ಪ್ರಾರ್ಥನೆ ನೆಪದಲ್ಲಿ ಎದ್ದುನಿಂತು ಕ್ಯಾ. ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ್ದ ಫ್ಲೈದುಬೈ ಸಹ ಪೈಲಟ್!

ದುಬೈ-ಟೆಲ್ ಅವೀವ್ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಕೊಡಲಿ ದಾಳಿಗೊಳಗಾದ ಭಾರತೀಯ ಪೈಲಟ್ ಕ್ಯಾ. ಸ್ಮಿತ್ ಮಚ್ಚರ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಕರೆ ಮಾಡಿ ಆರೋಗ್ಯ ವಿಚಾರಿಸಿ, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಈ ವೇಳೆ ಅಂದು ನಡೆದ ಘಟನೆ ಬಗ್ಗೆ ಹಲವು ಪ್ರಮುಖ ವಿಚಾರಗಳು ಬಹಿರಂಗವಾಗಿದ್ದು, ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ತನ್ನ ಆಸನದಿಂದ ಎದ್ದು ನಿಂತವ ಏಕಾಏಕಿ ದಾಳಿ ನಡೆಸಿರೋದು ಗೊತ್ತಾಗಿದೆ.

ಪ್ರಾರ್ಥನೆ ನೆಪದಲ್ಲಿ ಎದ್ದುನಿಂತು ಕ್ಯಾ. ಸ್ಮಿತ್ ಮಚ್ಚರ್  ಮೇಲೆ ದಾಳಿ ನಡೆಸಿದ್ದ ಫ್ಲೈದುಬೈ ಸಹ ಪೈಲಟ್!
Fly Dubai Incident

Updated on: Oct 04, 2026 | 9:08 AM

ಅಬುಧಾಬಿ, ಅಕ್ಟೋಬರ್ 4: ಸೆಪ್ಟೆಂಬರ್ 30ರಂದು ದುಬೈ-ಟೆಲ್ ಅವೀವ್ ಮಾರ್ಗದ FZ1073 ವಿಮಾನದಲ್ಲಿ ನಡೆದ ಘಟನೆಯ ಮತ್ತೊಂದು ಆತಂಕಕಾರಿ ಸಂಗತಿ ಬಯಲಾಗಿದೆ. ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ತನ್ನ ಆಸನದಿಂದ ಎದ್ದು ನಿಂತಿದ್ದ. ಆ ಬಳಿಕ ಕೆಲವೇ ನಿಮಿಷಗಳಲ್ಲಿ ಕ್ಯಾ.ಸ್ಮಿತ್ ಮಚ್ಚರ್ ಅವರ ಮೇಲೆ ಹಿಂದಿನಿಂದ ಕೊಡಲಿಯಿಂದ ಹಲ್ಲೆ ನಡೆಸಿದ್ದ. ಈ ವೇಳೆ ಕಾಕ್‌ಪಿಟ್ ಬಾಗಿಲನ್ನು ಮಚ್ಚರ್​​ ಒಮ್ಮೆ ತೆರೆದಿದ್ದರಾದರೂ ಸಹ ಪೈಲಟ್ ಅದನ್ನು ಮುಚ್ಚಿದ್ದ. ಬಳಿಕ ದೃಷ್ಟಿ ಸಂಪೂರ್ಣ ಮಸುಕಾಗಿದ್ದರೂ ಕೊನೆಯ ಪ್ರಯತ್ನದಲ್ಲಿ ಬಾಗಿಲನ್ನು ತೆರೆಯಲು ಮಚ್ಚರ್​​ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂಬುದೀಗ ಗೊತ್ತಾಗಿದೆ.

ಕ್ಯಾ.ಸ್ಮಿತ್ ಮಚ್ಚರ್​​ಗೆ ಇಸ್ರೇಲ್ ಪ್ರಧಾನಿ ಕರೆ

ಭಾರತೀಯ ಪೈಲಟ್​ ಕ್ಯಾ.ಸ್ಮಿತ್ ಮಚ್ಚರ್​​ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಸ್ಮಿತ್​ ಮಚ್ಚರ್​ಗೆ ಹಾರೈಸಿದ ಅವರು, ನೀವು ಭಾರತ ಮತ್ತು ಇಸ್ರೇಲ್ ಜನರ ಪಾಲಿಗೆ ನಿಜವಾದ ಹೀರೋ ಎಂದು ಶ್ಲಾಘಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ನಿಮ್ಮ ಧೈರ್ಯ ಮತ್ತು ಸಮಯಪ್ರಜ್ಞೆ ಕಂಡು ನನಗೆ ಆಶ್ಚರ್ಯವಾಗಿದೆ ಎಂದವರು ಸ್ಮಿತ್​​ರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸ್ಮಿತ್​ಗೆ ಆಹ್ವಾನ ನೀಡಿದ ನೆತನ್ಯಾಹು, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ವೇಳೆ ದೀಪ ಬೆಳಗಿಸಲು ನಿಮ್ಮನ್ನು ಮತ್ತು ತನ್ನ ಸ್ನೇಹಿತ ಪ್ರಧಾನಿ ಮೋದಿರನ್ನು ಆಹ್ವಾನಿಸುವೆ ಎಂದಿದ್ದಾರೆ. ಸ್ಮಿತ್ ಜೊತೆ ಸುಮಾರು 6 ನಿಮಿಷಗಳ ಕಾಲ ನೆತನ್ಯಾಹು ಮಾತನಾಡಿದ್ದಾರೆ.

ಇದನ್ನೂ ಓದಿ:  ನಿಮ್ಮ ಬಗ್ಗೆ ಹೆಮ್ಮೆಯಿದೆ’; ಆಸ್ಪತ್ರೆಯಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಹಣೆಗೆ ಮುತ್ತನ್ನಿಟ್ಟ ಯುಎಇ ಉಪ ಪ್ರಧಾನಿ

ನೆತನ್ಯಾಹು- ಮಚ್ಚರ್​​ ಮಾತುಕತೆ ವೇಳೆ ಹಲವು ವಿಚಾರ ಬಹಿರಂಗ

ನೆತನ್ಯಾಹು ಜೊತೆಗಿನ ಮಾತುಕತೆಯಲ್ಲಿ ದಾಳಿ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಕಾಕ್‌ಪಿಟ್‌ನಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ಮಚ್ಚರ್​​ ಹೆಚ್ಚಿನ ವಿವರ ನೀಡಿದ್ದಾರೆ. ಬೋಯಿಂಗ್ 737 MAX 8 ವಿಮಾನ ಸಾಮಾನ್ಯವಾಗಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಓಮನ್‌ನ ಸಹ ಪೈಲಟ್ ಪ್ರಾರ್ಥನೆ ಸಲ್ಲಿಸಲು ಎದ್ದು ನಿಂತಿದ್ದರು. ಇದು ಮಚ್ಚರ್​​ಗೆ ಅಸಾಮಾನ್ಯವಾಗಿ ಕಾಣಿಸಲಿಲ್ಲ. ಸಹ ಪೈಲಟ್‌ನ ಧಾರ್ಮಿಕ ಆಚರಣೆಗೆ ಗೌರವ ನೀಡಿ, ತಾವು ಹಿಂದಕ್ಕೆ ನೋಡದಿರಲು ಉದ್ದೇಶಪೂರ್ವಕವಾಗಿ ಅವರು ನಿರ್ಧರಿಸಿದ್ದರು. ಆದರೆ ಸುಮಾರು ನಾಲ್ಕೈದು ನಿಮಿಷಗಳ ಬಳಿಕ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದ ಅನುಭ ಮಚ್ಚರ್​​ ಅವರಿಗಾಗಿದೆ. ಈ ವೇಳೆ ವಿಮಾನಕ್ಕೇ ಯಾವುದೋ ಭಾರೀ ಅವಘಡ ಸಂಭವಿಸಿದೆ ಎಂದು ಅವರು ಭಾವಿಸಿದ್ದರು. ಆದರೆ ಮತ್ತೊಂದು ಹೊಡೆತ ಬಿದ್ದ ಬಳಿಕವಷ್ಟೇ ತಮ್ಮ ಹಿಂದೆ ಕುಳಿತಿದ್ದ ವ್ಯಕ್ತಿಯೇ ದಾಳಿ ನಡೆಸುತ್ತಿದ್ದಾನೆ ಎಂಬುದು ಮಚ್ಚರ್​​ ಅವರಿಗೆ ತಿಳಿಯಿತು ಎನ್ನಲಾಗಿದೆ. ಈ ಘಟನೆಗಳ ಕ್ರಮದಲ್ಲಿ, ದಾಳಿ ನಡೆಸುವುದಕ್ಕೂ ಮುನ್ನ ಸಹ ಪೈಲಟ್ ಪ್ರಾರ್ಥನೆಯ ನೆಪವನ್ನು ಬಳಸಿಕೊಂಡಿರುವುದು ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:05 am, Sun, 4 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us