‘ವಾಣಿಜ್ಯ ಹಡಗು, ನಾವಿಕರ ಮೇಲಿನ ದಾಳಿ ತಡೆಯಿರಿ’; ಇರಾನ್ ವಿದೇಶಾಂಗ ಸಚಿವರ ಜೊತೆ ಭಾರತ ಮಾತುಕತೆ
ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಮೇಲಿನ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಮತ್ತು ಅಂತಹ ದಾಳಿಗಳನ್ನು ತಕ್ಷಣವೇ ತಡೆಯಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘಚಿ ಅವರಿಗೆ ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರದ ಕುರಿತು ಭಾರತಕ್ಕಿರುವ ತೀವ್ರ ಕಳವಳವನ್ನು ವಿದೇಶಾಂಗ ಸಚಿವರು ಇರಾನ್‌ಗೆ ರವಾನಿಸಿದ್ದಾರೆ.

ನವದೆಹಲಿ, ಜುಲೈ 31: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಇಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘಚಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಸಂಭಾಷಣೆ ನಡೆಸಿದ್ದು, ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಸಂಘರ್ಷಗಳ ಕುರಿತು ಭಾರತಕ್ಕಿರುವ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ವಾಣಿಜ್ಯ ಹಡಗುಗಳು ಮತ್ತು ನಾವಿಕರನ್ನು ಟಾರ್ಗೆಟ್ ಮಾಡಬಾರದು ಎಂದು ಸಚಿವ ಜೈಶಂಕರ್ ಇರಾನ್‌ಗೆ ಮನವಿ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಜೈಶಂಕರ್, “ಇಂದು ಸಂಜೆ ಇರಾನ್ ವಿದೇಶಾಂಗ ಸಚಿವ ಅರಾಘಚಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರದ ಕುರಿತು ನಮ್ಮ ತೀವ್ರ ಕಳವಳವನ್ನು ಅವರಿಗೆ ತಿಳಿಸಿದೆ. ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳನ್ನು ತಕ್ಷಣವೇ ತಡೆಯಬೇಕು ಎಂದು ಬಲವಾಗಿ ಆಗ್ರಹಿಸಿದೆ. ಯಾವುದೇ ಕಡೆಯಿಂದ ಇಂತಹ ದಾಳಿಗಳು ನಡೆದರೂ ಅದನ್ನು ಭಾರತ ಖಂಡಿಸುತ್ತದೆ” ಎಂದು ತಿಳಿಸಿದ್ದಾರೆ.
Had a tele-conversation with FM @araghchi of Iran this evening. Conveyed our deep concerns at the ongoing hostilities in the region.
Strongly urged that attacks on commercial shipping and seafarers be avoided under any circumstance. India condemns any such attack by any party.…
— Dr. S. Jaishankar (@DrSJaishankar) July 31, 2026
ಇದನ್ನೂ ಓದಿ: ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು
ಪಶ್ಚಿಮ ಏಷ್ಯಾ ಮತ್ತು ಹಾರ್ಮುಜ್ ಜಲಸಂಧಿ ಭಾಗದಲ್ಲಿ ಜಾಗತಿಕ ಕಡಲ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದ್ದು, ಹಲವು ಹಡಗುಗಳ ಮೇಲಿನ ದಾಳಿಯಿಂದಾಗಿ ಭಾರತೀಯ ನಾವಿಕರು ಸೇರಿದಂತೆ ಹಲವರ ಜೀವಕ್ಕೆ ಅಪಾಯ ಉಂಟಾಗಿದೆ. ಜಾಗತಿಕ ವಾಣಿಜ್ಯ ಸರಕು ಸಾಗಣೆಗೆ ಪ್ರಮುಖವಾಗಿರುವ ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು ಮತ್ತು ಯಾವುದೇ ಸಂಘರ್ಷದಲ್ಲೂ ನಾಗರಿಕ ವಾಣಿಜ್ಯ ಹಡಗುಗಳನ್ನು ಅಥವಾ ನಾವಿಕರನ್ನು ಎಳೆದು ತರಬಾರದು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.
ಇದನ್ನೂ ಓದಿ: ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ
ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಭಾರತವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಬೆಂಬಲಿಸುತ್ತದೆ ಎಂಬುದನ್ನು ಭಾರತದ ವಿದೇಶಾಂಗ ಸಚಿವರು ಈ ಮಾತುಕತೆಯ ವೇಳೆ ಒತ್ತಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




