ಇತ್ತೀಚಿನ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ ಪಾಕಿಸ್ತಾನದ ಪಾಸ್ಪೋರ್ಟ್ ಸತತ ನಾಲ್ಕನೇ ವರ್ಷ 100 ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ನಾಗರಿಕರು ಮುಂಗಡ ವೀಸಾ ಇಲ್ಲದೆ (visa free travel) 33 ದೇಶಗಳಿಗೆ ಮಾತ್ರವೇ ಪ್ರಯಾಣಿಸಬಹುದು. ಒಂದು ದೇಶದ ನಾಗರಕರು ವೀಸಾ ಮುಕ್ತವಾಗಿ ಎಷ್ಟು ದೇಶಗಳಿಗೆ ಪ್ರಯಾಣಿಸಬಹುದು ಎನ್ನುವುದರ ಆಧಾರದ ಮೇಲೆ 199 ದೇಶಗಳಿಗೆ ಹೆನ್ಲೀ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ರ‍್ಯಾಂಕಿಂಗ್ ನೀಡಲಾದೆ. ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ನ (ಐಎಟಿಎ) ದತ್ತಾಂಶ ಆಧರಿಸಿ ಈ ಪಟ್ಟಿ ಮಾಡಲಾಗಿದೆ.
ಪಾಕಿಸ್ತಾನದ ಮತ್ತು ಯೆಮೆನ್ ದೇಶಗಳ ನಾಗರಿಕರು ತಲಾ 33 ದೇಶಗಳಿಗೆ ಮುಂಗಡ ವೀಸಾ ಮುಕ್ತ ಪ್ರಯಾಣಾವಕಾಶವನ್ನು ಹೊಂದಿದ್ದಾರೆ. ಅಂತೆಯೇ ಈ ಎರಡು ದೇಶಗಳು 100ನೇ ಸ್ಥಾನವನ್ನು ಹಂಚಿಕೊಂಡಿವೆ. ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ ಪಾಕಿಸ್ತಾನಕ್ಕಿಂತ ಹೀನವಾಗಿರುವುದು ಇರಾಕ್ (101), ಸಿರಿಯಾ (102) ಮತ್ತು ಅಫ್ಘಾನಿಸ್ತಾನ (103). ಅಫ್ಘಾನಿಸ್ತಾನ ವಿಶ್ವದ ಅತ್ಯಂತ ದುರ್ಬಲ ಪಾಸ್ಪೋರ್ಟ್ ಹೊಂದಿರುವ ದೇಶವೆನಿಸಿದೆ. ಅದರ ನಾಗರಿಕರು ಕೇವಲ 26 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು.
ಇರಾನ್ ಮತ್ತು ಸುಡಾನ್ 94 ನೇ ಸ್ಥಾನ, ಎರಿಟ್ರಿಯಾ 95 ನೇ ಸ್ಥಾನ, ಉತ್ತರ ಕೊರಿಯಾ 96 ನೇ ಸ್ಥಾನ, ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ 97 ನೇ ಸ್ಥಾನ, ಲಿಬಿಯಾ ಮತ್ತು ನೇಪಾಳ 98 ನೇ ಸ್ಥಾನ ಮತ್ತು ಸೊಮಾಲಿಯಾ 99 ನೇ ಸ್ಥಾನದಲ್ಲಿವೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಹೊಂದಿರುವ ರಾಷ್ಟ್ರ ಸಿಂಗಾಪುರ, ಭಾರತಕ್ಕೆ ಎಷ್ಟನೇ ಸ್ಥಾನ?
ಹೆನ್ಲೀ ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ ಭಾರತ 82ನೇ ಸ್ಥಾನ ಪಡೆದಿದೆ. ಭಾರತದ ನಾಗರಿಕರು 58 ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಬಹುದು. 195 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯುವ ಮೂಲಕ ಸಿಂಗಾಪುರ ಮತ್ತೊಮ್ಮೆ ದಾಖಲೆಯ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಜರ್ಮನಿ, ಇಟಲಿ, ಜಪಾನ್, ಫ್ರಾನ್ಸ್ ಮತ್ತು ಸ್ಪೇನ್ ಕ್ರಮವಾಗಿ 192 ದೇಶಗಳಿಗೆ ಪ್ರವೇಶ ನೀಡುವ ಮೂಲಕ ಎರಡನೇ ಸ್ಥಾನದಲ್ಲಿವೆ.
ಆಸ್ಟ್ರಿಯಾ, ಫಿನ್ಲ್ಯಾಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ಮೂರನೇ ಸ್ಥಾನದಲ್ಲಿವೆ.
190 ದೇಶಗಳ ಪ್ರಯಾಣಕ್ಕೆ ಅವಕಾಶ ನೀಡುವ ಮೂಲಕ ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನೊಂದಿಗೆ ಯುನೈಟೆಡ್ ಕಿಂಗ್ಡಮ್ ನಾಲ್ಕನೇ ಸ್ಥಾನದಲ್ಲಿದೆ. 186 ಸ್ಥಳಗಳಿಗೆ ಪ್ರವೇಶದೊಂದಿಗೆ ಯುನೈಟೆಡ್ ಸ್ಟೇಟ್ಸ್ ಎಂಟನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಭಾರತ ಬಿಟ್ಟುಹೋಗ್ತೀರಾ? ಟ್ಯಾಕ್ಸ್ ಕಟ್ಟಿ ಹೋಗಿ; ಟಿಸಿ ಸರ್ಟಿಫಿಕೇಟ್ ಕಡ್ಡಾಯ; ಅ. 1ರಿಂದ ಕಾನೂನು ಜಾರಿ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೊದಲ ಬಾರಿಗೆ 185 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಮೂಲಕ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ. 62ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಜಿಗಿಯುವ ಮುಖೇನ ವಿಶ್ವದ ಗಮನಸೆಳೆದಿದೆ. ವ್ಯವಹಾರ, ಪ್ರವಾಸೋದ್ಯಮ ಮತ್ತು ಹೂಡಿಕೆಗೆ ಜಾಗತಿಕ ಕೇಂದ್ರವಾಗಲು ಯುಎಇ ಪ್ರಯತ್ನಿಸುತ್ತಿರುವುದರ ಫಲ ಇದು ಎನ್ನುತ್ತಾರೆ ಹೆನ್ಲೆ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಸಿಇಒ ಜುರ್ಗ್ ಸ್ಟೆಫೆನ್.
“ಒಂದು ದೇಶದ ವೀಸಾಮುಕ್ತ ಶ್ರೇಯಾಂಕಕ್ಕೂ ಅದರ ಆರ್ಥಿಕ ಸಮೃದ್ಧಿಗೂ ಬಲವಾದ ಸಂಬಂಧ ಇದೆ ಎನ್ನುವುದುನ್ನು ನಮ್ಮ ಸಂಶೋಧನೆ ಸತತವಾಗಿ ನಿರೂಪಿಸುತ್ತಾ ಬಂದಿದೆ. ಹೆಚ್ಚಿನ ವೀಸಾ-ಮುಕ್ತ ಶ್ರೇಯಾಂಕ ಹೊಂದಿರುವ ದೇಶಗಳು ಹೆಚ್ಚಿನ ತಲಾ ಜಿಡಿಪಿ ಹೊಂದಿರುವುದು ಕಂಡು ಬಂದಿದೆ. ಹೆಚ್ಚಿನ ವಿದೇಶಿ ನೇರ ಹೂಡಿಕೆ ಮತ್ತು ಹೆಚ್ಚು ದೃಢವಾದ ಅಂತರರಾಷ್ಟ್ರೀಯ ವ್ಯಾಪಾರ ಸಂಬಂಧಗಳನ್ನು ಹೊಂದಿರುತ್ತವೆ” ಎಂದು ಹೆನ್ಲೆ & ಪಾರ್ಟ್ನರ್ಸ್ ಕಂಪನಿ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
– ದರ್ಶಿನಿ ತಿಪ್ಪಾರೆಡ್ಡಿ
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ