ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ
Indian Railways hikes fares from Dec 26th: ಭಾರತೀಯ ರೈಲ್ವೇಸ್ ಜುಲೈ ನಂತರ ಮತ್ತೊಮ್ಮೆ ರೈಲು ಟಿಕೆಟ್ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಜನರಲ್ ಕೋಚ್ಗಳಲ್ಲಿ 215 ಕಿಮೀಗಿಂತ ಹೆಚ್ಚಿನ ದೂರದ ಪ್ರಯಾಣವಾದರೆ ಪ್ರತಿ ಕಿಮೀಗೆ 1 ಪೈಸೆಯಷ್ಟು ಬೆಲೆ ಏರಿಕೆ ಆಗಲಿದೆ. ಎಸಿ ಕೋಚ್ ಮತ್ತು ಮೇಲ್ ಟ್ರೈನ್, ಎಕ್ಸ್ಪ್ರೆಸ್ ಟ್ರೈನ್ಗಳಲ್ಲಿ ಪ್ರತೀ ಕಿಮೀಗೆ 2 ಪೈಸೆಯಷ್ಟು ಟಿಕೆಟ್ ಬೆಲೆ ಏರಲಿದೆ. ಡಿ. 26ರಿಂದ ಪರಿಷ್ಕೃತ ದರ ಜಾರಿಗೆ ಬರುತ್ತದೆ.

ನವದೆಹಲಿ, ಡಿಸೆಂಬರ್ 21: ರೈಲು ಪ್ರಯಾಣ ಮುಂದಿನ ದಿನಗಳಲ್ಲಿ ತುಸು ದುಬಾರಿಯಾಗಲಿದೆ. ರೈಲು ಪ್ರಯಾಣ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ (Indian Railways) ನಿರ್ಧರಿಸಿದೆ. ದೂರ ಪ್ರಯಾಣದ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಸಬರ್ಬನ್ ರೈಲುಗಳ ದರಗಳಲ್ಲಿ ಬದಲಾವಣೆ ಇರುವುದಿಲ್ಲ. ಡಿಸೆಂಬರ್ 26ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ವರದಿ ಪ್ರಕಾರ 215 ಕಿಮೀ ದೂರದವರೆಗಿನ ಜನರಲ್ ಕ್ಲಾಸ್ ಕಂಪಾರ್ಟ್ಮೆಂಟ್ಗಳ ಟಿಕೆಟ್ ಬೆಲೆಗಳಲ್ಲಿ ಬದಲಾವಣೆ ಇರುವುದಿಲ್ಲ. ಅದಕ್ಕೂ ಹೆಚ್ಚಿನ ದೂರದ ಪ್ರಯಾಣವಾದರೆ, 215 ಕಿಮೀ ಮೇಲ್ಪಟ್ಟಿರುವ ಪ್ರತೀ ಒಂದು ಕಿಮೀಗೆ ಒಂದು ಪೈಸೆಯಷ್ಟು ದರ ಏರಿಕೆ ಆಗಲಿದೆ. ಅಂದರೆ ಪ್ರತೀ ನೂರು ಕಿಮೀ ಹೆಚ್ಚುವರಿ ದೂರಕ್ಕೆ ಒಂದು ರೂನಷ್ಟು ಬೆಲೆ ಏರಿಕೆ ಆಗಲಿದೆ. ಇದು ಜನರಲ್ ಕ್ಲಾಸ್ ಟಿಕೆಟ್ಗಳಿಗೆ ಮಾಡಲಾಗಿರುವ ಏರಿಕೆ.
ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರಲ್ಲ: FSSAI ಸ್ಪಷ್ಟನೆ
ಇನ್ನು, ಎಸಿ ಕೋಚ್ಗಳಿಗೆ ಟಿಕೆಟ್ ದರ ಪ್ರತೀ ಕಿಮೀಗೆ ಎರಡು ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಮೇಲ್ ಟ್ರೇನ್ಗಳು ಅಥವಾ ಎಕ್ಸ್ಪ್ರೆಸ್ ಟ್ರೈನುಗಳಲ್ಲಿನ ನಾನ್ ಎಸಿ ಕೋಚ್ಗಳಿಗೂ ಟಿಕೆಟ್ ದರ 2 ಪೈಸೆ ಏರಿಕೆ ಮಾಡಲಾಗಿದೆ. ಈ ಕೋಚ್ಗಳಲ್ಲಿ ಟಿಕೆಟ್ ದರ ಪ್ರತೀ 50 ಕಿಮೀ ದೂರಕ್ಕೆ 1 ಒಂದು ರೂ ಹೆಚ್ಚುವರಿ ದರ ಸೇರ್ಪಡೆಯಾಗುತ್ತದೆ.
ಈ ಪರಿಷ್ಕೃತ ಟಿಕೆಟ್ ದರದ ನಂತರವೂ ಭಾರತದಲ್ಲಿ ರೈಲು ಪ್ರಯಾಣ ಇನ್ನಿತರ ಸಾರಿಗೆ ವ್ಯವಸ್ಥೆಗಿಂತ ಕಡಿಮೆಯೇ ಇರುತ್ತದೆ. ಈ ಅಲ್ಪ ಏರಿಕೆಯಿಂದ ಭಾರತೀಯ ರೈಲ್ವೆಗೆ ವಾರ್ಷಿಕವಾಗಿ 600 ಕೋಟಿ ರೂನಷ್ಟು ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ
ರೈಲ್ವೇಸ್ನ ಹೆಚ್ಚುವರಿ ವೆಚ್ಚ ಸರಿದೂಗಿಸಲು ಟಿಕೆಟ್ ದರ ಏರಿಕೆ
ಭಾರತೀಯ ರೈಲ್ವೇಸ್ ಸಂಸ್ಥೆ ಕಳೆದ ಒಂದು ದಶಕದಲ್ಲಿ ತನ್ನ ಜಾಲವನ್ನು ಸಾಕಷ್ಟು ವಿಸ್ತರಿಸಿದೆ. ಟ್ರೈನುಗಳ ಸಂಖ್ಯೆ ಹೆಚ್ಚಿಸಿದೆ. ಮಾನವ ಸಂಪನ್ಮೂಲಗಳನ್ನೂ ಹೆಚ್ಚಿಸಿದೆ. ಮಾನವ ಸಂಪನ್ಮೂಲ ವೆಚ್ಚ 1,15,000 ಕೋಟಿ ರೂಗೆ ಏರಿದೆ. ಪಿಂಚಣಿ ವೆಚ್ಚ 60,000 ಕೋಟಿ ರೂ ಆಗಿದೆ. 2024-25ರಲ್ಲಿ ಅದರ ಕಾರ್ಯಾಚರಣೆಗಳ ಒಟ್ಟೂ ವೆಚ್ಚ 2.63 ಲಕ್ಷ ಕೋಟಿ ರೂಗೆ ಏರಿದೆ. ಈ ವೆಚ್ಚ ಹೆಚ್ಚಳವನ್ನು ಸರಿದೂಗಿಸಲು ರೈಲ್ವೇಸ್ ಟಿಕೆಟ್ ಪ್ರಯಾಣ ದರವನ್ನು ಏರಿಸುತ್ತಿದೆ. ಜುಲೈ ತಿಂಗಳಲ್ಲೂ ರೈಲ್ವೆ ಟಿಕೆಟ್ ಪ್ರಯಾಣ ದರವನ್ನು ಪರಿಷ್ಕರಿಸಿ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




