
ವಾಷಿಂಗ್ಟನ್, ಜುಲೈ 17:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾ ವಿರುದ್ಧ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ‘ಸೈಬರ್ ಹ್ಯಾಕಿಂಗ್’ ಆರೋಪವನ್ನು ಹೊರಿಸುವ ಮೂಲಕ ಜಾಗತಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಚೀನಾವು ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿ, ಬರೋಬ್ಬರಿ 220 ಮಿಲಿಯನ್ (22 ಕೋಟಿ) ಅಮೆರಿಕದ ಮತದಾರರ ಅತ್ಯಂತ ರಹಸ್ಯ ಫೈಲ್‌ಗಳನ್ನು ಅಕ್ರಮವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಶ್ವೇತಭವನದಿಂದ ದೇಶವನ್ನುದ್ದೇಶಿಸಿ ನಡೆಸಿದ ಪ್ರೈಮ್-ಟೈಮ್ ಭಾಷಣದಲ್ಲಿ ಟ್ರಂಪ್ ಗುಡುಗಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಇದು ಅತಿ ದೊಡ್ಡ “ಚುನಾವಣಾ ದತ್ತಾಂಶ ರಾಜಿ” ಎಂದು ಕರೆದಿರುವ ಅವರು, ಈ ಕುರಿತಾದ ಆಘಾತಕಾರಿ ರಹಸ್ಯ ವರದಿಗಳನ್ನು ಶೀಘ್ರದಲ್ಲೇ ಜಗತ್ತಿನೆದುರು ಬಿಚ್ಚಿಡುವುದಾಗಿ ಎಚ್ಚರಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕಾರ, ಚೀನಾದ ಈ ರಹಸ್ಯ ಸೈಬರ್ ಕಾರ್ಯಾಚರಣೆಯು 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲೇ ಆರಂಭವಾಗಿತ್ತು.
ಚೀನಾ ಇತಿಹಾಸದಲ್ಲೇ ಕಾಣದ ಮಹಾ ವಂಚನೆಯ ಮೂಲಕ ನಮ್ಮ ಮತದಾರರ ಪ್ರಮುಖ ದತ್ತಾಂಶವನ್ನು ಕದ್ದಿದೆ. ಇದು ಅಮೆರಿಕದ ಚುನಾವಣಾ ಭದ್ರತೆಗೆ ಎದುರಾದ ಸವಾಲು. ನಮ್ಮ ದೇಶದ ಆಡಳಿತ ವ್ಯವಸ್ಥೆಯ ಒಳಗೇ ಇರುವ ಕೆಲವು ಪ್ರಭಾವಿ ವ್ಯಕ್ತಿಗಳು ಈ ಮಹಾ ಹಗರಣವನ್ನು ಇಷ್ಟು ದಿನ ಮುಚ್ಚಿಡುವ ಕೆಲಸ ಮಾಡಿದ್ದಾರೆ ಎಂದು ಟ್ರಂಪ್ ನೇರ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಟ್ರಂಪ್ ಅವರು ಚೀನಾ ಮ ಸರ್ಕಾರದ ವಿರುದ್ಧ ಇಷ್ಟೊಂದು ಭೀಕರ ಆರೋಪಗಳನ್ನು ಮಾಡುತ್ತಿದ್ದರೂ, ಅಮೆರಿಕದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯು ಮಾತ್ರ ಇದನ್ನು ಒಪ್ಪುತ್ತಿಲ್ಲ.
60 ಕ್ಕೂ ಹೆಚ್ಚು ಮೊಕದ್ದಮೆಗಳು ವಜಾ: 2020 ರ ಚುನಾವಣಾ ಫಲಿತಾಂಶದ ನಂತರ ಟ್ರಂಪ್ ಮತ್ತು ಅವರ ಮಿತ್ರರು ಅಮೆರಿಕದ ವಿವಿಧ ನ್ಯಾಯಾಲಯಗಳಲ್ಲಿ ಹೂಡಿದ್ದ 60 ಕ್ಕೂ ಹೆಚ್ಚು ಪ್ರಮುಖ ಮೊಕದ್ದಮೆಗಳು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ವಜಾಗೊಂಡಿವೆ.
ಖುದ್ದು ಇಲಾಖೆಯಿಂದಲೇ ತಪಾಸಣೆ: ಟ್ರಂಪ್ ಅವರ ಸ್ವಂತ ಆಡಳಿತಾವಧಿಯ ನ್ಯಾಯಾಂಗ ಇಲಾಖೆ , ಎಫ್‌ಬಿಐ (FBI) ಹಾಗೂ ದೇಶಾದ್ಯಂತ ನಡೆದ ಹತ್ತಾರು ಅಧಿಕೃತ ಮರುಎಣಿಕೆ ಮತ್ತು ಆಡಿಟ್‌ಗಳಲ್ಲಿ ಚುನಾವಣಾ ಫಲಿತಾಂಶವನ್ನು ಬದಲಾಯಿಸುವಂತಹ ಯಾವುದೇ ವ್ಯವಸ್ಥಿತ ವಂಚನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೂ ಟ್ರಂಪ್ ತಮ್ಮ ವಾದದಿಂದ ಹಿಂದೆ ಸರಿದಿಲ್ಲ.
ಅಮೆರಿಕ ಅಧ್ಯಕ್ಷರ ಈ ಹೇಳಿಕೆಯು ಜಾಗತಿಕವಾಗಿ ಚೀನಾ ಮತ್ತು ಅಮೆರಿಕ ನಡುವಿನ ಹಳಸಿರುವ ಸಂಬಂಧವನ್ನು ಮತ್ತಷ್ಟು ಕೆಡಿಸಲಿದೆ.
ಚೀನಾದ ನಿರಾಕರಣೆ: ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯು ಟ್ರಂಪ್ ಅವರ ಆರೋಪಗಳನ್ನು ಕಟ್ಟುಕಥೆ ಎಂದು ತಳ್ಳಿಹಾಕಿದ್ದು, ತಾವು ಎಂದಿಗೂ ಇತರ ದೇಶಗಳ ಆಂತರಿಕ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಜಾಗತಿಕ ಆತಂಕ: ವಿಶ್ವದ ಅತ್ಯಂತ ಬಲಿಷ್ಠ ತಂತ್ರಜ್ಞಾನ ಹೊಂದಿರುವ ಅಮೆರಿಕದ ವೋಟರ್ ಡೇಟಾಬೇಸ್ ಅನ್ನೇ ಚೀನಾ ಹ್ಯಾಕ್ ಮಾಡಿದೆ ಎಂಬ ಟ್ರಂಪ್ ಹೇಳಿಕೆಯು ಜಗತ್ತಿನಾದ್ಯಂತ ಇವಿಎಂ ಹಾಗೂ ಡಿಜಿಟಲ್ ಮತದಾನ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಟ್ರಂಪ್ ಬಿಡುಗಡೆ ಮಾಡಲಿರುವ ರಹಸ್ಯ ಗುಪ್ತಚರ ಸಾಕ್ಷ್ಯಗಳು ನಿಜವೇ ಅಥವಾ ಕೇವಲ ರಾಜಕೀಯ ಗಿಮಿಕ್ಕೇ ಎಂಬುದನ್ನು ಜಾಗತಿಕ ರಕ್ಷಣಾ ತಜ್ಞರು ತೀವ್ರವಾಗಿ ಗಮನಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ