
ದುಬೈ, ಅಕ್ಟೋಬರ್ 05: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವ ಸಂಚು ವಿಫಲವಾಗುತ್ತಿದ್ದಂತೆ ಸೌದಿ ಮರುಭೂಮಿಯಲ್ಲೇ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ನಡೆಸಿದ ಸಮಗ್ರ ತನಿಖೆಯನ್ನು ಉಲ್ಲೇಖಿಸಿ ಇಸ್ರೇಲ್‌ನ ‘ವೈನೆಟ್ ನ್ಯೂಸ್’ ಈ ವಿವರಗಳನ್ನು ಪ್ರಕಟಿಸಿದೆ.
ವಿಮಾನದೊಳಗೆ ಪ್ರಯಾಣಿಕರು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ವಿಶ್ಲೇಷಿಸಿದ ಇಬ್ಬರು ಅನುಭವಿ ಬೋಯಿಂಗ್ 737 ಕ್ಯಾಪ್ಟನ್‌ಗಳು, ಹಾರಾಟದ ಮಧ್ಯದಲ್ಲೇ ಪ್ರಯಾಣಿಕರ ಕ್ಯಾಬಿನ್‌ನ ತುರ್ತು ದೀಪಗಳು ಏಕಾಏಕಿ ಹೊತ್ತಿಕೊಂಡಿದ್ದನ್ನು ಗುರುತಿಸಿದ್ದಾರೆ. ವಿಮಾನವು ಹಾರಾಟದಲ್ಲಿರುವಾಗ ಮುಖ್ಯ ವಿದ್ಯುತ್ ಪೂರೈಕೆ ಕಡಿತಗೊಂಡು, ವ್ಯವಸ್ಥೆ ಬ್ಯಾಟರಿ ಶಕ್ತಿಗೆ ಬದಲಾದಾಗ ಮಾತ್ರ ಹೀಗಾಗುತ್ತದೆ. ಅಂದರೆ, ದಾಳಿಕೋರ ಪೈಲಟ್ ಇಂಧನ ಸ್ವಿಚ್‌ಗಳನ್ನು “RUN” ನಿಂದ “CUTOFF” ಗೆ ಬದಲಾಯಿಸಿ ಎಂಜಿನ್‌ಗಳನ್ನು ಬಂದ್ ಮಾಡಿದ್ದ ಎಂದು ವರದಿ ಹೇಳಿದೆ.
ಕ್ಯಾಪ್ಟನ್ ಸ್ಮಿತ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಬಾಗಿಲು ತೆರೆಯದಂತೆ ತಡೆಯಲು ಯತ್ನಿಸಿದ ಹಮ್ಮಾಮಿ, ಆಟೋಪೈಲಟ್ ಸಂಪರ್ಕ ಕಡಿತಗೊಳಿಸಿ ವಿಮಾನವನ್ನು ತೀಕ್ಷ್ಣವಾದ ಕಡಿದಾದ ಇಳಿಜಾರಿಗೆ ತಳ್ಳಿದ್ದ. ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಿಮಾನವು ಬರೋಬ್ಬರಿ 16,000 ಅಡಿಗಳಷ್ಟು ಕೆಳಗೆ ಕುಸಿಯಿತು.
ಇಸ್ರೇಲ್ ನೆಲದಲ್ಲಿ ವಿಮಾನ ಅಪ್ಪಳಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಸೌದಿ ಅರೇಬಿಯಾದ ವಿಶಾಲ ಮರುಭೂಮಿಯಲ್ಲೇ ವಿಮಾನವನ್ನು ಅಪ್ಪಳಿಸಿ 174 ಪ್ರಯಾಣಿಕರನ್ನೂ ಸಾಯಿಸುವುದು ಆತನ ಪರ್ಯಾಯ ಯೋಜನೆಯಾಗಿತ್ತು.
ಗಾಯಗೊಂಡ ಸ್ಥಿತಿಯಲ್ಲಿದ್ದ ಕ್ಯಾಪ್ಟನ್ ಸ್ಮಿತ್ ಕಾಕ್‌ಪಿಟ್ ಸ್ವಿಚ್ ಒತ್ತಿ ಬಾಗಿಲು ತೆರೆದಾಗ ಪ್ರಯಾಣಿಕರು ಒಳನುಗ್ಗಿ ಹಮ್ಮಾಮಿಯನ್ನು ನಿಯಂತ್ರಿಸಿದರು. ಅದೇ ಸಮಯದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಆಫ್-ಡ್ಯೂಟಿ ಫ್ಲೈದುಬೈ ಪೈಲಟ್‌ಗಳು ತಕ್ಷಣ ನಿಯಂತ್ರಣ ವಹಿಸಿಕೊಂಡು, ಆಫ್ ಆಗಿದ್ದ ಎಂಜಿನ್‌ಗಳನ್ನು ಮರುಚಾಲನೆಗೊಳಿಸಿ ವಿಮಾನವನ್ನು ಸಮತೋಲನಕ್ಕೆ ತಂದು ತಬುಕ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.
ಹಮಾಮ್ ಅಲ್-ಹಮ್ಮಾಮಿ ಹಿನ್ನೆಲೆ: ಓಮನ್ ಪ್ರಜೆಯಾಗಿದ್ದರೂ ಸಿರಿಯಾದಲ್ಲಿದ್ದ ತನ್ನ ತಾಯಿಯೊಂದಿಗೆ ಬೆಳೆದ ಈತ, ಅಲ್ಲಿಯೇ ಐಸಿಸ್ ಹಾಗೂ ತೀವ್ರಗಾಮಿ ಉಗ್ರ ಸಿದ್ಧಾಂತಕ್ಕೆ ಮಾರುಹೋಗಿದ್ದನು. 2024 ರಲ್ಲಿ ‘ಓಮನ್ ಏರ್’ ಸಂಸ್ಥೆಯಲ್ಲಿದ್ದಾಗ ಉಗ್ರ ಸಾಮಗ್ರಿಗಳೊಂದಿಗೆ ಸಿಕ್ಕಿಬಿದ್ದು, ತವರು ದೇಶದಲ್ಲೇ ಹಾರಾಟ ನಿರ್ಬಂಧಕ್ಕೆ ಒಳಗಾಗಿದ್ದ.
ಮತ್ತಷ್ಟು ಓದಿ:
ವಿಚಾರಣೆಯಲ್ಲಿ ತಪ್ಪೊಪ್ಪಿಗೆ: ಸೌದಿ ಅರೇಬಿಯಾ ಮತ್ತು ಯುಎಇ ತನಿಖಾ ಸಂಸ್ಥೆಗಳ ಎದುರು ತಪ್ಪೊಪ್ಪಿಕೊಂಡಿರುವ ಹಮ್ಮಾಮಿ, “ನನಗೆ ಸಾವಿನ ಭಯವಿಲ್ಲ, ಇಸ್ರೇಲ್ ಮೇಲೆ ವಿಮಾನ ಪತನಗೊಳಿಸುವುದೇ ನನ್ನ ಮುಖ್ಯ ಗುರಿಯಾಗಿತ್ತು” ಎಂದು ಹೇಳಿದ್ದಾನೆ. ಎಮಿರೇಟ್ಸ್ ಸುದ್ದಿ ಸಂಸ್ಥೆ (WAM) ಇದನ್ನು ಅಧಿಕೃತವಾಗಿ ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದೆ.
ಬೋಯಿಂಗ್ 737 ಎಂಜಿನ್ ರೀ-ಸ್ಟಾರ್ಟ್ ಸವಾಲು: 30,000 ಅಡಿ ಎತ್ತರದಲ್ಲಿ ಎಂಜಿನ್ ಕಟ್‌ಆಫ್ ಆದಾಗ ವಿಮಾನವು ಗ್ಲೈಡರ್‌ನಂತೆ ವೇಗವಾಗಿ ಎತ್ತರ ಕಳೆದುಕೊಳ್ಳುತ್ತದೆ. ಅಂತಹ ಭೀಕರ ತುರ್ತು ಪರಿಸ್ಥಿತಿಯಲ್ಲಿ ಇಂಜಿನ್ ಅನ್ನು ಗಾಳಿಯಲ್ಲೇ ಮರುಪ್ರಾರಂಭಿಸುವುದು ಪೈಲಟ್‌ಗಳಿಗೆ ಅತ್ಯಂತ ಕಠಿಣ ಸವಾಲು. ಆಫ್-ಡ್ಯೂಟಿ ಪೈಲಟ್‌ಗಳು ಹಾಗೂ ಗಾಯಾಳು ಕ್ಯಾಪ್ಟನ್ ಸ್ಮಿತ್ ತೋರಿದ ಈ ಸಮಯಪ್ರಜ್ಞೆ ವಿಶ್ವ ವಾಯುಯಾನ ಇತಿಹಾಸದಲ್ಲೇ ಮಹಾ ಪವಾಡವೆಂದು ಪರಿಗಣಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 am, Mon, 5 October 26