಸಾರ್ವಜನಿಕರ ಮೇಲೆ ದಾಳಿ (gunmen attack) ಎಸಗಿದ್ದಾರೆ. ಈ ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. ಹತ್ತು ಜನರು ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಬೆಕ್ಕೆರ್ಸ್ಡಲ್ ಬಾರ್ ಮೇಲೆ ದಾಳಿಕೋರರು ನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ಎಸಗಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 1 ಗಂಟೆಯಲ್ಲಿ ಈ ಘಟನೆ ನಡೆದಿದೆ. ಭಾರತೀಯ ಕಾಲಮಾನ ಬೆಳಗ್ಗೆ 4:30ರ ಸಮಯ ಆಗಿರಬಹುದು. ಈ ಗುಂಡಿನ ದಾಳಿಯಲ್ಲಿ ಬಲಿಯಾದ ಒಂಬತ್ತು ಮಂದಿಯಲ್ಲಿ ಮೂವರು ಬಾರ್ನ ಒಳಗೆಯೇ ಅಸು ನೀಗಿದ್ಧಾರೆ. ಇನ್ನುಳಿದವರು ಹೊರಗೆ ತಪ್ಪಿಸಿಕೊಳ್ಳಲು ಹೋಗುವಾಗ ಗುಂಡೇಟು ತಿಂದು ಸತ್ತಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ; ಯೂನಸ್ ಸರ್ಕಾರದಿಂದ 7 ಜನರ ಬಂಧನ
ಬಾರ್ ಮೇಲೆ ದಾಳಿ ನಡೆಸಿದವರು ಎಷ್ಟು ಮಂದಿ ಇದ್ದರು ಎಂಬುದು ಗೊತ್ತಾಗಿಲ್ಲ. ಆದರೆ, ಹೆಚ್ಚಿನವರ ಬಳಿ ಪಿಸ್ತೂಲ್ ಗನ್ಗಳಿದ್ದವು. ಒಬ್ಬನ ಬಳಿ ಎಕೆ-47 ರೈಫಲ್ ಕೂಡ ಇತ್ತು. ಇವರು ಬಾರ್ಗೆ ನುಗ್ಗಿ, ವಿನಾಕಾರಣ ಕಂಡ ಕಂಡವರ ಮೇಲೆ ಗುಂಡಿನ ದಾಳಿ ಎಸಗಿರುವುದು ಗೊತ್ತಾಗಿದೆ.
ಈ ಆಗಂತುಕ ದಾಳಿಕೋರರು ತಮ್ಮ ಗುಂಡೇಟಿನಿಂದ ಸತ್ತಾದ ಜನರಿಂದ ಸೆಲ್ ಫೋನ್ ಇತ್ಯಾದಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಕಾರಣಕ್ಕೆ, ದಾಳಿಕೋರರು ಕ್ರಿಮಿನಲ್ಗಳಾಗಿದ್ದಿರಬಹುದು, ಇದು ಪೂರ್ಣ ಅಪರಾಧ ಕೃತ್ಯವಾಗಿದೆ ಎಂಬುದು ಪೊಲೀಸರ ಆರಂಭಿಕ ಸಂದೇಹವಾಗಿದೆ.
ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ
ಇದೇ ಡಿಸೆಂಬರ್ 6ರಂದು ಸೌತ್ ಆಫ್ರಿಕಾದ ಪ್ರಿಟೋರಿಯಾ ನಗರದ ಬಳಿಯೂ ಪಬ್ವೊಂದರ ಮೇಲೆ ಕ್ರಿಮಿನಲ್ಗಳು ದಾಳಿ ಎಸಗಿ ಹಲವರನ್ನು ಬಲಿಪಡೆದಿದ್ದರು. ಆವತ್ತಿನ ದಾಳಿಯಲ್ಲಿ ಮೂವರು ಮಕ್ಕಳೂ ಬಲಿಯಾಗಿದ್ದರು. ಅವರಲ್ಲಿ ಮೂರು ವರ್ಷದ ಮಗುವೂ ಸೇರಿದೆ. ವಲಸೆ ಕಾರ್ಮಿಕರ ಹಾಸ್ಟೆಲ್ನೊಳಗೆ ಇದ್ದ ಪಬ್ ಮೇಲೆ ಆ ದಾಳಿಯಾಗಿತ್ತು.
ಆಫ್ರಿಕಾ ಖಂಡದಲ್ಲೇ ಹೆಚ್ಚು ಮುಂದುವರಿದ ದೇಶವಾಗಿರುವ ಸೌತ್ ಆಫ್ರಿಕಾದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚುತ್ತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




