ಸ್ಪೇನಲ್ಲಿ 12-ಕೋಟಿ ರೂ. ಮೌಲ್ಯದ ಮದ್ಯ ಕದ್ದ ಆರೋಪದಲ್ಲಿ ಮಾಜಿ ಮೆಕ್ಸಿಕನ್ ಸುಂದರಿ 9-ತಿಂಗಳು ನಂತರ ಕ್ರೊವೇಶಿಯಾದಲ್ಲಿ ಸಿಕ್ಕಿಬಿದ್ದಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 21, 2022 | 6:18 PM

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸ್ಪೇನಿನ ಪ್ರತಿಷ್ಠಿತ ಹೋಟಲ್​-ರೆಸ್ಟುರಾಂಟ್ ಗಳಲ್ಲಿ ಒಂದಾಗಿರುವ ಎಲ್ ಅಟ್ರಿಯೊನಲ್ಲಿ ಕಳುವು ನಡೆದಿತ್ತು. ಕಳೆದ ವಾರ ಗವೇರಾ ಮತ್ತು ಡುಮಿತ್ರು ಮಾಂಟೆನಿಗ್ರೋನಿಂದ ಕ್ರೊವೇಶಿಯಾಗೆ ಹೋಗುವಾಗ ಬಂಧಿಸಲ್ಪಟ್ಟರು.

ಸ್ಪೇನಲ್ಲಿ 12-ಕೋಟಿ ರೂ. ಮೌಲ್ಯದ ಮದ್ಯ ಕದ್ದ ಆರೋಪದಲ್ಲಿ ಮಾಜಿ ಮೆಕ್ಸಿಕನ್ ಸುಂದರಿ 9-ತಿಂಗಳು ನಂತರ ಕ್ರೊವೇಶಿಯಾದಲ್ಲಿ ಸಿಕ್ಕಿಬಿದ್ದಳು!
ಮಾಜಿ ಸುಂದರಿ ಪ್ರಿಸಿಲ್ಲಾ ಲಾರಾ ಗವೇರಾ
Follow us on

ಸ್ಪೇನ್​ ನಲ್ಲಿ ಅತ್ಯಂತ ಪ್ರತಿಷ್ಠಿತ ರೆಸ್ಟುರಾಂಟ್ ಗಳ (Restaurant) ಪೈಕಿ ಒಂದರಲ್ಲಿ ಕಳೆದ ವರ್ಷ ನಡೆದ ಮಿಲಿಯನ್ ಗಟ್ಟಲೆ ಮೌಲ್ಯದ ವೈನ್ (wine) ಕಳುವಿಗೆ ಸಂಬಂಧಿಸಿದಂತೆ ಮೆಕ್ಸಿಕೋದ ಮಾಜಿ ಸೌಂದರ್ಯ ರಾಣಿಯೊಬ್ಬಳನ್ನು (Beauty Queen) ಬಂಧಿಸಲಾಗಿದೆ. ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಬಂಧನಕ್ಕೊಳಗಾಗಿರುವ ಸುಂದರಿಯನ್ನು ಸ್ಪೇನ್ ದೇಶದ ಮಿಡಿಯಾ ಪ್ರಿಸಿಲ್ಲಾ ಲಾರಾ ಗವೇರಾ ಎಂದು ಗುರುತಿಸಿದೆ. 28-ವರ್ಷ ವಯಸ್ಸಿಸ ಪ್ರಿಸಿಲ್ಲಾ ಹಿಂದೊಮ್ಮೆ ‘ಮಿಸ್ ಅರ್ಥ್​’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಳು. ಅವಳು ಮತ್ತು ರುಮೇನಿಯಾ ಮೂಲದ ಡಚ್​ ಕಾನ್ಸ್ಟಾಂಟಿನ್ ಗೇಬ್ರಿಯಲ್ ಡುಮಿತ್ರು ಜೊತೆಗೂಡಿ ₹1.5 ಮಿಲಿಯನ್ (ಸುಮಾರು 12 ಕೋಟಿ ರೂಪಾಯಿ) ಮೌಲ್ಯದ ವಿಂಟೇಜ್ ವೈನ್ ಬಾಟಲ್​​ ಗಳನ್ನು ಕಳುವು ಮಾಡಿದ್ದರೆಂದು ಸ್ಪ್ಯಾನಿಶ್ ಮೀಡಿಯಾ ಆಧರಿಸಿ ಟೆಲಿಗ್ರಾಫ್ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸ್ಪೇನಿನ ಪ್ರತಿಷ್ಠಿತ ಹೋಟಲ್​-ರೆಸ್ಟುರಾಂಟ್ ಗಳಲ್ಲಿ ಒಂದಾಗಿರುವ ಎಲ್ ಅಟ್ರಿಯೊನಲ್ಲಿ ಕಳುವು ನಡೆದಿತ್ತು. ಕಳೆದ ವಾರ ಗವೇರಾ ಮತ್ತು ಡುಮಿತ್ರು ಮಾಂಟೆನಿಗ್ರೋನಿಂದ ಕ್ರೊವೇಶಿಯಾಗೆ ಹೋಗುವಾಗ ಬಂಧಿಸಲ್ಪಟ್ಟರು. ಹಾಗಾಗಿ, 9 ತಿಂಗಳುಗಳಿಂದ ನಡೆಯುತ್ತಿದ್ದ ಅವರ ಹುಡುಕಾಟ ಕೊನೆಗೊಂಡಿದೆ ಎಂದು ಪತ್ರಿಕೆ ವರದಿ ಮಾಡಿದೆ.

19 ನೇ ಶತಮಾನದ ಒಂದು ಅಪೂರ್ವ ಬಾಟಲಿ ಸೇರಿದಂತೆ ಒಟ್ಟು 45 ಬಾಟಲಿಗಳನ್ನು ಅವರಿಬ್ಬರು ಕದ್ದಿದ್ದರೆಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ರೆಸ್ಟುರಾಂಟ್​ ನ ಕಿಚನ್ ಮುಚ್ಚಿದ ಮೇಲೆ ರೂಮ್ ಸರ್ವಿಸ್​ ಆರ್ಡರ್ ಮಾಡಿದ ಗವೇರಾ ವೇಟರ್​ ಗಳ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಳು. ಆಮೇಲೆ ಅವಳ ಜೊತೆಗಾರ ವೈನ್​ ಬಾಟಲಿಗಳನ್ನು ಇಟ್ಟಿದ್ದ ಸೆಲ್ಲರನ್ನು ಮಾಸ್ಟರ್​ ಕೀಯಿಂದ ತೆರೆದು ದುಬಾರಿ ವೈನ್ ಬಾಟಲಿಗಳನ್ನು ತನ್ನ ಬ್ಯಾಕ್ ಪ್ಯಾಕ್​​ ನಲ್ಲಿ ತುಂಬಿಕೊಂಡಿದ್ದ, ಎಂದು ಸ್ಪ್ಯಾನಿಶ್ ಪೊಲೀಸ್​ ಹೇಳಿದೆ.

ಅವರಿಬ್ಬರು ರೆಸ್ಟುರಾಂಟ್​ ಹೊರ ಬೀಳುತ್ತಿರುವುದು ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಆಗಿನಂದಲೇ ಪೊಲೀಸರು ಅವರ ಹುಡುಕಾಟ ಆರಂಭಿಸಿದ್ದರು. ಸ್ಪೇನ್, ನೆದರ್ಲ್ಯಾಂಡ್ಸ್​, ಕ್ರೊವೇಶಿಯಾ ಮತ್ತು ರುಮೇನಿಯಾ ದೇಶದ ಪೊಲೀಸರಲ್ಲದೆ ಇಂಟರ್​​ ಪೋಲ್ ಈ ಜೋಡಿಯ ಹುಡುಕಾಟದಲ್ಲಿ ಭಾಗಿಯಾಗಿದ್ದವು.

ಅಂತಿಮವಾಗಿ, ಗೆವೆರಾ ಮತ್ತು ಡುಮಿತ್ರು ಮಾಂಟೆನೀಗ್ರೊ ನಿಂದ ಕ್ರೊವೋಶಿಯ ಗಡಿ ಪ್ರವೇಶಿಸುವಾಗ ಕ್ರೊವೇಶಿಯಾದ ಗಡಿ ಭದ್ರತಾ ದಳದ ಯೋಧರು ಗುರುತು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅವರ ಬಂಧನವಾಯಿತು.

ಅವರಿಬ್ಬರು ಕ್ರೊವೇಶಿಯಾದಲ್ಲಿ ವಾಸವಾಗಿದ್ದರು ಎನ್ನಲಾಗುತ್ತಿದೆ ಮತ್ತು ಇಷ್ಟರಲ್ಲೇ ಅವರನ್ನು ಸ್ಪೇನ್​ ಗೆ ಹಸ್ತಾಂತರಿಸಲಾಗುವುದು.