AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಂತ್ಯ ಹಾಡಲು ಇರಾನ್ ಜೊತೆ ಮಾತುಕತೆ ನಡೆಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆದರೆ, ಇರಾನ್ ಜೊತೆಗಿನ ಕದನ ವಿರಾಮ ಈಗ ಕೊನೆಗೊಂಡಿದೆ ಎಂಬುದನ್ನು ಅವರು ಮತ್ತೊಮ್ಮೆ ಒತ್ತಿಹೇಳಿದ್ದಾರೆ. ಅಮೆರಿಕ ಪಡೆಗಳು ಇರಾನ್‌ನಾದ್ಯಂತ ನಡೆಸಿದ ಭೀಕರ ಎರಡು ದಿನಗಳ ವೈಮಾನಿಕ ದಾಳಿಯ ಬೆನ್ನಲ್ಲೇ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ತಿಳಿಸಿದೆ.

ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ
Donald Trump Image Credit source: AP
ಸುಷ್ಮಾ ಚಕ್ರೆ
|

Updated on: Jul 10, 2026 | 9:57 PM

Share

ವಾಷಿಂಗ್ಟನ್, ಜುಲೈ 10: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗಿನ ಮೇಲಿನ ದಾಳಿಯ ನಂತರ ಇರಾನ್ ಮತ್ತು ಅಮೆರಿಕದ ನಡುವೆ ಮತ್ತೆ ಸಂಘರ್ಷ ಶುರುವಾಗಿತ್ತು. ಉಭಯ ದೇಶಗಳ ನಡುವೆ ಸರಣಿ ಪ್ರತಿದಾಳಿಗಳು ನಡೆದು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಇರಾನ್ ಮಾಡಿಕೊಂಡ ಮನವಿಯ ಮೇರೆಗೆ ಅದರೊಂದಿಗೆ ಮಾತುಕತೆ ನಡೆಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಆದರೆ, ಮಾತುಕತೆಗೆ ಸಿದ್ಧವಿದ್ದರೂ ಈಗಾಗಲೇ ಕದನವಿರಾಮ ಅಂತ್ಯವಾಗಿದೆ ಎಂದಿದ್ದಾರೆ.

“ಮಾತುಕತೆಯನ್ನು ಮುಂದುವರಿಸುವಂತೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಮಗೆ ಮನವಿ ಮಾಡಿದೆ” ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ನಾವು ಅದಕ್ಕೆ ಒಪ್ಪಿದ್ದೇವೆ, ಆದರೆ ಕದನ ವಿರಾಮವು ಮುಕ್ತಾಯಗೊಂಡಿದೆ ಎಂಬುದನ್ನು ಅಮೆರಿಕ ಅವರಿಗೆ ಸ್ಪಷ್ಟವಾಗಿ ತಿಳಿಸಿದೆ!” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಶೂಟ್ ಮಾಡ್ಬೇಕಾ?; ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್​ಗೆ ಇರಾನ್ ತಿರುಗೇಟು

ಕಳೆದ 3 ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದ ಸಂಘರ್ಷಕ್ಕೆ ಅಂತ್ಯ ಹಾಡಲು ಉಭಯ ದೇಶಗಳು ಕಳೆದ ತಿಂಗಳಷ್ಟೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು 3 ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿತು. ಇದಕ್ಕೆ ಪ್ರತಿಯಾಗಿ ಅಮೆರಿಕದ ಪಡೆಗಳು ಈ ವಲಯದಲ್ಲಿದ್ದ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದವು. ಇರಾನ್ ಕೂಡ ಸುಮ್ಮನಿರದೆ ಅಮೆರಿಕದ ದಾಳಿಗೆ ಪ್ರತೀಕಾರದ ದಾಳಿಗಳನ್ನು ನಡೆಸಿತು. ಹೀಗೆ ಉಭಯ ದೇಶಗಳು ಪರಸ್ಪರ ಸರಣಿ ದಾಳಿಗಳನ್ನು ಮುಂದುವರಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.

ಹಾರ್ಮುಜ್ ಜಲಸಂಧಿಯ ಮಹತ್ವ:

ವಿಶ್ವದ ಸುಮಾರು 5ನೇ 1 ಭಾಗದಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಹಾರ್ಮುಜ್ ಜಲಸಂಧಿಯ ಮಾರ್ಗದ ಮೂಲಕವೇ ಸಾಗುತ್ತದೆ. ಈ ಜಲಸಂಧಿ ಈಗ ತನ್ನ ಸಂಪೂರ್ಣ ನಿಯಂತ್ರಣದಲ್ಲಿರಬೇಕು ಮತ್ತು ಇಲ್ಲಿ ಸಂಚರಿಸುವ ಹಡಗುಗಳು ತನಗೆ ಶುಲ್ಕ ಪಾವತಿಸಬೇಕು ಎಂದು ಇರಾನ್ ವಾದಿಸುತ್ತಿದೆ. ಆದರೆ, ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವುದು ತನ್ನ ಜವಾಬ್ದಾರಿ ಎಂದು ಅಮೆರಿಕ ಮಿಲಿಟರಿ ಪ್ರತಿಪಾದಿಸಿದೆ.

ಇದನ್ನೂ ಓದಿ: ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ

ಇರಾನ್‌ನಲ್ಲಿ ಹೆಚ್ಚಿದ ಸಾವು-ನೋವು:

ಅಮೆರಿಕ ನಡೆಸಿದ ತೀವ್ರ ಬಾಂಬ್ ದಾಳಿಯ ಪರಿಣಾಮವಾಗಿ ಇರಾನ್​ನಲ್ಲಿ ಸಾವು-ನೋವುಗಳು ಹೆಚ್ಚಾಗಿವೆ. ಗುರುವಾರ ಇರಾನ್‌ನ ಟೆಹ್ರಾನ್ ಆರೋಗ್ಯ ಸಚಿವಾಲಯವು ಪ್ರಕಟಿಸಿದ ವರದಿಯ ಪ್ರಕಾರ, ಅಮೆರಿಕ ನಡೆಸಿದ ಮೊದಲ 2 ದಿನಗಳ ವೈಮಾನಿಕ ದಾಳಿಗೆ ದೇಶಾದ್ಯಂತ ಅಧಿಕೃತವಾಗಿ 14 ಜನರು ಬಲಿಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ. ಸಿರಿಕ್ ಪಟ್ಟಣದ ಮೇಲಿನ ದಾಳಿಯೊಂದರಲ್ಲೇ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us