
ವಾಷಿಂಗ್ಟನ್, ಅಕ್ಟೋಬರ್ 19: ಅಮೆರಿಕ ದೇಶದ ಎಲ್ಲಾ 50 ರಾಜ್ಯಗಳಲ್ಲೂ ನಡೆಯುತ್ತಿರುವ ‘ನೋ ಕಿಂಗ್ಸ್’ ಪ್ರತಿಭಟನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಪಹಾಸ್ಯ ಮಾಡುವ ರೀತಿಯಲ್ಲಿ ಎಐ ಸೃಷ್ಟಿತ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನಿನ್ನೆ ಶನಿವಾರ ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಭಾರೀ ಸಂಖ್ಯೆಯಲ್ಲಿ ಜನರು ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಅಂದಾಜು ಪ್ರಕಾರ 70 ಲಕ್ಷ ಜನರು ದೇಶಾದ್ಯಂತದ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರಂತೆ.
ಆಮದು ಸುಂಕ ಹೇರಿಕೆ, ವಲಸಿಗರನ್ನು ಹತ್ತಿಕ್ಕುವುದು ಇತ್ಯಾದಿ ಡೊನಾಲ್ಡ್ ಟ್ರಂಪ್ ಅವರ ವಿವಿಧ ನೀತಿಗಳನ್ನು ಜನರು ಟೀಕಿಸುತ್ತಿದ್ದಾರೆ. ಅವರ ಆಡಳಿತವು ರಾಜರ ರೀತಿಯಲ್ಲಿ ನಿರಂಕುಶ ಪ್ರಭುತ್ವವಾಗಿ ಮಾರ್ಪಾಡುಗೊಂಡಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆದಿವೆ. ಹೀಗಾಗಿ, ‘ನೋ ಕಿಂಗ್ಸ್’ (ರಾಜ ಅಲ್ಲ) ಎಂದು ಪ್ರತಿಭಟನೆ ಮಾಡಲಾಗಿದೆ. ನ್ಯೂಯಾರ್ಕ್ನ ಟೈಮ್ಸ್ ಸ್ಕ್ವಯರ್ನಲ್ಲಿ ಪ್ರತಿಭಟನಾಕಾರರೇ ತುಂಬಿಹೋಗಿದ್ದರು. ಬೋಸ್ಟಾನ್, ಫಿಲಡೆಲ್ಫಿಯಾ, ಅಟ್ಲಾಂಟಾ, ಡೆನ್ವರ್, ಚಿಕಾಗೋ, ಸಿಯಾಟಲ್ ಮೊದಲಾದ ನಗರಗಳಲ್ಲೂ ಜನರು ಅಮೆರಿಕ ಅಧ್ಯಕ್ಷರ ವಿರುದ್ಧದ ಪ್ರತಿಭಟನೆಗೆ ಸ್ಪಂದಿಸಿದ್ದಾರೆ.
ಇದನ್ನೂ ಓದಿ: ನಿನ್ನೆ ಪ್ರಧಾನಿ ಮೋದಿ- ಟ್ರಂಪ್ ನಡುವೆ ಫೋನ್ ಮಾತುಕತೆ ನಡೆದಿಲ್ಲ; ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತ ಸ್ಪಷ್ಟನೆ
‘ನೋ ಕಿಂಗ್ಸ್’ ಪ್ರತಿಭಟನೆಗೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ಅವರು ಅಣಕಿಸುವ ವಿವಿಧ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ರಾಜನಂತೆ ಕಿರೀಟ ತೊಟ್ಟು ಫೈಟರ್ ಜೆಟ್ನಲ್ಲಿ ಕೂತು ಮೇಲಿನಿಂದ ಕಕ್ಕಸ್ಸನ್ನು ಪ್ರತಿಭಟನಾಕಾರರ ಮೇಲೆ ಎರಚಿ ಹೋಗುವ ಎಐ ಸೃಷ್ಟಿದ ದೃಶ್ಯದ ಒಂದು ವಿಡಿಯೋ ಇದೆ. ಇದನ್ನು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರತಿಭಟನೆಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿರುವ ಹ್ಯಾರಿ ಸಿಸ್ಸನ್ ಮೇಲೆ ಕಕ್ಕಸ್ಸು ಬೀಳುತ್ತಿರುವ ದೃಶ್ಯ ಇದೆ.
ಡೊನಾಲ್ಡ್ ಟ್ರಂಪ್ ಅವರ ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ ಆದ ವಿಡಿಯೋ
‘ಅವರು ನನ್ನನ್ನು ರಾಜ ಎಂದು ಕರೆಯುತ್ತಿದ್ದಾರೆ. ಆದರೆ, ನಾನು ರಾಜ ಅಲ್ಲ’ ಎಂದು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಈ ಪ್ರತಿಭಟನೆಗಳ ಹಿಂದಿರುವ ಡೆಮಾಕ್ರಾಟ್ ಪಕ್ಷವನ್ನೂ ಟೀಕಿಸಿದ್ದಾರೆ. ಈ ಡೆಮಾಕ್ರಾಟ್ನವರು ಸರ್ಕಾರದಿಂದ ಖಾಯಂ ಆಗಿ ಹೊರಗುಳಿದರೆ, ಅವರ ಕಲ್ಯಾಣ ಯೋಜನೆಗಳನ್ನು ಅಡ್ಡಡ್ಡ ಕತ್ತರಿಸುತ್ತೇವೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ಗೆ ನೊಬೆಲ್ ಪ್ರಶಸ್ತಿ ಗ್ಯಾರಂಟಿ, ಪಾಕ್-ಅಫ್ಘಾನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಅಮೆರಿಕ ಅಧ್ಯಕ್ಷ
ಹಾಗೆಯೇ, ಮತ್ತೊಂದು ಎಐ ವಿಡಿಯೋದಲ್ಲಿ ಡೊನಾಲ್ಡ್ ಕಿರೀಟ ಧರಿಸುತ್ತಿದ್ದು, ವಿಪಕ್ಷಗಳ ಮುಖಂಡರಾದ ನ್ಯಾನ್ಸಿ ಪೆಲೋಸಿ ಮತ್ತಿತರರು ಮಂಡಿಯೂರುತ್ತಿರುವುದು ಈ ದೃಶ್ಯಗಳಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ