
ಸ್ಯಾನ್ ಡಿಯಾಗೋ, ಸೆಪ್ಟೆಂಬರ್ 08: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋದಲ್ಲಿರುವ ಮಾಂಟ್ಗೊಮೆರಿ-ಗಿಬ್ಸ್ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣದ ರನ್‌ವೇ ಮೇಲೆ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಧಗಧಗನೆ ಹೊತ್ತಿ ಉರಿದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ ನಡೆದ ಈ ದುರಂತದಲ್ಲಿ ವಿಮಾನವು ತೀವ್ರವಾಗಿ ಜಖಂಗೊಂಡಿದ್ದು, ರನ್‌ವೇಯಲ್ಲೇ ಭಾರಿ ಪ್ರಮಾಣದ ಜೆಟ್ ಇಂಧನ ಸೋರಿಕೆಯಾದ ಕಾರಣ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರನ್‌ವೇ ಮಧ್ಯದಲ್ಲೇ ದುರಂತ: ಸಣ್ಣ ಸೆಸ್ನಾ ಮಾದರಿಯ ವಿಮಾನವು ರನ್‌ವೇ ಮಧ್ಯಭಾಗದಲ್ಲಿ ಅಪಘಾತಕ್ಕೀಡಾಗಿ ತಕ್ಷಣ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಇಲಾಖೆ ದೃಢಪಡಿಸಿದೆ.
30 ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ: ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಯಾನ್ ಡಿಯಾಗೋ ಅಗ್ನಿಶಾಮಕ ಮತ್ತು ರಕ್ಷಣಾ ದಳದ (SDFD) ಸುಮಾರು 30 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಜೆಟ್ ಇಂಧನ ಸೋರಿಕೆ: ಬೆಂಕಿಯನ್ನು ನಂದಿಸಲಾಗಿದ್ದರೂ, ಜಖಂಗೊಂಡ ವಿಮಾನದಿಂದ ಸಕ್ರಿಯವಾಗಿ ಜೆಟ್ ಇಂಧನ ಸೋರಿಕೆಯಾಗುತ್ತಿತ್ತು. ಇಂಧನ ಬೇರೆಡೆ ಹರಡದಂತೆ ತಡೆದು, ಅದನ್ನು ಸ್ವಚ್ಛಗೊಳಿಸಲು ವಿಶೇಷ ಗುತ್ತಿಗೆದಾರರ ತಂಡವನ್ನು ನಿಯೋಜಿಸಲಾಗಿದೆ.
ಅಪಘಾತ ಸಂಭವಿಸಿದ ಬೆನ್ನಲ್ಲೇ ಇತರ ಎಲ್ಲಾ ವಿಮಾನಗಳ ಸಂಚಾರವನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದ್ದು, ರನ್‌ವೇಯಿಂದ ಇಂಧನ ಹಾಗೂ ಅವಶೇಷಗಳನ್ನು ತೆರವುಗೊಳಿಸಿದ ನಂತರವಷ್ಟೇ ನಿಲ್ದಾಣವನ್ನು ಪುನರಾರಂಭಿಸಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಸೂಚಿಸಿದೆ.
ವಿಡಿಯೋ
An exclusive video footage capturing the moment when Amazon branded cargo plane crash landed at Miami International Airport leaving five people dead and five injured.
The Boeing 767 had just landed from San Juan, Puerto Rico when it overan Runway 30 plunging into parked… pic.twitter.com/jROFA1xtYu— JaHomaBay (@HassanMcOjwang) September 7, 2026
ಅಪಘಾತಕ್ಕೆ ನಿಖರ ಕಾರಣ ಅಸ್ಪಷ್ಟ: ವಿಮಾನವು ಟೇಕ್-ಆಫ್ ಆಗುವಾಗ ನಿಯಂತ್ರಣ ತಪ್ಪಿತೇ ಅಥವಾ ಲ್ಯಾಂಡಿಂಗ್ ಮಾಡುವಾಗ ಅಪಘಾತಕ್ಕೀಡಾಯಿತೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಎಫ್‌ಎಎ ತನಿಖಾಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ.
ಮತ್ತಷ್ಟು ಓದಿ: ಶ್ರೀನಗರ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ
ಮೇರಿಲ್ಯಾಂಡ್‌ನಲ್ಲಿ ಮತ್ತೊಂದು ಅವಘಡ: ಇದೇ ದಿನ ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಮಾಂಟ್ಗೊಮೆರಿ ಕೌಂಟಿ ಏರ್‌ಪಾರ್ಕ್‌ನಲ್ಲೂ ಮತ್ತೊಂದು ಸಣ್ಣ ವಿಮಾನವು ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದ ಕಠಿಣ ಲ್ಯಾಂಡಿಂಗ್ ಮಾಡಿತ್ತು. ಆದರೆ ಅದೃಷ್ಟವಶಾತ್ ಅದರಲ್ಲಿದ್ದ ಇಬ್ಬರು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Tue, 8 September 26