‘ಟ್ರಂಪ್‌ನನ್ನು ಕೊಲ್ಲುತ್ತೇವೆ’; ಇರಾನ್‌ನಲ್ಲಿ ಬೃಹತ್ ಬ್ಯಾನರ್!
ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ಭೀಕರ ರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಇರಾನ್ ರಾಜಧಾನಿ ಟೆಹ್ರಾನ್‌ನ ಪ್ರಮುಖ ವೃತ್ತವಾದ 'ಎಂಘೆಲಾಬ್ ಸ್ಕ್ವೇರ್'ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರೆದ ಕಪ್ಪು ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಬಿಂಬಿಸುವ ಬ್ಯಾನರ್ ಒಂದನ್ನು ಪ್ರದರ್ಶಿಸಿ ಇರಾನ್ ಉಗ್ರ ಎಚ್ಚರಿಕೆ ನೀಡಿದೆ. ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಬಳಸಲಾದ ಕಾಂಕ್ರೀಟ್ ಬ್ಲಾಕ್‌ಗಳ ಮಾದರಿಯಲ್ಲೇ ಈ ಶವಪೆಟ್ಟಿಗೆಯನ್ನು ವಿನ್ಯಾಸಗೊಳಿಸಲಾಗಿದೆ.

ಟೆಹ್ರಾನ್, ಜುಲೈ 16: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸಿದೆ ಎಂಬ ವರದಿಗಳ ನಡುವೆಯೇ ಇರಾನ್ ರಾಜಧಾನಿ ಟೆಹ್ರಾನ್‌ನ ಪ್ರಮುಖ ವೃತ್ತವಾದ ‘ಎಂಘೆಲಾಬ್ ಸ್ಕ್ವೇರ್’ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಬಿಂಬಿಸುವ ಬೃಹತ್ ಬಿಲ್ಬೋರ್ಡ್ (ಬ್ಯಾನರ್) ಒಂದನ್ನು ಅಳವಡಿಸಲಾಗಿದೆ. ಅಮೆರಿಕ-ಇಸ್ರೇಲ್ ಜಂಟಿ ಪಡೆಗಳು ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಈ ಜನಾಂಗೀಯ ದ್ವೇಷದ ಬಿಲ್ಬೋರ್ಡ್ಗಳನ್ನು ಹಾಕಲಾಗಿದೆ.
ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷ!:
ಟೆಹ್ರಾನ್‌ನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಹಾಕಲಾಗಿರುವ ಈ ಬೃಹತ್ ಹೋಲ್ಡಿಂಗ್‌ನಲ್ಲಿ ತೆರೆದ ಕಪ್ಪು ಬಣ್ಣದ ಶವಪೆಟ್ಟಿಗೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೇಹವು ಹೊರಬರುತ್ತಿರುವಂತೆ ತೋರಿಸಲಾಗಿದೆ. ಅದರಲ್ಲಿ ಅವರ ಕೂದಲು ಕೆದರಿದ್ದು, ಕಣ್ಣು ಮತ್ತು ಬಾಯಿ ಮುಚ್ಚಿವೆ. ಕೆಂಪು ಬಣ್ಣದ ಟೈ ಮೇಲೆ ಕೈಗಳನ್ನು ಇಡಲಾಗಿದ್ದು, ಪಾದಗಳು ನೇರವಾಗಿ ಮೇಲಕ್ಕೆ ಚಾಚಿಕೊಂಡಿವೆ. ಈ ಕಪ್ಪು ಶವಪೆಟ್ಟಿಗೆಯ ಮೇಲೆ ಪರ್ಷಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ “ನಾವು ಟ್ರಂಪ್‌ನನ್ನು ಕೊಲ್ಲುತ್ತೇವೆ” ಎಂದು ಬರೆಯಲಾಗಿದೆ. ಫೆಬ್ರವರಿ 28ರಂದು ಯುದ್ಧ ಆರಂಭವಾದಾಗ ಮೃತಪಟ್ಟ ಮಾಜಿ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸ್ಮರಣಾರ್ಥವಾಗಿ ಹಾಕಲಾದ ಈ ಬ್ಯಾನರ್‌ನಲ್ಲಿ ದಕ್ಷಿಣ ಇರಾನ್‌ನ ಮಿನಾಬ್ ನಗರದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಮಕ್ಕಳ ನೆನಪಿನ ಸಂದೇಶಗಳೂ ಇವೆ.
ಇದನ್ನೂ ಓದಿ: ಮಹಾಯುದ್ಧದ ಭೀತಿ: ಇರಾನ್‌ನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ, MQ-9 ಡ್ರೋನ್ ಹೊಡೆದುರುಳಿಸಿದ ಇರಾನ್
ಇರಾನ್ ತನ್ನ ರಾಜಕೀಯ ಸಂದೇಶಗಳನ್ನು ರವಾನಿಸಲು ಸಾರ್ವಜನಿಕ ಸ್ಥಳಗಳನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ಇತ್ತೀಚಿನ ವಾರಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಇಂತಹ ಹಲವು ಉಗ್ರ ಸಂದೇಶಗಳ ಬಿಲ್ಬೋರ್ಡ್ಗಳು ಕಾಣಿಸಿಕೊಂಡಿವೆ. ಕಳೆದ ಮೇ ತಿಂಗಳಿನಲ್ಲಿ ಅಮೆರಿಕನ್ನರನ್ನು ಗುರಿಯಾಗಿಸಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಟ್ರಂಪ್ ಅವರ ಬಾಯಿಯನ್ನು ಹಾರ್ಮುಜ್ ಜಲಸಂಧಿಯ ಫೋಟೋದೊಂದಿಗೆ ಹೊಲಿಯಲಾಗಿತ್ತು.
ಮಿಲಿಟರಿ ಶಕ್ತಿ ಪ್ರದರ್ಶನ:
ಮತ್ತೊಂದು ಬಿಲ್ಬೋರ್ಡ್ನಲ್ಲಿ ಪರ್ಷಿಯನ್ ಗಲ್ಫ್‌ನಲ್ಲಿ ಬೃಹತ್ ಮೀನುಗಾರಿಕೆ ಬಲೆಯನ್ನು ತೋರಿಸಲಾಗಿದ್ದು, ಅದರಲ್ಲಿ ಅಮೆರಿಕದ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ನೌಕಾಪಡೆಯ ಹಡಗುಗಳನ್ನು ಸೆರೆಹಿಡಿದಿರುವುದನ್ನು ಚಿತ್ರಿಸಲಾಗಿತ್ತು. ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಇರಾನ್ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್
ಇದರ ಭಾಗವಾಗಿ ಇರಾನ್‌ನ ಪ್ರಮುಖ ಕನ್ಸರ್ವೇಟಿವ್ ದಿನಪತ್ರಿಕೆಯೊಂದು ಸೇಡು ತೀರಿಸಿಕೊಳ್ಳಬೇಕಾದ ಜಾಗತಿಕ ನಾಯಕರ ಹಿಟ್‌ಲಿಸ್ಟ್ ಒಂದನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಒಟ್ಟು 13 ಜಾಗತಿಕ ನಾಯಕರ ಫೋಟೋಗಳನ್ನು ಪ್ರಕಟಿಸಿ, ಇವರನ್ನು ಗುರಿಯಾಗಿಸಲಾಗುವುದು ಎಂದು ಇರಾನ್ ಮಾಧ್ಯಮಗಳು ಎಚ್ಚರಿಸಿವೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಜಾಗತಿಕ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




