Chanakya Niti: ಜೀವನದಲ್ಲಿ ಹಣದ ಕೊರತೆ ಎದುರಾಗಬಾರದೆಂದರೆ ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ
ಆರ್ಥಿಕ ಸಂಕಷ್ಟಗಳು ಯಾವಾಗ, ಹೇಗೆ ಬರುತ್ತದೆ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ನಾವು ಮಾಡುವಂತಹ ಕೆಲವೊಂದು ತಪ್ಪುಗಳೇ ಆರ್ಥಿಕ ಸಂಕಷ್ಟಕ್ಕೆ ಮುಖ್ಯ ಕಾರಣ, ಈ ತಪ್ಪುಗಳನ್ನು ತಿದ್ದಿ ನಡೆದರೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಹಾಗಾದ್ರೆ ಹಣದ ಕೊರತೆ ಎದುರಾಗಬಾರದೆಂದರೆ ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಶ್ರೀಮಂತಿಕೆಯನ್ನು ಗಳಿಸಲು ಏನು ಮಾಡಬೇಕು, ಯಶಸ್ಸು ಗಳಿಸುವುದು ಹೇಗೆ ಎಂಬುದರ ಬಗ್ಗೆ ಹೇಳಿದ್ದಾರೆ. ಹಣ ಗಳಿಕೆ ಮಾತ್ರವಲ್ಲದೆ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಏನು ಮಾಡಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಚಾಣಕ್ಯರು ಹೇಳಿರುವ ಈ ನೀತಿಪಾಠಗಳನ್ನು ನೀವು ಪಾಲಿಸಿದರೆ ಖಂಡಿತವಾಗಿಯೂ ಜೀವನದಲ್ಲಿ ಹಣದ ಕೊರತೆ ಬಾರದಂತೆ, ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಬಹುದು.
ಹಣದ ಕೊರತೆ ಎದುರಾಗಬಾರದೆಂದರೆ ಏನು ಮಾಡಬೇಕು?
ಹಣ ಗಳಿಕೆಯ ಮಾರ್ಗ ಪ್ರಾಮಾಣಿಕವಾಗಿರಲಿ: ಅನ್ಯಾಯದ ಮಾರ್ಗ, ವಂಚನೆ ಅಥವಾ ಇತರರಿಗೆ ನೋವು ಕೊಟ್ಟು ಗಳಿಸಿದ ಹಣ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ಸಂಪತ್ತು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸಬಹುದು. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಗಳಿಸಿದ ಹಣ ಮಾತ್ರ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಕೆಟ್ಟ ಸಮಯಕ್ಕಾಗಿ ಹಣವನ್ನು ಉಳಿಸಿ: ಸಂಕಷ್ಟಗಳು ಯಾವ ಸಂದರ್ಭದಲ್ಲಿ ಬರುತ್ತದೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಮತ್ತು ತುರ್ತು ಸಂದರ್ಭಗಳಿಗಾಗಿ ಆದಾಯದ ಸ್ವಲ್ಪ ಭಾಗವನ್ನು ಉಳಿಸಬೇಕು. ಗಳಿಸಿದ ಎಲ್ಲಾ ಹಣವನ್ನು ಖರ್ಚು ಮಾಡುವ ವ್ಯಕ್ತಿಯು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವಾಗಲೂ ಸಂಪಾದನೆಯ ಒಂದು ಭಾಗವನ್ನು ಕಷ್ಟದ ಸಂದರ್ಭಗಳಿಗಾಗಿ ಉಳಿಸಿ.
ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳಬೇಡಿ: ನೀವು ಹೊಸ ಉದ್ಯಮವನ್ನು ಪ್ರಾರಂಭಿಸುವ ಯೋಜನೆಯಲ್ಲಿದ್ದರೆ ಅಥವಾ ಹಣ ಹೂಡಿಕೆ ಮಾಡಲು ಹೊರಟಿದ್ದರೆ, ಅದರ ಬಗ್ಗೆ ಎಲ್ಲರಿಗೂ ಹೇಳಬೇಡಿ. ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡುವುದರಿಂದ ಎದುರಾಗುವ ಎಲ್ಲಾ ರೀತಿಯ ಅಪಾಯಗಳನ್ನು ತಡೆ ಹಿಡಯಬಹುದು ಮತ್ತು ಇದರಿಂದ ಆರ್ಥಿಕ ತೊಂದರೆಗಳೂ ಎದುರಾಗುವುದಿಲ್ಲ.
ಇದನ್ನೂ ಓದಿ: ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಚಾಣಕ್ಯರ ಈ ತತ್ವಗಳನ್ನು ಅನುಸರಿಸಿ
ಹಣ ಮತ್ತು ದಾನದ ಸರಿಯಾದ ಬಳಕೆ: ಗಳಿಸಿದ ಹಣವನ್ನು ಕೂಡಿಟ್ಟರೆ ಅದರ ಮೌಲ್ಯ ಕಡಿಮೆಯಾಗುತ್ತದೆ. ಹಾಗಾಗಿ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು ಕಲಿಯಬೇಕು. ಇದರಿಂದ ಗಳಿಸಿದ ಹಣವು ದುಪ್ಪಟ್ಟಾಗುತ್ತದೆ. ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯ ಮಾಡಿ, ನಿಮ್ಮ ಸಾಮರ್ಥ್ಯಕ್ಕೂ ಮೀರಿ ಯಾರಿಗೂ ದಾನ ಮಾಡಬೇಡಿ ಇದರಿಂದ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಚಾಣಕ್ಯರು ಹೇಳಿದ್ದಾರೆ.
ಸೋಮಾರಿತನ ಬಿಟ್ಟು ಕಷ್ಟಪಟ್ಟು ಕೆಲಸ ಮಾಡಿ: ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವ ಸೋಮಾರಿ ವ್ಯಕ್ತಿಯ ಬಳಿ ಎಂದಿಗೂ ಹಣ ಉಳಿಯುವುದಿಲ್ಲ. ಯಶಸ್ಸು ಮತ್ತು ಸಂಪತ್ತಿಗೆ ಶಿಸ್ತು ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ. ಹಾಗಾಗಿ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನೀವು ಆರ್ಥಿಕವಾಗಿ ಸ್ಥಿತಿವಂತತರಾಗುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
