ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ

ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಇಟಲಿಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಡೊನಾಲ್ಡ್ ಟ್ರಂಪ್ "ಮೆಲೋನಿ ಫೋಟೋಗಾಗಿ ನನ್ನ ಬಳಿ ಬೇಡಿಕೊಂಡಿದ್ದರು" ಎಂದಿದ್ದರು. ಈ ಹೇಳಿಕೆಗೆ ಇಟಲಿ ಪ್ರಧಾನಿ ಖಡಕ್ ಕೌಂಟರ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ7 ಶೃಂಗಸಭೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ.

ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ
Meloni With Trump At G7 Summit
Image Credit source: AP

Updated on: Jun 19, 2026 | 5:29 PM

ನವದೆಹಲಿ, ಜೂನ್ 19: ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅಮೆರಿಕ ಮತ್ತು ಇಟಲಿಯ ನಾಯಕರು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಇಟಲಿಯ ‘La7 ಟಿವಿ’ ವಾಹಿನಿಗೆ ನೀಡಿದ ವಿಶೇಷ ಫೋನ್ ಸಂದರ್ಶನದಲ್ಲಿ ಟ್ರಂಪ್ (Donald Trump) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಅಕ್ಷರಶಃ ಬೇಡಿಕೊಂಡರು. ಆಕೆಗೆ ನನ್ನೊಂದಿಗೆ ಫೋಟೋ ಬೇಕೇ ಬೇಕಿತ್ತು. ನನಗೇನೂ ಆಕೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ, ಆಕೆಯನ್ನು ನೋಡಿ ಪಾಪ ಅನಿಸಿದ್ದರಿಂದ ನಾನು ಫೋಟೋ ಕ್ಲಿಕ್ಕಿಸಿಕೊಳ್ಳಲು ಒಪ್ಪಿಕೊಂಡೆ” ಎಂದಿದ್ದರು.

“ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಬೇಡಿಕೊಂಡಿದ್ದರು” ಎಂದು ಟ್ರಂಪ್ ನೀಡಿರುವ ಹೇಳಿಕೆಯನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೀವ್ರವಾಗಿ ಖಂಡಿಸಿದ್ದು, “ಇದು ಸಂಪೂರ್ಣ ಸುಳ್ಳು, ಇಟಲಿ ಯಾರ ಬಳಿಯೂ ಬೇಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಇಟಲಿಯ ಉಪಪ್ರಧಾನಿ ತಮ್ಮ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ.


ಇತ್ತೀಚೆಗೆ ಈ ರೀತಿ ಅಸಂಬದ್ಧವಾಗಿ ಹೇಳಿಕೆ ನೀಡುತ್ತಾ ವಿವಾದಕ್ಕೀಡಾಗುತ್ತಿರುವ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. “ನಾನು ಮೆಲೋನಿ ಜೊತೆ ಫೋಟೋ ತೆಗೆಸಿಕೊಂಡು, ಮಾತನಾಡಿದ್ದಕ್ಕೇ ಆಕೆ ಧನ್ಯಳಾಗಿರಬೇಕು. ಆಕೆಯೊಂದಿಗೆ ಮಾತನಾಡುವ ಯಾವುದೇ ಅಗತ್ಯ ನನಗಿರಲಿಲ್ಲ” ಎಂದು ಟ್ರಂಪ್ ಲೇವಡಿ ಮಾಡಿದ್ದರು.

ಇದನ್ನೂ ಓದಿ: ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ

ಈ ಹೇಳಿಕೆ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಟ್ರಂಪ್ ಅವರ ಈ ಹೇಳಿಕೆಗೆ ಇಟಲಿ ಪ್ರಧಾನಿ ಮೆಲೋನಿ ಕೂಡ ತಿರುಗೇಟು ನೀಡಿದ್ದಾರೆ. “ಇಟಲಿ ಎಂದಿಗೂ ಯಾರ ಬಳಿಯೂ ಬೇಡುವುದಿಲ್ಲ” ಎಂದು ಟ್ರಂಪ್‌ಗೆ ಮೆಲೋನಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಟ್ರಂಪ್ ಅವರ ಈ ಅಹಂಕಾರದ ಹೇಳಿಕೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಕಟ್ಟುಕಥೆ. ಅಮೆರಿಕ ಅಧ್ಯಕ್ಷರು ತಮ್ಮದೇ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಈ ರೀತಿ ನಡೆದುಕೊಳ್ಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಅವರು ತಮ್ಮ ಮಿತ್ರರನ್ನು ಅವಮಾನಿಸುತ್ತಿರುವುದು ಇದೇ ಮೊದಲೇನಲ್ಲ. ಪಾಶ್ಚಿಮಾತ್ಯ ದೇಶಗಳ ಮತ್ತು ಅಮೆರಿಕದ ನಿಜವಾದ ಶತ್ರುಗಳ ಮುಂದೆ ಮಣಿಯುವ ಟ್ರಂಪ್ ತನ್ನ ಮಿತ್ರರ ಮುಂದೆ ಈ ರೀತಿ ದರ್ಪ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ. ಟ್ರಂಪ್ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಮತ್ತು ಇಟಲಿ ದೇಶ ಎಂದಿಗೂ ಯಾರ ಬಳಿಯೂ ಬೇಡುವುದಿಲ್ಲ” ಎಂದು ಮೆಲೋನಿ ಸಿಡಿದೆದ್ದಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಇನ್ನು, ಟ್ರಂಪ್ ಅವರ ಈ ಹೇಳಿಕೆಯನ್ನು “ಇಡೀ ಇಟಲಿ ದೇಶಕ್ಕೆ ಮಾಡಿದ ಅಪಮಾನ” ಎಂದು ಟೀಕಿಸಿರುವ ಇಟಲಿಯ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ ಟ್ರಂಪ್ ವರ್ತನೆಗೆ ಪ್ರತಿರೋಧವಾಗಿ ಜೂನ್ 21 ಮತ್ತು 22ರಂದು ನಿಗದಿಯಾಗಿದ್ದ ತಮ್ಮ ಅಧಿಕೃತ ಅಮೆರಿಕ ಪ್ರವಾಸವನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ.

ಅಂದಹಾಗೆ, ಒಂದಾನೊಂದು ಕಾಲದಲ್ಲಿ ಜಾರ್ಜಿಯಾ ಮೆಲೋನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಾಗಿದ್ದರು. ಅಷ್ಟೇ ಅಲ್ಲದೆ, 2025ರಲ್ಲಿ ನಡೆದ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಏಕೈಕ ಯುರೋಪಿಯನ್ ನಾಯಕಿ ಇವರಾಗಿದ್ದರು. ಆದರೆ, ಇತ್ತೀಚೆಗೆ ಪೋಪ್ ಲಿಯೋ ವಿರುದ್ಧ ಟ್ರಂಪ್ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಮತ್ತು ಇರಾನ್ ಯುದ್ಧದ ವಿಷಯದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಪ್ರಸ್ತುತ ಜಿ7 ಶೃಂಗಸಭೆಯ ಈ ಇಬ್ಬರು ನಾಯಕರ ನಡುವಿನ ಬಿರುಕು ಮತ್ತಷ್ಟು ದೊಡ್ಡದಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us