ಸಿಂಗಾಪೂರದ ಮಾದಕವಸ್ತು ವಿರೋಧಿ ದಳವು ಸೋಮವಾರದಂದು ನೀಡಿದ ಹೇಳಿಕೆ ಪ್ರಕಾರ, ಕಳೆದ ವಾರ ಭಾರೀ ಕಾರ್ಯಾಚರಣೆಯನ್ನು ನಡೆಸಿ, ಕಳೆದ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದಹಾಗೆ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಸಿಂಗಾಪೂರದಲ್ಲಿ ಕಠಿಣ ಕಾನೂನುಗಳು ಇದ್ದು, ಗರಿಷ್ಠ ಪ್ರಮಾಣ ಅಂದರೆ, ಮರಣದಂಡನೆ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಕೇಂದ್ರೀಯ ಮಾದಕವಸ್ತು ದಳವು 23.7 ಕೇಜಿ ಗಾಂಜಾ ಮತ್ತು 16.5 ಕೇಜಿ ಹೆರಾಯಿನ್ ವಶಪಡಿಸಿಕೊಂಡಿದೆ. ಅದರ ಜತೆಗೆ ಕ್ರಿಸ್ಟಲ್ ಮೆಟಂಫೆಟಮೈನ್ ಮತ್ತು ಎಕಸ್ಟಸಿ ಮಾತ್ರೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
1996ರ ನಂತರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಮತ್ತು 2001ರ ನಂತರ ಈ ಪ್ರಮಾಣದ ಹೆರಾಯಿನ್ ವಶಕ್ಕೆ ಪಡೆದಿರಲಿಲ್ಲ. ತನಿಖಾ ದಳದ ಮಾಹಿತಿಯ ಪ್ರಕಾರ, ಈ ಡ್ರಗ್ಸ್ಗಳ ಮೌಲ್ಯ 17 ಲಕ್ಷ ಅಮೆರಿಕನ್ ಡಾಲರ್ಗೂ ಹೆಚ್ಚಾಗುತ್ತದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 12 ಕೋಟಿಗೂ ಹೆಚ್ಚಾಗುತ್ತದೆ. ಮಾದಕವಸ್ತು ಸಾಗಣೆಯ ಶಂಕಿತ ಆರೋಪಿಯಾದ 22 ವರ್ಷದ ಮಲೇಷ್ಯನ್ ಪ್ರಜೆಯನ್ನು ಈ ಪ್ರಕರಣದ ಸಂಬಂಧ ಕಳೆದ ಶುಕ್ರವಾರದಂದು ಅಧಿಕಾರಿಗಳು ಬಂಧಿಸಿದ್ದಾರೆ.
ಶ್ರೀಮಂತ ನಗರವಾದ ಸಿಂಗಾಪೂರದಲ್ಲಿ ಮಾದಕವಸ್ತು ಪದಾರ್ಥಗಳ ಸಾಗಣೆ ಅಪರಾಧಕ್ಕೆ ಗಂಭೀರವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸುದೀರ್ಘಾವಧಿ ಜೈಲು ಶಿಕ್ಷೆಯೂ ಸೇರಿ, ಕೆಲವು ಪ್ರಕರಣದಲ್ಲಿ ಮರಣದಂಡನೆ ವಿಧಿಸಿದಂತೆ ಉದಾಹರಣೆಗಳು ಸಹ ಸಿಗುತ್ತವೆ. ಕಳೆದ ಒಂದು ದಶಕದಲ್ಲಿ ಹತ್ತಾರು ವಿದೇಶೀಯರೂ ಸೇರಿದಂತೆ ನೂರಾರು ಮಂದಿಯನ್ನು ಮಾದಕವಸ್ತುಗಳ ಸಾಗಣೆ ಆರೋಪದಲ್ಲೇ ನೇಣಿಗೆ ಏರಿಸಲಾಗಿದೆ. 500 ಗ್ರಾಮ್ಗಿಂತ ಹೆಚ್ಚಿನ ಗಾಂಜಾವನ್ನು ಸಾಗಿಸಿದರೆ ಸಿಂಗಾಪೂರದಲ್ಲಿ ಮರಣದಂಡನೆ ವಿಧಿಸಲಾಗುತ್ತದೆ.
ಇದನ್ನೂ ಓದಿ: 130 ಕೋಟಿ ವಂಚಿಸಿದ್ದ ವಜ್ರದ ಸ್ಮಗ್ಲರ್ ಮುಂಬೈ ಪೊಲೀಸರ ಕಣ್ತಪ್ಪಿಸಿದ್ದು ಅದೇಷ್ಟು ವರ್ಷ ಗೊತ್ತಾ?
(Singapore said, it seized biggest cannabis since 25 years)