
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೈಡನ್ ಆಯ್ಕೆಯಾಗಿರುವ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಬೈಡನ್ 284 ಮತ ಗಳಿಸಿದರೆ, ಪುನರಾಯ್ಕೆ ಬಯಸಿದ್ದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 214 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮ್ಯಾಜಿಕ್ ನಂಬರ್‌ಗಿಂತ 270ಕ್ಕಿಂತ 14 ಹೆಚ್ಚು ಮತಗಳನ್ನು ಬೈಡನ್ ಪಡೆದಿದ್ದಾರೆ.
ಬೈಡನ್ ಗೆಲುವನ್ನು ಅಧಿಕಾರಿಗಳ ವರ್ಗ ಒಪ್ಪಿಕೊಂಡಿದೆ. ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆಯೇ, ಬೈಡನ್ಗೆ ಅಮೇರಿಕಾದ ಸೀಕ್ರೆಟ್ ಸರ್ವಿಸ್ ಭದ್ರತೆಯನ್ನು ಹೆಚ್ಚಿಸಿದೆ. ಅವರ ನಿವಾಸದ ಮೇಲೆ ವಿಮಾನ ಸಂಚಾರವನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಶನ್ ನಿಷೇಧಿಸಿದೆ.
ಬೈಡೆನ್ ಜಯಭೇರಿಯ ನಂತರ ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗುವುದು ಖಚಿತವಾಗಿದೆ. ಅವರು ಭಾರತದ ತಮಿಳುನಾಡು ಮೂಲದವರು. ಕಮಲಾ ಗೆಲುವಿಗಾಗಿ ಅವರ ಹುಟ್ಟಿದೂರು ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ಹೋಮ, ಹವನ, ಮತ್ತು ಪೂಜೆಗಳನ್ನು ಆಯೋಜಿಸಲಾಗಿತ್ತು.
ತಮ್ಮ ಗೆಲುವಿನ ಬಗ್ಗೆ ಘೋಷಣೆಯಾಗುತ್ತಲೇ ಬೈಡೆನ್ ಟ್ವೀಟ್ ಮೂಲಕ ಅಮೆರಿಕನ್ ಮತದಾರರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ.