ಇಡೀ ಜಗತ್ತು ಕೊರೊನಾದ ಆರ್ಭಟದಿಂದ ನಲುಗಿ ಹೋಗಿದ್ದರೆ ಇತ್ತ ಬ್ರಿಟಿಷ್ ವಿಜ್ಞಾನಿಗಳು ವೈರಸ್ನ ಬಗ್ಗುಬಡಿಯಲು ಕೊರೊನಾ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹೌದು, ಆರೋಗ್ಯವಂತ ವ್ಯಕ್ತಿಗಳಿಗೆ ಮೊದಲು ಕೊರೊನಾ ಸೋಂಕು ತಗುಲಿಸಿ ನಂತರ ಅವರ ಮೇಲೆ ಲಸಿಕೆ ಪ್ರಯೋಗ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ.
Human Challenge Covid Trial: ಜಗತ್ತಿನಲ್ಲಿ, ಇದೇ ಮೊದಲ ಬಾರಿ ಇಂಥ ಪ್ರಯತ್ನ ನಡೆಯುತ್ತಿದೆ. ಅಂದ ಹಾಗೆ, ಈ ಸೋಂಕು ತಗುಲಿಸಿ ಚಿಕಿತ್ಸೆ ಲಸಿಕೆ ಪರೀಕ್ಷೆ ನಡೆಸುವ ಪ್ರಯೋಗ ಜನವರಿಯಿಂದ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರ ಅಂಗವಾಗಿ, ಪ್ರಯೋಗಕ್ಕೆ ಒಳಗಾಗುವ ವ್ಯಕ್ತಿಗಳ ಮೂಗಿನೊಳಗೆ ವೈರಸ್ ಹರಿಯ ಬಿಡಲಾಗುತ್ತದೆ. ಬಳಿಕ, ಸೋಂಕಿತರನ್ನು ಲಂಡನ್‌ನ ರಾಯಲ್ ಫ್ರೀ ಹಾಸ್ಪಿಟಲ್‌ನಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಜೊತೆಗೆ, ನಿತ್ಯವೂ ಕೆಲವು ಗಂಟೆಗಳ ಅಂತರದಲ್ಲಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಇದೇ ರೀತಿ, ಎರಡರಿಂದ ಮೂರು ವಾರಗಳವರೆಗೂ ಪರೀಕ್ಷೆ ಮುಂದುವರಿಸಲಾಗುತ್ತದೆ. ಬಳಿಕ ಲಸಿಕೆ ಬೀರುವ ಪರಿಣಾಮ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಈ ‘ಹ್ಯೂಮನ್ ಚಾಲೆಂಜ್ ಟ್ರಯಲ್’ ಬಗ್ಗೆ ಅಮೇರಿಕಾ ಆತಂಕ ವ್ಯಕ್ತಪಡಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಪ್ರಯೋಗ ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ.