ಇಸ್ಲಾಮಾಬಾದ್: ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದ (Pakistan) ಕಂಪನಿಗಳು ಇದೀಗ ಆಮದು ನಿರ್ಬಂಧಗಳಿಂದ (Import Restrictions) ಕಂಗೆಟ್ಟಿವೆ. ಪರಿಣಾಮವಾಗಿ ಬಿಡಿ ಭಾಗಗಳು ಸಿಗದೆ ಅಲ್ಲಿನ 30 ಮೊಬೈಲ್ ಫೋನ್ ತಯಾರಿಕಾ ಘಟಕಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಈ ಪೈಕಿ ಮೂರು ವಿದೇಶಿ ಕಂಪನಿಗಳ ಘಟಕಗಳೂ ಸೇರಿವೆ. ಪಾಕಿಸ್ತಾನವು ವಿದೇಶಿ ಕರೆನ್ಸಿ ಅಭಾವ ಎದುರಿಸುತ್ತಿದ್ದು, ಈ ಕಾರಣಕ್ಕೆ ಆಮದಿನ ಮೇಲೆ ನಿರ್ಬಂಧ ಹೇರಿದೆ. ಇದರಿಂದಾಗಿ ಕೈಗಾರಿಕೆಗಳು ಬಿಡಿ ಭಾಗಗಳ ಹಾಗೂ ಉಪಕರಣಗಳ ಕೊರತೆ ಎದುರಿಸುತ್ತಿವೆ. ಈವರೆಗೆ, ನೂರಾರು ಟೆಕ್ಸ್ಟೈಲ್ ಫ್ಯಾಕ್ಟರಿಗಳು ಮುಚ್ಚಿದ್ದು, ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹಣದ ಕೊರತೆ ಎದುರಿಸುತ್ತಿರುವ ಪಾಕಿಸ್ತಾನದ ಹೆಚ್ಚಿನ ಎಲ್ಲಾ ಮೊಬೈಲ್ ಫೋನ್ ಘಟಕಗಳು ಮುಚ್ಚಿವೆ ಎಂದು ಅಲ್ಲಿನ ‘ಡಾನ್ ಟುಡೆ’ ಪತ್ರಿಕೆ ವರದಿ ಮಾಡಿದೆ.
ಮೊಬೈಲ್ ಫೋನ್ ಘಟಕಗಳು ಏಪ್ರಿಲ್ನ ಅರ್ಧ ವೇತನವನ್ನು ಉದ್ಯೋಗಿಗಳಿಗೆ ಪರಿಹಾರವಾಗಿ ನೀಡಿ ಅವರನ್ನು ಮನೆಗೆ ಕಳುಹಿಸಿವೆ. ಜತೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಉತ್ಪಾದನೆ ಪುನರಾರಂಭವಾದ ತಕ್ಷಣ ಅವರನ್ನು ಮರಳಿ ಕರೆಯಲಾಗುವುದು ಎಂಬುದಾಗಿ ಕಂಪನಿಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.
ಕಂಪನಿಗಳು ರಂಜಾನ್ ಸಂದರ್ಭದಲ್ಲೇ ಉದ್ಯೋಗಿಗಳನ್ನು ಮನೆಗೆ ಕಳುಹಿಸಬೇಕಾಯಿತು ಎಂದು ಮೊಬೈಲ್ ಫೋನ್ ತಯಾರಿಕಾ ಕ್ಷೇತ್ರದ ಉದ್ಯಮಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಕುಟುಂಬವು ಮೂರು ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಅವುಗಳನ್ನೆಲ್ಲ ಮುಚ್ಚಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದು, ಎಲ್ಲ ಸಮಸ್ಯೆಗಳಿಗೂ ಹಣಕಾಸು ಸಚಿವಾಲಯದ ನೀತಿಗಳನ್ನೇ ಬೊಟ್ಟು ಮಾಡಿದ್ದಾರೆ.
ಸರ್ಕಾರದ ನೀತಿಗಳಿಂದಾಗಿ ಆಮದುದಾರರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆಮದುದಾರರಿಗೆ ‘ಲೆಟರ್ ಆಫ್ ಕ್ರೆಡಿಟ್ (LC)’ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ, ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಳಸುವ ಪ್ರಮುಖ ಉಪಕರಣಗಳು ಮತ್ತು ಬಿಡಿ ಭಾಗಗಳ ಆಮದನ್ನು ನಿಲ್ಲಿಸಲಾಗಿದೆ ಎಂದು ಮೊಬೈಲ್ ಫೋನ್ ಉತ್ಪಾದನಾ ಘಟಕಗಳ ಉದ್ಯಮಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Giorgia Meloni: ಇಟಲಿಯಲ್ಲಿ ಇಂಗ್ಲಿಷ್, ಇತರ ವಿದೇಶಿ ಭಾಷೆಗಳಿಗೆ ಅವಕಾಶ ಇಲ್ಲ, ತಪ್ಪಿದರೆ 82 ಲಕ್ಷ ರೂ. ದಂಡ
ಸ್ಥಳೀಯ ಮೊಬೈಲ್ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ ಮತ್ತು ಮಾರುಕಟ್ಟೆಗಳು ಮೊಬೈಲ್ ಫೋನ್ ಕೊರತೆಯನ್ನು ಎದುರಿಸುತ್ತಿವೆ ಎಂಬುದನ್ನು ಮೊಬೈಲ್ ಫೋನ್ ತಯಾರಕರ ಸಂಘವು ಐಟಿ ಸಚಿವಾಲಯಕ್ಕೆ ತಿಳಿಸಿದೆ.
ಸ್ಥಳೀಯವಾಗಿ ತಯಾರಾಗುವ ಮೊಬೈಲ್ ಸೆಟ್ಗಳಿಗೆ ಗಣನೀಯವಾಗಿ ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಹಕರಿಗೂ ಅಷ್ಟೇ ತೊಂದರೆಯಾಗಿದೆ ಎಂದು ಮೊಬೈಲ್ ಫೋನ್ ತಯಾರಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಆಮದು ನಿರ್ಬಂಧಗಳಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ 30 ಘಟಕಗಳ ಪೈಕಿ ಮೂರು ವಿದೇಶಿ ಒಡೆತದ ಘಟಕಗಳಾಗಿವೆ. ಚೀನಾ, ದಕ್ಷಿಣ ಕೊರಿಯಾ ಹಾಗೂ ವಿಯೆಟ್ನಾಂ ಘಟಕಗಳಾಗಿವೆ. ಪಾಕಿಸ್ತಾನದ ಮಿತ್ರ ರಾಷ್ಟ್ರ ಎಂದೇ ಪರಿಗಣಿಸಲ್ಪಟ್ಟಿರುವ ಚೀನಾ ಕೂಡ ಆ ದೇಶದಲ್ಲಿನ ಘಟಕವನ್ನು ಮುಚ್ಚಿರುವುದು ಗಮನಾರ್ಹವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ