ನವದೆಹಲಿ: ಕೊರೊನಾವೈರಸ್‌ನ ಒಮಿಕ್ರಾನ್ ರೂಪಾಂತರವು (Omicron Variant) ಹೆಚ್ಚು-ಮ್ಯುಟೇಟೆಡ್ ರೂಪಾಂತರಿಯಾಗಿದೆ. ಕೊವಿಡ್ನ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಹಾನಿಯನ್ನು ಉಂಟುಮಾಡಿತು. ನವೆಂಬರ್‌ನಲ್ಲಿ ಪತ್ತೆಯಾದ ನಂತರ ಅತೀವವಾಗಿ ರೂಪಾಂತರಗೊಂಡ ರೂಪಾಂತರಿ ಜಗತ್ತಿನಾದ್ಯಂತ ವೇಗವಾಗಿ ಹರಡಿತು. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರಿ ವಿರುದ್ಧ ಈಗಾಗಲೇ ನೀಡಲಾಗುತ್ತಿರುವ ಕೊರೊನಾ ಲಸಿಕೆಗಳು ಪರಿಣಾಮಕಾರಿ ಎಂದು ಸಾಬೀತಾಗಿಲ್ಲ ಎಂದು ಅನೇಕ ತಜ್ಞರು ಹೇಳಿದ್ದಾರೆ. ಈಗಾಗಲೇ ಜನರು ಕೊವಿಡ್ ಸಾಂಕ್ರಾಮಿಕ ಯಾವಾಗ ಕೊನೆಗೊಳ್ಳುತ್ತದೆ? ಎಂಬ ಪ್ರಶ್ನೆಯನ್ನು ಕೇಳತೊಡಗಿದ್ದಾರೆ. ಸುಮಾರು 2 ವರ್ಷಗಳಿಂದ ಕೊರೊನಾವೈರಸ್ (Coronavirus) ಇಡೀ ವಿಶ್ವಾದ್ಯಂತ ಭಾರೀ ಆತಂಕ ಮೂಡಿಸಿದ್ದು, ಜನರ ಜೀವನಶೈಲಿಯನ್ನೇ ಬದಲಾಯಿಸಿದೆ. ಸಂಶೋಧಕರ ಪ್ರಕಾರ, ಒಮಿಕ್ರಾನ್ ಕೊರೊನಾವೈರಸ್‌ನ ಕೊನೆಯ ರೂಪಾಂತರವಂತೂ ಅಲ್ಲವೇ ಅಲ್ಲ. ಇನ್ನೂ ಹಲವು ಕೊರೊನಾ ರೂಪಾಂತರಿಗಳು ಜಗತ್ತಿನಲ್ಲಿ ಕಾಣಿಸಿಕೊಳ್ಳಲಿದ್ದು, ಸದ್ಯಕ್ಕಂತೂ ಕೊವಿಡ್ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಕೋವಿಡ್-19 ಅಂತಿಮವಾಗಿ ಒಂದು ಸ್ಥಳೀಯ ರೋಗವಾಗಿ ಪರಿಣಮಿಸುತ್ತದೆ. ಜ್ವರ, ಕೆಮ್ಮು, ಮಲೇರಿಯಾ ಮುಂತಾದ ರೋಗಗಳಂತೆ ಇನ್ನು ಮುಂದಿನ ದಿನಗಳಲ್ಲಿ ಕೊವಿಡ್ ಕೂಡ ಸಾಮಾನ್ಯ ರೋಗವಾಗಲಿದೆ. ಜಗತ್ತು ಕೊರೊನಾವೈರಸ್ನೊಂದಿಗೆ ಬದುಕಲು ಕಲಿಯಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
“ಈಗಾಗಲೇ ಬಹುತೇಕ ಜನರಿಗೆ ಕೊರೊನಾವೈರಸ್ 2 ಡೋಸ್ ಲಸಿಕೆಗಳನ್ನು ನೀಡಿರುವುದರಿಂದ ಜನರಲ್ಲಿ ನಾವು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಕಾಣುತ್ತಿದ್ದೇವೆ. ಇದರಿಂದ ಇನ್ನು ಮುಂದೆ ಮಾರಣಾಂತಿಕ ಸಾಂಕ್ರಾಮಿಕ ರೋಗಗಳು ಕಡಿಮೆಯಾಗಲಿದೆ” ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸೆಬಾಸ್ಟಿಯನ್ ಫಂಕ್ ಅಭಿಪ್ರಾಯಪಟ್ಟಿದ್ದಾರೆ.
ಆದರೂ ಉನ್ನತ ಮಟ್ಟದ ವೈರಾಲಜಿಸ್ಟ್ ಆಗಿರುವ ಅರಿಸ್ ಕಟ್ಜೌರಾಕಿಸ್ ಕೊರೊನಾವೈರಸ್ ಕಾಯಿಲೆ ಯಾರಿಗೂ ಯಾವುದೇ ಅಪಾಯ ಮಾಡುವುದಿಲ್ಲ ಎಂದು ಜನರು ನಿರ್ಲಕ್ಷ್ಯ ತಳೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾವೈರಸ್ ಇನ್ನುಮುಂದೆ ಸ್ಥಳೀಯ ರೋಗವಾಗಲಿದೆ. ಹಾಗಂತ ಅದರಿಂದ ಪ್ರಾಣಾಪಾಯವಿಲ್ಲ ಎಂದು ಅರ್ಥವಲ್ಲ” ಎಂದು ಅವರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ಉತ್ತುಂಗಕ್ಕೆ ಹೋಗಿತ್ತು. ಪ್ರತಿನಿತ್ಯ 1.27 ಲಕ್ಷ ಪ್ರಕರಣಗಳು ದಾಖಲಾಗುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಬಳಿಕ ಈಗ ಸೋಂಕಿನ ಪ್ರಕರಣ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ಈಗ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೆಲವು ತಜ್ಞರು ಒಮಿಕ್ರಾನ್ ಬಳಿಕ ದೇಶದಲ್ಲಿ ಕೊರೊನಾವೈರಸ್ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದರೆ ಇನ್ನು ಕೆಲವರು ಹೊಸ ರೂಪಾಂತರಿಗಳು ಮುಂದುವರೆಯಲಿದೆ ಎನ್ನುತ್ತಿದ್ದಾರೆ. ಇದೀಗ ಗಮನಿಸಬೇಕಾದ ವಿಚಾರ ಏನೆಂದರೆ ಎರಡನೇ ಅಲೆಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಎರಡನೇ ಅಲೆಯ ವೇಳೆ ದೇಶಾದ್ಯಂತ ಆಮ್ಲಜನಕದ ಸಮಸ್ಯೆಯಾಗಿತ್ತು. ಆದರೆ ಮೂರನೇ ಅಲೆಯಲ್ಲಿ ಐಸಿಯುಗೆ ದಾಖಲಾಗುವವರ ಸಂಖ್ಯೆ ಬಹಳ ಕಡಿಮೆಯಿ ಇರುವುದು ಸಮಾಧಾನದ ಸಂಗತಿ.
ಇದನ್ನೂ ಓದಿ: ಒಮಿಕ್ರಾನ್ ರೂಪಾಂತರಿ BA.2 ನಿಂದಾಗಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಎಚ್ಚರ ವಹಿಸಿ ಎಂದ ವಿಜ್ಞಾನಿಗಳು
Omicron Variant: ಒಮಿಕ್ರಾನ್ ವೈರಸ್ ಪ್ಲಾಸ್ಟಿಕ್ ಮೇಲೆ 8 ದಿನ, ಚರ್ಮದ ಮೇಲೆ 21 ಗಂಟೆ ಜೀವಂತವಾಗಿರಬಲ್ಲದು!