ತೀವ್ರ ಆರ್ಥಿಕ ಬಿಕ್ಕಟ್ಟು: ಹೊರದೇಶಗಳಲ್ಲಿ ನೌಕರಿ ಮಾಡಲಿಚ್ಛಿಸುವ ಯುವತಿಯರ ವಯೋಮಿತಿಯನ್ನು 21ಕ್ಕಿಳಿಸಿದ ಶ್ರೀಲಂಕಾ ಸರ್ಕಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 22, 2022 | 8:00 AM

ಅದರೆ ಲಂಕಾ ಈಗ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸರ್ಕಾರವು ವಯೋಮಿತಿಯನ್ನು ಸಡಲಿಸಿದ್ದು ಸೌದಿ ಅರೇಬಿಯಾ ಸೇರಿದಂತೆ ಯಾವುದೇ ದೇಶಕ್ಕೆ ನೌಕರಿ ಮಾಡಲು ಹೋಗಲಿಚ್ಛಿಸುವ ಯುವತಿಯರ ವಯಸ್ಸು 21 ಆಗಿದ್ದರೆ ಸಾಕೆಂದು ನಿಯಮವನ್ನು ತಿದ್ದುಪಡಿ ಮಾಡಿದೆ.

ತೀವ್ರ ಆರ್ಥಿಕ ಬಿಕ್ಕಟ್ಟು: ಹೊರದೇಶಗಳಲ್ಲಿ ನೌಕರಿ ಮಾಡಲಿಚ್ಛಿಸುವ ಯುವತಿಯರ ವಯೋಮಿತಿಯನ್ನು 21ಕ್ಕಿಳಿಸಿದ ಶ್ರೀಲಂಕಾ ಸರ್ಕಾರ
ಹೀಗಿದೆ ಶ್ರೀಲಂಕಾದ ಸ್ಥಿತಿ
Follow us on

Colombo:  ಶ್ರೀಲಂಕಾದಲ್ಲಿ (Sri Lanka) ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ದ್ವೀಪರಾಷ್ಟ್ರ (island nation) ದಿವಾಳಿಯೆದ್ದಿರುವುದು ಒಂದು ಬಹಿರಂಗ ಸತ್ಯ. ಈ ಹಿನ್ನೆಲೆಯಲ್ಲೇ ದೇಶದ ಯುವತಿಯರು ಬೇರೆ ದೇಶಗಳಿಗೆ ನೌಕರಿ ಮಾಡುವ ವಯೋಮಿತಿಯನ್ನು (age limit) ಅಲ್ಲಿನ ಸರ್ಕಾರ 21ಕ್ಕೆ ಇಳಿಸಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ವಿದೇಶಗಳಿಗೆ ತೆರಳಿ ಡಾಲರ್ ಗಳನ್ನು ಸಂಪಾದಿಸಿಲಿ ಅನ್ನೋದು ಲಂಕಾ ಸರಕಾರದ ಉದ್ದೇಶವಾಗಿದೆ.

ನಿಮಗೆ ನೆನಪಿರಬಹುದು. 2013ರಲ್ಲಿ ಶ್ರೀಲಂಕಾದ 17-ವರ್ಷ-ವಯಸ್ಸಿನ ಯುವತಿಯೊಬ್ಬಳು ಸೌದಿ ಅರೇಬಿಯಾದಲ್ಲಿ ನ್ಯಾನಿಯಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಅವಳ ಆರೈಕೆಯಲ್ಲಿದ್ದ ಮಗುವೊಂದು ಸತ್ತಾಗ ಶಿಕ್ಷೆಯ ರೂಪದಲ್ಲಿ ಅಲ್ಲಿನ ಸರ್ಕಾರ ಯುವತಿಯ ಶಿರಚ್ಛೇದಕ್ಕೆ ಅದೇಶ ನೀಡಿತ್ತು.

ಅವಳ ಘೋರ ಶಿಕ್ಷೆಯ ಬಳಿಕ ಶ್ರೀಲಂಕಾದ ಜನ ಸಿಟ್ಟಿನಿಂದ ಕುದಿಯತೊಡಗಿದ್ದರು. ಆಗಲೇ ಸರ್ಕಾರ ವಿದೇಶಕ್ಕೆ ನೌಕರಿ ಮಾಡಲು ಹೋಗಬಯಸುವ ಶ್ರೀಲಂಕಾ ಮಹಿಳೆಯೊಬ್ಬಳ ವಯಸ್ಸು ಕನಿಷ್ಟ 23 ಆಗಿರಬೇಕೆಂಬ ನಿಯಮ ಜಾರಿಗೊಳಿಸಿತು.

ಅದರೆ ಲಂಕಾ ಈಗ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸರ್ಕಾರವು ವಯೋಮಿತಿಯನ್ನು ಸಡಲಿಸಿದ್ದು ಸೌದಿ ಅರೇಬಿಯಾ ಸೇರಿದಂತೆ ಯಾವುದೇ ದೇಶಕ್ಕೆ ನೌಕರಿ ಮಾಡಲು ಹೋಗಲಿಚ್ಛಿಸುವ ಯುವತಿಯರ ವಯಸ್ಸು 21 ಆಗಿದ್ದರೆ ಸಾಕೆಂದು ನಿಯಮವನ್ನು ತಿದ್ದುಪಡಿ ಮಾಡಿದೆ.

ಯುವಕರು ಸೇರಿದಂತೆ ಯುವತಿಯರಿಗೂ ಹೊರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರದ ಸಚಿವ ಸಂಪುಟವು ಮಹಿಳೆಯರ ಕನಿಷ್ಟ ವಯೋಮಿತಿಯನ್ನು 21 ಕ್ಕೆ ಇಳಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ, ಎಂದು ಸರ್ಕಾರದ ವಕ್ತಾರ ಬಂಡುಲ ಗುಣವರ್ದನ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದರು.

ಹೊರದೇಶಗಳಲ್ಲಿ ಕೆಲಸ ಲಂಕನ್ನರು ಮಾಡುವ ಪಾವತಿಗಳು ಶ್ರೀಲಂಕಾದ ಒಂದು ಪ್ರಮುಖ ವಿದೇಶೀ ವಿನಿಮಯದ ಮೂಲವಾಗಿದ್ದು ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 7 ಬಿಲಿಯನ್ ಡಾಲರ್ ದುಡ್ಡು ಜಮೆಯಾಗುತ್ತದೆ.

ಕೊರೊನಾ ಪಿಡುಗಿನ ಸಮಯದಲ್ಲಿ ಅಂದರೆ 2021 ರಲ್ಲಿ ಸದರಿ ಆದಾಯದ ಮೂಲವು 5.4 ಬಿಲಿಯನ್ ಡಾಲರ್ ಗೆ ಕುಸಿಯಿತು ಮತ್ತು ಭಯಂಕರ ಆರ್ಥಿಕ ಸಂಕಷ್ಟದ ಪ್ರಸಕ್ತ ವರ್ಷದಲ್ಲಿ ಅದು ಮತ್ತಷ್ಟು ಕುಸಿದು 3.5 ಬಿಲಿಯನ್ ಡಾಲರ್ ತಲುಪಲಿದೆ ಎಂದು ಹೇಳಲಾಗುತ್ತಿದೆ.

ಸುಮಾರು ಎರಡೂ ಕಾಲು ಕೋಟಿ ಜನಸಂಖ್ಯೆಯ ಶ್ರೀಲಂಕಾದ ಹೆಚ್ಚುಕಡಿಮೆ 16 ಲಕ್ಷ ಜನ ಮುಖ್ಯವಾಗಿ ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೌಕರಿ ಮಾಡುತ್ತಿದ್ದಾರೆ.

ದಕ್ಷಿಣ ಏಷ್ಯಾದ ಈ ದೇಶದಲ್ಲಿ ವಿದೇಶೀ ವಿನಿಮಯದ ಮೂಲಗಳು ಯಾವಮಟ್ಟಿಗೆ ಕುಸಿದಿವೆಯೆಂದರೆ, ಸರ್ಕಾರವು ಅಗತ್ಯ ವಸ್ತುಗಳಾದ ಆಹಾರ, ಇಂಧನ ಮತ್ತು ಔಷಧಿಯ ಮೊದಲಾದವುಗಳ ಅಮದನ್ನು ಸಹ ಸೀಮಿತಗೊಳಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ