ಅಮೆರಿಕದಲ್ಲಿ ಅನಿಲ್ ಕುಂಬ್ಳೆಗೆ ವಿಶೇಷ ಗೌರವ; 2028ರ ಒಲಿಂಪಿಕ್ಸ್ ಕ್ರಿಕೆಟ್ ಬಗ್ಗೆಯೂ ಚರ್ಚೆ
ಅನಿಲ್ ಕುಂಬ್ಳೆ ಅವರಿಗೆ ಅಮೆರಿಕದಲ್ಲಿ ವಿಶೇಷ ಗೌರವ ನೀಡಲಾಗಿದೆ. ಕ್ಯಾಲಿಫೋರ್ನಿಯಾದ ಸದರ್ನ್ ಕ್ಯಾಲಿಫೋರ್ನಿಯಾ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಯುಎಸ್ನಲ್ಲಿ ಕ್ರಿಕೆಟ್ ಬೆಳವಣಿಗೆಯನ್ನು ಶ್ಲಾಘಿಸಿದರು. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ 128 ವರ್ಷಗಳ ಬಳಿಕ ಕ್ರಿಕೆಟ್ ಮರಳುತ್ತಿದ್ದು, ಇದು ಅಮೆರಿಕದಲ್ಲಿ ಆಟದ ಜನಪ್ರಿಯತೆಗೆ ಮತ್ತಷ್ಟು ಉತ್ತೇಜನ ನೀಡಲಿದೆ.

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಅನಿಲ್ ಕುಂಬ್ಳೆ ಅವರಿಗೆ ಅಮೆರಿಕದಲ್ಲಿ ವಿಶೇಷ ಗೌರವ ನೀಡಲಾಗಿದೆ. ಕ್ಯಾಲಿಫೋರ್ನಿಯಾದ ಮಾಂಟೆಬೆಲ್ಲೊದಲ್ಲಿ ನಡೆದ ಸದರ್ನ್ ಕ್ಯಾಲಿಫೋರ್ನಿಯಾ ಕ್ರಿಕೆಟ್ ಅಸೋಸಿಯೇಷನ್ನ 82ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲಾಸ್ ಏಂಜಲೀಸ್ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಾ. ಕೆ.ಜೆ. ಶ್ರೀನಿವಾಸ ಕೂಡ ಈ ಕಾರ್ಯಕ್ರಮದಲ್ಲಿ ಕುಂಬ್ಳೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಸ್ಥಳೀಯ ಕ್ರಿಕೆಟಿಗರು, ತಂಡಗಳು ಹಾಗೂ ಕ್ರಿಕೆಟ್ ಬೆಳವಣಿಗೆಗೆ ಶ್ರಮಿಸಿದ ಸ್ವಯಂಸೇವಕರ ಸಾಧನೆಯನ್ನು ಗುರುತಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಕ್ರಿಕೆಟ್ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಈ ಸಮಾರಂಭದಲ್ಲಿ ಸಂಭ್ರಮಿಸಲಾಯಿತು. ದಕ್ಷಿಣ ಕ್ಯಾಲಿಫೋರ್ನಿಯಾದ ವಿವಿಧ ಭಾಗಗಳಿಂದ ಕ್ರಿಕೆಟ್ ಅಭಿಮಾನಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದರು.
ಕ್ರಿಕೆಟ್ ಅಭಿವೃದ್ಧಿಗೆ ವಿಶೇಷ ಯೋಜನೆಗೆ ಕರೆ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತದ ಕಾನ್ಸುಲ್ ಜನರಲ್ ಡಾ. ಕೆ.ಜೆ. ಶ್ರೀನಿವಾಸ, ಅಮೆರಿಕದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು. ಕ್ರಿಕೆಟ್ ಆಟಗಾರರಲ್ಲಿ ಶಿಸ್ತು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಇಂತಹ ಯೋಜನೆ ಸಹಕಾರಿಯಾಗಲಿದೆ. ಕ್ರಿಕೆಟ್ ಆಟದ ಮೂಲ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಯ ಆಟಗಾರರನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಕುರಿತು ಲಾಸ್ ಏಂಜಲೀಸ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಅನಿಲ್ ಕುಂಬ್ಳೆ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಕ್ರಿಕೆಟಿಗರ ಸಾಧನೆ ಹಾಗೂ ಅಮೆರಿಕದಲ್ಲಿ ಕ್ರಿಕೆಟ್ ಬೆಳೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದೆ.
Celebrating #Cricket in #SoCal, CG @drkjsrini joined legendary Indian cricketer Anil Kumble at the 82nd Annual Awards Banquet of the Southern California Cricket Association #SCCA at Montebello, California as the Guest of Honor. The evening celebrated the achievements of local cricketers, teams and volunteers, and the growing popularity of cricket in the US, bringing together cricket enthusiasts from across #SouthernCalifornia to promote cricket in USA. CG called for a dedicated cricket development program inculcating discipline, resilience and leadership in the finest traditions of the game. Cricket will be back in Los Angeles 2028 Olympic Games after a hiatus of over 128 years.
@MEAIndia @IndianEmbassyUS @IndianDiplomacy @anilkumble1074 @SCCACricket1935 @usacricket @usacricketers @ICC @diaspora_india @PIB_India @BCCI @LA28 @nithyavraman @LACity
#SCCA #Cricket #AnilKumble #IndianDiaspora #SportsDiplomacy #IndiaUS #IndiaInLA #LA28
— India in Los Angeles (@CGILosAngeles) November 29, 2026
128 ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್ ಎಂಟ್ರಿ
ಇನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತೆ ಸ್ಥಾನ ಪಡೆಯಲಿದೆ. ಬರೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. 1900ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಆಡಿಸಲಾಗಿತ್ತು. ಇದೀಗ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಪುರುಷರು ಮತ್ತು ಮಹಿಳೆಯರ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
IND vs SA: ‘ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು’; ಗಂಭೀರ್ ತಂತ್ರವನ್ನು ಪ್ರಶ್ನಿಸಿದ ಕುಂಬ್ಳೆ
2 ವಿಭಾಗದಲ್ಲಿ ತಲಾ 6 ತಂಡಗಳು
ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಆರು ತಂಡಗಳು ಕಣಕ್ಕಿಳಿಯಲಿವೆ. ಪ್ರತಿ ತಂಡದಲ್ಲಿ ಗರಿಷ್ಠ 15 ಆಟಗಾರರಿಗೆ ಅವಕಾಶ ಸಿಗಲಿದೆ. ಎರಡೂ ವಿಭಾಗಗಳಿಗೆ ತಲಾ 90 ಆಟಗಾರರ ಕೋಟಾ ನಿಗದಿಪಡಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ಪಂದ್ಯಾವಳಿಗಳನ್ನು ಸೇರಿಸಿ ಒಟ್ಟು 28 ಪಂದ್ಯಗಳು ನಡೆಯಲಿವೆ. ಹೀಗೆ 128 ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್ ಮರಳುತ್ತಿರುವುದು ವಿಶ್ವದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.




