
ಢಾಕಾ, ಡಿಸೆಂಬರ್ 21: ಷರೀಫ್ ಉಸ್ಮಾನ್ ಹದಿ ಹತ್ಯೆ ಬಳಿಕ ಬಾಂಗ್ಲಾದೇಶದಾದ್ಯಂತ ಉದ್ಭವಿಸಿರುವ ಹಿಂಸಾಚಾರ ಹಲವರನ್ನು ಬಲಿತೆಗೆದುಕೊಂಡಿದೆ. ಪ್ರತಿಭಟನಾಕಾರರ ಗುಂಪೊಂದು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಮುಖಂಡ ಬಿಲಾನ್ ಹುಸೇನ್ (Belal Hossain) ಅವರ ಮನೆಗೆ ಕೊಳ್ಳಿ ಇಟ್ಟಿದ್ದಾರೆ. ಲಕ್ಷ್ಮೀಪುರ್ನಲ್ಲಿರುವ ಅವರ ಮನೆಗೆ ಬೆಂಕಿ ಇಟ್ಟ ಪರಿಣಾಮ, ಮನೆಯೊಳಗಿದ್ದ 7 ವರ್ಷದ ಬಾಲಕಿಯೊಬ್ಬಳು ಸಜೀವವಾಗಿ ಸುಟ್ಟುಹೋಗಿದ್ದಾಳೆ. ಬಿಲಾಲ್ ಹುಸೇನ್ ಹಾಗೂ ಅವರ ಇನ್ನಿಬ್ಬರು ಮಕ್ಕಳು ಪಾರಾದರೂ ಸುಟ್ಟ ಗಾಯಗಳಾಗಿವೆ.
ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಬಿಎನ್ಪಿ ಪಕ್ಷದ ನಾಯಕ ಬಿಲಾನ್ ಹುಸೇನ್ ಅವರ ಕುಟುಂಬ ಸದಸ್ಯರು ಮನೆಯೊಳಗೆ ಇರುವಾಗಲೇ ಪ್ರತಿಭಟನಾಕಾರರು ಮನೆಗೆ ಬೆಂಕಿ ಇಟ್ಟಿದ್ದಾರೆ. ಬಿಲಾಲ್ ಅವರ ಏಳು ವರ್ಷದ ಮಗಳಾದ ಆಯೇಶಾ ಅಖ್ತರ್ ಸುಟ್ಟ ಗಾಯಗಳಿಂದ ಅಸುನೀಗಿದ್ದಾಳೆ. ಬಿಲಾಲ್ ಅದೃಷ್ಟ ರೀತಿಯಲ್ಲಿ ಬದುಕುಳಿದಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ
‘ಒಂದು ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಮೂವರನ್ನು ರಕ್ಷಿಸಲಾಗಿದೆ. ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಲಕ್ಷ್ಮೀಪುರ್ನ ಫೈರ್ ಸರ್ವಿಸ್ನ ರಜಿಂತ್ ಕುಮಾರ್ ಹೇಳಿದ್ದಾರೆ.
ಬಿಲಾಲ್ ಹುಸೇನ್ ಅವರು ಬದುಕುಳಿದಿದ್ದಾರೆ. ಅವರ ಜೊತೆ ಅವರ ಇಬ್ಬರು ಹೆಣ್ಮಕ್ಕಳಾದ 16 ವರ್ದ ಸಲ್ಮಾ ಅಖ್ತರ್ ಮತ್ತು 14 ವರ್ಷದ ಸಾಮಿಯಾ ಅಖ್ತರ್ ಅವರೂ ಬದುಕಿದ್ದಾರೆ. ಆದರೆ ಈ ಇಬ್ಬರು ಹೆಣ್ಮಕ್ಕಳಿಗೆ ತೀವ್ರ ರೀತಿಯಲ್ಲಿ ಸುಟ್ಟಗಾಯಗಳಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?
ಬಿಲಾನ್ ಹುಸೇನ್ ಅವರ ತಾಯಿ ನೀಡಿರುವ ಹೇಳಿಕೆ ಪ್ರಕಾರ, ದುಷ್ಕರ್ಮಿಗಳು ಮನೆಗೆ ಹೊರಗಿನಿಂದ ಬೀಗ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿದ್ದಾರೆ.
ಶೇಖ್ ಹಸೀನಾ ಪ್ರಧಾನಿಯಾಗಿದ್ದಾಗ ದೇಶಾದ್ಯಂತ ಹಿಂಸಾಚಾರ ಹೊತ್ತಿಸಿದ್ದ ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹದಿಯ ಮೇಲೆ ಆಗಂತುಕರು ಇತ್ತೀಚೆಗೆ ಗುಂಡಿನ ದಾಳಿ ಮಾಡಿದ್ದರು. ತಲೆಗೆ ಗುಂಡು ತಗುಲಿ ಗಾಯಗೊಂಡು ಆತ ಸಾವನ್ನಪ್ಪಿದ್ದಾನೆ. ಅದಾದ ಬಳಿಕ ದೇಶದಾದ್ಯಂತ ಹಿಂಸಾಚಾರಗಳು ಸಂಭವಿಸುತ್ತಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ