ಒಟ್ಟಾವಾ ಜೂನ್ 01: ಈತನ ಹೆಸರು ರಾಬರ್ಟ್ “ವಿಲ್ಲೀ” ಪಿಕ್ಟನ್ (Robert “Willie” Pickton,). ಕೆನಡಾದ(Canada) ಸೀರಿಯಲ್ ಕಿಲ್ಲರ್ ತನ್ನ ಘೋರ ಅಪರಾಧಗಳಿಗೆ ಕುಖ್ಯಾತನಾಗಿದ್ದು, ಜೈಲಿನಲ್ಲಿ ನಡೆದ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ. ದಿ ಕರೆಕ್ಷನಲ್ ಸರ್ವೀಸ್ ಆಫ್ ಕೆನಡಾ 71ರ ಹರೆಯದ ರಾಬರ್ಟ್ ಸಾವನ್ನು ದೃಢಪಡಿಸಿದೆ. ಮೇ 19 ರಂದು ಕ್ವಿಬೆಕ್‌ನ ಪೋರ್ಟ್-ಕಾರ್ಟಿಯರ್ ಸಂಸ್ಥೆಯಲ್ಲಿ ಈ ದಾಳಿ ಸಂಭವಿಸಿದೆ ಎಂದು ಅದು ಹೇಳಿದೆ. ರಾಬರ್ಟ್ ಪಿಕ್ಟನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. 26 ಮಹಿಳೆಯರ ಕೊಲೆಗಳಿಗೆ ಸಂಬಂಧಿಸಿದಂತೆ ಆತನ ಮೇಲೆ ಆರೋಪ ಹೊರಿಸಲಾಯಿತು. 2007 ರಲ್ಲಿ ಈತನಿಗೆ ಶಿಕ್ಷೆ ವಿಧಿಸಲಾಯಿತು.
ವ್ಯಾಂಕೋವರ್‌ನ ಪೋರ್ಟ್ ಕೊಕ್ವಿಟ್ಲಾಮ್‌ನ ಹಂದಿ ಸಾಕಣೆದಾರ ರಾಬರ್ಟ್ ಪಿಕ್ಟನ್ನ್ನು, ಎರಡು ದಶಕಗಳ ಕಾಲ ತನಿಖೆಗೆ ಒಳಪಡಿಸಲಾಗಿತ್ತು. ಹತ್ಯೆಗೀಡಾದವರಲ್ಲಿ ಹೆಚ್ಚಾಗಿ ವೇಶ್ಯೆಯರು ಮತ್ತು ಮಾದಕ ವ್ಯಸನಿಗಳು ಆಗಿದ್ದರು. 1980 ಮತ್ತು 2001 ರ ನಡುವೆ ವ್ಯಾಂಕೋವರ್‌ನ ಡೌನ್‌ಟೌನ್ ಈಸ್ಟ್‌ಸೈಡ್ ನೆರೆಹೊರೆಯಿಂದ ಕಣ್ಮರೆಯಾದ ಸುಮಾರು 70 ಮಹಿಳೆಯರಲ್ಲಿ ಮೋನಾ ವಿಲ್ಸನ್, ಸೆರೆನಾ ಅಬೋಟ್ಸ್‌ವೇ, ಮಾರ್ನಿ ಫ್ರೇ, ಬ್ರೆಂಡಾ ವೋಲ್ಫ್, ಆಂಡ್ರಿಯಾ ಜೋಸ್‌ಬರಿ ಮತ್ತು ಜಾರ್ಜಿನಾ ಪಾಪಿನ್ ಸೇರಿದ್ದಾರೆ.
ಈ ಮಹಿಳೆಯರು ರಾಬರ್ಟ್ ಪಿಕ್ಟನ್‌ನ ಕೆಟ್ಟ ತಂತ್ರಗಳಿಗೆ ಬಲಿಯಾದರು. ಅವರಿಗೆ ಹಣ ಮತ್ತು ಮಾದಕ ವಸ್ತುಗಳನ್ನು ನೀಡುವುದಾಗಿ ಸುಳ್ಳು ಭರವಸೆ ನೀಡಿ ಪಿಕ್ಟನ್ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದ. 2008 ರ ಗಾರ್ಡಿಯನ್ ವರದಿಯ ಪ್ರಕಾರ, ಅವನ ಫಾರ್ಮ್ ನಲ್ಲಿ ಹುಡುಕಾಟ ನಡೆಸಿದಾಗ ಆತ ಕೊಂದ 49 ಮಹಿಳೆಯರಲ್ಲಿ 33 ಮಹಿಳೆಯರ ಅವಶೇಷಗಳು ಅಥವಾ ಡಿಎನ್‌ಎ ಪತ್ತೆಯಾಗಿತ್ತು. ತನಿಖಾಧಿಕಾರಿಗಳಿಗೆ ಆತನ ಜಮೀನಿನಲ್ಲಿ ತಲೆಬುರುಡೆಗಳು ಮತ್ತು ಪಾದಗಳು ಸೇರಿದಂತೆ ಮಾನವ ಅವಶೇಷಗಳನ್ನು ಪತ್ತೆಯಾಗಿತ್ತು. ಆತ ಮಹಿಳೆಯರನ್ನು ಹತ್ಯೆ ಮಾಡಿ ರಾತ್ರಿ ಹೊತ್ತು ಮೃತದೇಹಗಳನ್ನು ಕತ್ತರಿಸುತ್ತಿದ್ದ ಎಂದು ಸಾಕ್ಷಿಗಳು ಹೇಳಿದ್ದಾರೆ.
ಆತನ ವಿಚಾರಣೆಯ ಸಮಯದಲ್ಲಿ ಮತ್ತಷ್ಟು ಭಯಾನಕ ವಿವರಗಳು ಹೊರಬಂದವು. ರಾಬರ್ಟ್ ಪಿಕ್ಟನ್ ಮಹಿಳೆಯರನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದ. ಅವರ ಮೃತದೇಹಗಳನ್ನು ಕತ್ತರಿಸಿ ಹಂದಿಗೆ ತಿನ್ನಿಸುತ್ತಿದ್ದ ಎಂದು ವಿಚಾರಣೆ ವೇಳೆ ಆತ ಬಾಯಿಬಿಟ್ಟಿದ್ದ. ಆತನ ಫಾರ್ಮ್ ನಲ್ಲಿ ಹಂದಿಮಾಂಸವನ್ನು ಖರೀದಿಸಿದಾಗ ಅದರಲ್ಲಿ ಮಾನವ ಅವಶೇಷಗಳು ಇರಬಹುದು ಎಂದು ಆರೋಗ್ಯ ಅಧಿಕಾರಿಗಳು ಗ್ರಾಹಕರನ್ನು ಎಚ್ಚರಿಸಿದ್ದರು.
ಇದನ್ನೂ ಓದಿ:ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಇಂಜಿನ್ನಲ್ಲಿ ಸಿಲುಕಿ ವ್ಯಕ್ತಿ ಸಾವು
ಇಷ್ಟೆಲ್ಲ ಸಾಕ್ಷ್ಯಗಳಿದ್ದರೂ, ರಾಬರ್ಟ್ ಪಿಕ್ಟನ್ ತನ್ನ ಅಪರಾಧಗಳನ್ನು ಒಪ್ಪಿಕೊಳ್ಳಲಿಲ್ಲ. ವಿಚಾರಣೆಯ ಸಮಯದಲ್ಲಿ ಆತ ಅನ್ಯ ಮನಸ್ಕನಾಗಿದ್ದ. ಆದಾಗ್ಯೂ, ರಹಸ್ಯ ಅಧಿಕಾರಿಯೊಂದಿಗಿನ ಟೇಪ್ ಮಾಡಿದ ಸಂಭಾಷಣೆಯಲ್ಲಿ, ಆತ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದ. ತಾನು ಈಗಾಗಲೇ 49 ಮಹಿಳೆಯರನ್ನು ಕೊಂದಿದ್ದಿದ್ದು 50 ಟಾರ್ಗೆಟ್ ಇಟ್ಟುಕೊಂಡಿದ್ದೆ ಎಂದು ಆತ ಹೇಳಿದ್ದ. ಈಗ, ಕೆನಡಾದ ಪೊಲೀಸರು ರಾಬರ್ಟ್ ಪಿಕ್ಟನ್ ಅವರ ಸಾವಿಗೆ ಕಾರಣವಾದ ಹಲ್ಲೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Sat, 1 June 24