ಎಲ್ಲಿತ್ತು ಸನಾತನ ಧರ್ಮ? 2029ಕ್ಕೆ ರಾಹುಲ್ ಗಾಂಧಿಯವರೇ ಪ್ರಧಾನಿಯಾಗುತ್ತಾರೆ, ಬರೆದಿಟ್ಟುಕೊಳ್ಳಿ ಎಂದ ಸಚಿವ ವಿಜಯಾನಂದ ಕಾಶಪ್ಪನವರ್
ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಸನಾತನ ಧರ್ಮ, ವೀರ ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆ ಮಸೂದೆ ವಿರೋಧಿಸಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗಬಾರದು ಎಂದಿರುವ ಅವರು, 2029ಕ್ಕೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಬಾಗಲಕೋಟೆ, ನ.29: ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಭಾನುವಾರ (ನವೆಂಬರ್ 29) ನೀಡಿರುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದಕ್ಕೆ ಕಿಡಿ ಹೊತ್ತಿಸಿವೆ. ಸನಾತನ ಧರ್ಮ ಹಾಗೂ ವೀರ ಸಾವರ್ಕರ್ ಕುರಿತು ತೀವ್ರ ಆಕ್ಷೇಪಾರ್ಹ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿರುವ ಅವರು, ನಾಳೆ ಸಂಸತ್ನಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಯ ವಿರುದ್ಧವೂ ಕಿಡಿಕಾರಿದ್ದಾರೆ.
“ಎಲ್ಲಿತ್ತು ಈ ಸನಾತನ ಧರ್ಮ? ಸನಾತನ ಧರ್ಮವಂತೆ ಎಲ್ಲಿತ್ತು? ಏನು ಆಧಾರ ಇದೆ ಈ ಧರ್ಮಕ್ಕೆ? ಏನೂ ಆಧಾರವಿಲ್ಲ” ಎಂದು ಸಚಿವರು ಪ್ರಶ್ನಿಸಿದ್ದಾರೆ. ನಾವು ಬಸವಣ್ಣನವರ ಬಗ್ಗೆ ಹೇಳಿದರೆ ಅವರು ಸಾವರ್ಕರ್ ಬಗ್ಗೆ ಹೇಳ್ತಾರೆ. ಸಾವರ್ಕರ್ ಏನು ಮಾಡಿದ್ದಾನೆ? ಬ್ರಿಟಿಷರ ಬೂಟು ನೆಕ್ಕಿದ್ದಾನೆ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾನೆ. ಇದಕ್ಕೆ ಇತಿಹಾಸವಿದೆ ಹಾಗೂ ಇದು ಸತ್ಯ” ಎಂದು ಕಾಶಪ್ಪನವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಸುಮ್ಮನೆ ಬೊಗಳೋದು, ಬೆಂಕಿ ಹಚ್ಚುವುದು, ಜಗಳ ಹಚ್ಚುವುದು ಮತ್ತು ದೇಶ ಒಡೆಯುವುದೇ ಇವರ ಕೆಲಸ. ಆದರೆ ನಾವು ಕೂಡಲಸಂಗಮದಿಂದ ‘ಬಸವ ಭೀಮ ಸಂಗಮ’ ಕಾರ್ಯಕ್ರಮವನ್ನು ಆರಂಭ ಮಾಡಿದ್ದೇವೆ. ಜನರ ಮನಸ್ಸನ್ನು ಪರಿವರ್ತನೆ ಮಾಡುವುದು ಮತ್ತು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ” ಎಂದರು.
ಇದನ್ನೂ ಓದಿ: ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸ್ವಾಗತಿಸಿದ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕಿಡಿ; “2029ಕ್ಕೆ ರಾಹುಲ್ ಗಾಂಧಿಯವರೇ ಪ್ರಧಾನಿ”
ನಾಳೆ ಸಂಸತ್ನಲ್ಲಿ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಮಸೂದೆ ಮಂಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕಾಶಪ್ಪನವರ್, ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಹಾಗೂ ನಮಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿಯೇ ನಾವು ಕಳೆದ ಬಾರಿ ಸಂಸತ್ನಲ್ಲಿ ಈ ಬಿಲ್ ಅನ್ನು ವಿರೋಧಿಸಿದ್ದೆವು. ಮತಕ್ಷೇತ್ರ ವಿಂಗಡಣೆ ಮಾಡಿ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. “ಕೇಂದ್ರ ಸರ್ಕಾರ ಯಾವುದೇ ಮಸೂದೆ ತರಲಿ, ಯಾವುದೇ ಮಾನದಂಡ ತರಲಿ ಇವ್ಯಾವೂ ನಡೆಯುವುದಿಲ್ಲ. ನಮ್ಮ ನಾಯಕರಾದ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೇ ಭವಿಷ್ಯದ ಪ್ರಧಾನಿಗಳು. 2029ಕ್ಕೆ ಅವರೇ ಪ್ರಧಾನಿಯಾಗುತ್ತಾರೆ, ಬರೆದಿಟ್ಟುಕೊಳ್ಳಿ” ಎಂದು ವಿಜಯಾನಂದ ಕಾಶಪ್ಪನವರ್ ಭವಿಷ್ಯ ನುಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Sun, 29 November 26




