ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಿರುವ ಅಮೆರಿಕ ರಹಸ್ಯವಾಗಿ ಸಂಧಾನ ಬಯಸುತ್ತಿದೆ; ಇರಾನ್‌ ಆರೋಪ

ಅಮೆರಿಕವು ಇರಾನ್‌ ಮೇಲೆ ಮತ್ತೆ ಹೊಸದಾಗಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವ ನಡುವೆಯೇ ಇರಾನ್ ಹೊಸದೊಂದು ಆರೋಪ ಮಾಡಿದೆ. ಅಮೆರಿಕ ಒಂದು ಕಡೆ ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಾ, ಮತ್ತೊಂದೆಡೆ ರಹಸ್ಯವಾಗಿ ಸಂಧಾನ ಮಾತುಕತೆಗೆ ಪ್ರಯತ್ನಿಸುತ್ತಿದೆ ಎಂದು ಇರಾನ್ ಟೀಕಿಸಿದೆ. ಇರಾನ್‌ನ ಸಂಸದ ಹಸನ್ ಘಷ್ಘವಿ ಈ ಆರೋಪ ಮಾಡಿದ್ದು, ಅಮೆರಿಕವು ಟೆಹ್ರಾನ್ ಮೇಲೆ ಒತ್ತಡ ಹೇರಲು ವಿರೋಧಾತ್ಮಕ ಸಂದೇಶಗಳನ್ನು ಕಳುಹಿಸುತ್ತಿದೆ ಎಂದು ದೂರಿದ್ದಾರೆ.

ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಿರುವ ಅಮೆರಿಕ ರಹಸ್ಯವಾಗಿ ಸಂಧಾನ ಬಯಸುತ್ತಿದೆ; ಇರಾನ್‌ ಆರೋಪ
Donald Trump
Image Credit source: AP

Updated on: Aug 01, 2026 | 9:51 PM

ಟೆಹ್ರಾನ್, ಆಗಸ್ಟ್ 1: ಅಮೆರಿಕವು ಇರಾನ್‌ನ ಗುರಿಗಳ ಮೇಲೆ ಮತ್ತೆ ಹೊಸದಾಗಿ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಉದ್ವಿಗ್ನತೆ ಗಗನಕ್ಕೇರಿದೆ. ಈ ನಡುವೆ, ಅಮೆರಿಕ ಒಂದು ಕಡೆ ಬಹಿರಂಗವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರೆ, ಮತ್ತೊಂದೆಡೆ ರಹಸ್ಯವಾಗಿ ಇರಾನ್ (Iran War) ಜೊತೆ ಸಂಧಾನದ ಮಾತುಕತೆಗೆ ಪ್ರಯತ್ನಿಸುತ್ತಿದೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಇರಾನ್‌ನ ಸಂಸದ ಹಸನ್ ಘಷ್ಘವಿ ಅಮೆರಿಕದ ವಿರುದ್ಧ ಈ ಆರೋಪ ಮಾಡಿದ್ದು, ವಾಷಿಂಗ್ಟನ್ ಮತ್ತಷ್ಟು ಮಿಲಿಟರಿ ದಾಳಿಯ ಬೆದರಿಕೆಗಳನ್ನು ಒಡ್ಡುವ ಮೂಲಕ ಟೆಹ್ರಾನ್ ಮೇಲೆ ತೀವ್ರ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.

“ಅಮೆರಿಕ ಮಾಧ್ಯಮಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಮಾತುಗಳನ್ನಾಡುತ್ತಿದೆ. ಆದರೆ, ಇರುವ ರಹಸ್ಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಧಾನ ನಡೆಸುವಂತೆ ಮನವಿ ಮಾಡುತ್ತಿದೆ. ಇಂತಹ ತಂತ್ರಗಳಿಂದ ಇರಾನ್ ಅನ್ನು ವಂಚಿಸಲು ಸಾಧ್ಯವಿಲ್ಲ” ಎಂದು ಇರಾನ್ ಸಂಸದ ಹಸನ್ ಘಷ್ಘವಿ ಪ್ರತಿಕ್ರಿಯಿಸಿದ್ದಾರೆ. ವಾಷಿಂಗ್ಟನ್ ಮಿಲಿಟರಿ ದಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ಸಂಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಒಂದೇ ದಾರಿಯಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಇರಾನ್ ರೂಪಿಸಿರುವ ನಿಯಮ ಹಾಗೂ ಪ್ರಸ್ತಾವನೆಗಳನ್ನು ಅಮೆರಿಕ ಒಪ್ಪಿಕೊಳ್ಳಲೇಬೇಕು ಎಂದು ಘಷ್ಘವಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೆಲಾನಿಯಾರನ್ನು ಎಲ್ಲಿ ಕೊಲ್ಲಬೇಕು?: ಟ್ರಂಪ್ ಪತ್ನಿ, ಮಗನಿಗೆ ಕೊಲೆ ಬೆದರಿಕೆ ಹಾಕಿದ ಇರಾನ್, ಭದ್ರತೆ ತೀವ್ರ ಹೆಚ್ಚಳ

ಟ್ರಂಪ್ ಹೊಸ ದಾಳಿಯ ಬೆದರಿಕೆ:

ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಮಾತುಕತೆಗಳ ನಡುವೆಯೂ, ಇರಾನ್ ವಿರುದ್ಧ ಮತ್ತೆ ಹೊಸ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಇರಾನ್‌ನಿಂದ ಈ ಹೇಳಿಕೆ ಬಂದಿದೆ. ಈ ವಾರಾಂತ್ಯದಲ್ಲಿಯೇ ಅಮೆರಿಕದಿಂದ ಹೊಸ ಸುತ್ತಿನ ದಾಳಿಗಳು ನಡೆಯಬಹುದು ಎಂದು ವರದಿಗಳು ಸೂಚಿಸಿವೆ. ಇರಾನ್ ಶರಣಾಗಿ ಕದನ ವಿರಾಮದ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡಲು, ಅದರ ಮೇಲೆ ಮತ್ತೊಂದು ಹಂತದ ಬೃಹತ್ ದಾಳಿ ನಡೆಸಲು ಅಮೆರಿಕ ಸೇನೆಗೆ ಟ್ರಂಪ್ ಸೂಚಿಸಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಇದನ್ನೂ ಓದಿ: ಮಾತುಕತೆ ವಿಫಲವಾದರೆ ಇರಾನ್ ವಿರುದ್ಧ ಮತ್ತೆ ಕಠಿಣ ಮಿಲಿಟರಿ ದಾಳಿ, ಇರಾನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

ಜಾಗತಿಕ ಮಾರುಕಟ್ಟೆ ಮತ್ತು ಅಮೆರಿಕದ ಅರ್ಥವ್ಯವಸ್ಥೆಯ ಮೇಲೆ ಆಗಬಹುದಾದ ತೀವ್ರ ಪರಿಣಾಮವನ್ನು ತಪ್ಪಿಸಲು ಸೋಮವಾರ ಹಣಕಾಸು ಮಾರುಕಟ್ಟೆಗಳು ಬಾಗಿಲು ತೆರೆಯುವ ಮುನ್ನವೇ ಈ ಮಿಲಿಟರಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಇಸ್ರೇಲ್‌ಗೂ ಈ ಯೋಜನೆಯ ಮಾಹಿತಿ ನೀಡಲಾಗಿದ್ದು, ಅಮೆರಿಕದೊಂದಿಗೆ ಸಮನ್ವಯ ಸಾಧಿಸುತ್ತಿದೆ. ಆದರೆ, ದಾಳಿಗೆ ಟ್ರಂಪ್ ಇನ್ನೂ ಅಂತಿಮ ಆದೇಶ ನೀಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us