ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆ ಮಾಡಿದ್ದು ನಾನೇ ಎಂದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್

ಕೆನಡಾದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್, ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಕೊಲೆ ಹೊಣೆ ಹೊತ್ತಿದ್ದಾನೆ. ಮಾದಕ ದ್ರವ್ಯ ಮಾರಾಟಕ್ಕೆ ಅಪ್ರಾಪ್ತರನ್ನು ಬಳಸಿದ್ದರಿಂದ ನಿಜ್ಜರ್‌ನನ್ನು ಹತ್ಯೆ ಮಾಡಿದೆ ಎಂದು ಆಡಿಯೋದಲ್ಲಿ ಹೇಳಿದ್ದಾನೆ. ಇದು ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಟ್ರುಡೊ ಆರೋಪಕ್ಕೆ ಭಾರೀ ಹಿನ್ನಡೆ ನೀಡಿದೆ. ಎಫ್‌ಬಿಐನಿಂದಲೂ ಗೋಲ್ಡಿ ಬ್ರಾರ್ ಬೇಕಾಗಿದ್ದಾನೆ.

ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆ ಮಾಡಿದ್ದು ನಾನೇ ಎಂದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್
ನಿಜ್ಜರ್

Updated on: Aug 23, 2026 | 7:46 AM

ಒಟ್ಟಾವಾ, ಆಗಸ್ಟ್​ 23: ಭಾರತ ಮತ್ತು ಕೆನಡಾ ನಡುವೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌(Hardeep Singh Nijjar)ನನ್ನು ತಾನೇ ಹತ್ಯೆ ಮಾಡಿರುವುದಾಗಿ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಒಪ್ಪಿಕೊಂಡಿರುವ ಆಡಿಯೋ ಕ್ಲಿಪ್ ಒಂದು ಸೋರಿಕೆಯಾಗಿ ಸಂಚಲನ ಮೂಡಿಸಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಭಾರತದಲ್ಲಿ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿರುವ ಗೋಲ್ಡಿ ಬ್ರಾರ್, ಖಲಿಸ್ತಾನಿ ಉಗ್ರ ಪರಮ್‌ಜಿತ್ ಸಿಂಗ್ ಪಮ್ಮಾ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

16 ರಿಂದ 17 ವರ್ಷದ ಅಪ್ರಾಪ್ತ ಯುವಕರನ್ನು ಮಾದಕ ದ್ರವ್ಯ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ನಿಜ್ಜರ್‌ನನ್ನು ಹತ್ಯೆ ಮಾಡಿದೆವು ಎಂದು ಬ್ರಾರ್ ಹೇಳಿದ್ದಾನೆ. “ನನ್ನ ತಂಡ ಮತ್ತು ನಾನು ಸೇರಿ ನಿಜ್ಜರ್‌ನನ್ನು ಕೊಲ್ಲಬೇಕಾಯಿತು. ತಪ್ಪು ಕೆಲಸ ಮಾಡುವ ಪ್ರತಿಯೊಬ್ಬರೂ ತಮ್ಮ ಕೃತ್ಯಕ್ಕೆ ತಕ್ಕ ಪರಿಣಾಮ ಎದುರಿಸಲೇಬೇಕು” ಎಂದು ಆಡಿಯೋದಲ್ಲಿ ಆತ ಹೇಳಿರುವುದು ಕೇಳಿಬಂದಿದೆ.

ಟ್ರುಡೊ ಆರೋಪಕ್ಕೆ ಹಿನ್ನಡೆ: 2023ರಲ್ಲಿ ಸರ್ರೆಯ ಗುರುದ್ವಾರದ ಬಳಿ ನಿಜ್ಜರ್ ಹತ್ಯೆಯಾದಾಗ, ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಯಾವುದೇ ಪುರಾವೆಗಳಿಲ್ಲದೆ ಭಾರತೀಯ ಏಜೆಂಟರ ಮೇಲೆ ಆರೋಪ ಹೊರಿಸಿ ಉಭಯ ದೇಶಗಳ ಸಂಬಂಧ ಹದಗೆಡಲು ಕಾರಣವಾಗಿದ್ದರು. ಇತ್ತೀಚೆಗೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಸಂಸ್ಥೆಯು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಮತ್ತಷ್ಟು ಓದಿ: ಹಿಂದೂಗಳೇ ಕೆನಡಾ ಬಿಟ್ಟು ತೊಲಗಿ: ಖಲಿಸ್ತಾನೀ ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಕೆನಡಾ ಹಿಂದೂಗಳಿಗೆ ಬೆದರಿಕೆ ಕರೆ

ಅಮೆರಿಕ ಮತ್ತು ಕೆನಡಾದಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಗೋಲ್ಡಿ ಬ್ರಾರ್ (ಸತೀಂದರ್‌ಜೀತ್ ಸಿಂಗ್) ಸುಳಿವು ನೀಡಿದವರಿಗೆ ಅಮೆರಿಕದ ಎಫ್‌ಬಿಐ (FBI) ಸುಮಾರು 50 ಸಾವಿರ ಡಾಲರ್ ಬಹುಮಾನ ಘೋಷಿಸಿದೆ. ಭಾರತದ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಜೊತೆ ಈ ಹಿಂದೆ ಗುರುತಿಸಿಕೊಂಡಿದ್ದ ಬ್ರಾರ್, ಇತ್ತೀಚೆಗೆ ಆ ಗ್ಯಾಂಗ್‌ನಿಂದ ಬೇರ್ಪಟ್ಟು ಸ್ವತಂತ್ರ ಅಪರಾಧ ಜಾಲ ನಡೆಸುತ್ತಿದ್ದಾನೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us