- TV9 Kannada Photo gallery Cricket photos Abhishek Sharma: Home Hero, Away Zero? Analyzing His Contrasting T20 Stats
ಅಭಿಷೇಕ್ ಶರ್ಮಾ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ..!
ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ, ಆದರೆ ವಿದೇಶಿ ನೆಲದಲ್ಲಿ ಅವರ ಬ್ಯಾಟ್ ಮೌನವಾಗಿದೆ. ಇತ್ತೀಚಿನ ಆರು ವಿದೇಶಿ ಇನ್ನಿಂಗ್ಸ್‌ಗಳಲ್ಲಿ ಎರಡಂಕಿಯನ್ನೂ ತಲುಪಿಲ್ಲ. ತವರಿನಲ್ಲಿ ಶತಕ ಸಿಡಿಸಿದರೂ, ವಿದೇಶದಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಈ ವ್ಯತ್ಯಾಸವು ಆಯ್ಕೆದಾರರಿಗೆ ದೊಡ್ಡ ಚಿಂತೆಯಾಗಿದೆ. ಅವರ ಒಟ್ಟಾರೆ ಅಂಕಿಅಂಶಗಳು ಈ ಸಮಸ್ಯೆಯನ್ನು ದೃಢಪಡಿಸುತ್ತವೆ.
Updated on:Oct 01, 2026 | 4:56 PM

ಏಷ್ಯನ್ ಗೇಮ್ಸ್ 2026 ರ ಪುರುಷರ ಕ್ರಿಕೆಟ್ ಈವೆಂಟ್‌ನ ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಿತು. ಈ ಪಂದ್ಯದಲ್ಲಿ ಶ್ರೀಲಂಕಾವನ್ನು 124 ರನ್ಗಳಿಂದ ಮಣಿಸಿದ ಭಾರತ ಸತತ ಎರಡನೇ ಬಾರಿಗೆ ಫೈನಲ್ಗೇರಿದೆ. ಇದೀಗ ಫೈನಲ್ನಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ(PC-PTI).

ಆದಾಗ್ಯೂ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಒಂದಂಕಿಗೆ ಸುಸ್ತಾದರು. ಅದರಲ್ಲೂ ಭಾರತದ ನೆಲದಲ್ಲಿ ರನ್‌ಗಳ ಮಳೆ ಸುರಿಸುವ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ವಿದೇಶಿ ನೆಲದಲ್ಲಿ ವಿಫಲರಾದರು, ಕೇವಲ 3 ಎಸೆತಗಳಲ್ಲಿ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು(PC-PTI).

ವಾಸ್ತವವಾಗಿ ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್ ಭಾರತದ ನೆಲಕಷ್ಟೇ ಸೀಮಿತ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿದೆ. ಇದಕ್ಕೆ ಕಾರಣ ವಿದೇಶಿ ನೆಲದಲ್ಲಿ ಅವರ ಅಂಕಿಅಂಶಗಳು. ಭಾರತದ ಹೊರಗೆ ಆಡಿರುವ ತಮ್ಮ ಕೊನೆಯ ಆರು ಟಿ20 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ(PC-PTI).

ಈ ಆರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಒಮ್ಮೆಯೂ ಎರಡಂಕಿಯನ್ನು ತಲುಪದಿರುವುದು ಅವರು ವಿದೇಶಿ ನೆಲದಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವುದನ್ನು ಸಾಭೀತುಪಡಿಸುತ್ತದೆ. ಈ ಆರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಕ್ರಮವಾಗಿ 3, 1, 8, 2, 0 ಮತ್ತು 7 ರನ್ ಗಳಿಸಿದ್ದಾರೆ. ಹೀಗಾಗಿ ಅವರ ಪ್ರದರ್ಶನವು ಭಾರತೀಯ ತಂಡದ ನಿರ್ವಹಣೆ ಮತ್ತು ಆಯ್ಕೆದಾರರಿಗೆ ಕಳವಳವನ್ನುಂಟುಮಾಡಿದೆ(PC-PTI).

ಆಶ್ಚರ್ಯಕರವೆಂದರೆ ಭಾರತದಲ್ಲಿ ಆಡಿದ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ 82, 38 ಮತ್ತು 108 ರನ್‌ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತವರು ನೆಲದಲ್ಲಿ ಸಂಚಲನ ಮೂಡಿಸಿದ್ದಾರೆ. ಆದರೆ ವಿದೇಶಿ ನೆಲಕ್ಕೆ ಕಾಲಿಟ್ಟ ತಕ್ಷಣ ಅಭಿಷೇಕ್ ಅವರ ಬ್ಯಾಟ್ ಮೌನಕ್ಕೆ ಶರಣಾಗುತ್ತಿದೆ(PC-PTI).

ಅಭಿಷೇಕ್ ಶರ್ಮಾ ಅವರ ಒಟ್ಟಾರೆ ಟಿ20 ವೃತ್ತಿಜೀವನದ ಅಂಕಿಅಂಶಗಳು ವಿದೇಶಿ ಪಿಚ್‌ಗಳ ವೇಗ, ಬೌನ್ಸ್ ಮತ್ತು ಸ್ವಿಂಗ್‌ಗೆ ಹೊಂದಿಕೊಳ್ಳಲು ಅವರು ಹೆಣಗಾಡಿದ್ದಾರೆ ಎಂದು ಸೂಚಿಸುತ್ತದೆ. ತವರಿನಲ್ಲಿ 1,000 ರನ್‌ಗಳ ಹತ್ತಿರವಿದ್ದರೂ, ಬಹುತೇಕ ಅಷ್ಟೇ ಸಂಖ್ಯೆಯ ವಿದೇಶ ಪಂದ್ಯಗಳಲ್ಲಿ ಕೇವಲ 605 ರನ್‌ಗಳನ್ನು ಗಳಿಸಿದ್ದಾರೆ. ತವರಿನಲ್ಲಿ ಇದುವರೆಗೆ ಆಡಿರುವ 27 ಪಂದ್ಯಗಳಲ್ಲಿ 969 ರನ್‌ಗಳಿಸಿರುವ ಅಭಿಷೇಕ್ ವಿದೇಶದಲ್ಲಿ ಆಡಿರುವ 26 ಪಂದ್ಯಗಳಲ್ಲಿ ಕೇವಲ 605 ರನ್‌ಗಳನ್ನು ಗಳಿಸಿದ್ದಾರೆ(PC-PTI).
Published On - 4:53 pm, Thu, 1 October 26

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



