ಹಿಂದೂಗಳೇ ಕೆನಡಾ ಬಿಟ್ಟು ತೊಲಗಿ: ಖಲಿಸ್ತಾನೀ ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಕೆನಡಾ ಹಿಂದೂಗಳಿಗೆ ಬೆದರಿಕೆ ಕರೆ

SFJ Threat to Canadian Hindus: ನಿಜ್ಜರ್​ನನ್ನು ಕೊಂದ ಭಾರತವನ್ನು ಸಮರ್ಥಿಸಿಕೊಳ್ಳುತ್ತಿರುವ ಹಿಂದೂಗಳೇ, ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಖಲಿಸ್ತಾನೀ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್​ನ ಲೀಗಲ್ ಕೌನ್ಸಲ್ ಗುರಪಟ್ವಂತ್ ಪನ್ನುನ್ ಕರೆ ನೀಡಿದ್ದಾರೆ. ನಿಜ್ಜ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಪನ್ನುನ್ ವಿಡಿಯೋ ವೈರಲ್ ಆಗುತ್ತಿದೆ.

ಹಿಂದೂಗಳೇ ಕೆನಡಾ ಬಿಟ್ಟು ತೊಲಗಿ: ಖಲಿಸ್ತಾನೀ ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯಿಂದ ಕೆನಡಾ ಹಿಂದೂಗಳಿಗೆ ಬೆದರಿಕೆ ಕರೆ
ಖಲಿಸ್ತಾನೀ ಪ್ರತ್ಯೇಕತಾವಾದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2023 | 11:30 AM

ಮಾಂಟ್ರಿಯಲ್, ಸೆಪ್ಟೆಂಬರ್ 20: ಖಲಿಸ್ತಾನೀ ಪ್ರತ್ಯೇಕತಾವಾದಿ ಮುಖಂಡ ಹರದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Canada PM Justin Trudeau) ನೀಡಿದ ಹೇಳಿಕೆ ಈಗ ಖಲಿಸ್ತಾನೀ ಸಂಘಟನೆಗಳ ಮನೋಸ್ಥೈರ್ಯ ಹೆಚ್ಚಿಸಿದಂತಿದೆ. ಸಿಖ್ಸ್ ಫಾರ್ ಜಸ್ಟಿಸ್ (SFJ- sikhs for justice) ಎಂಬ ಖಲಿಸ್ತಾನೀ ಸಂಘಟನೆ ಇದೀಗ ಬಹಿರಂಗವಾಗಿಯೇ ಕೆನಡಿಯನ್ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದೆ. ಖಲಿಸ್ತಾನೀ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಸಂಭ್ರಮಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಹಾಗೂ ಭಾರತಕ್ಕೆ ಬೆಂಬಲ ನೀಡುತ್ತಿರುವ ಹಿಂದೂಗಳೇ ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಕಾನೂನು ಸಲಹೆಗಾರ ಗುರಪಟ್ವಂತ್ ಪನ್ನುನ್ ವಿಡಿಯೋ ಸಂದೇಶವೊಂದರಲ್ಲಿ ಕರೆ ನೀಡಿದ್ದಾರೆ.

ಪ್ರತ್ಯೇಕ ಖಲಿಸ್ತಾನೀ ದೇಶಕ್ಕಾಗಿ ಹೋರಾಡುತ್ತಿರುವ ಸಿಖ್ಸ್ ಫಾರ್ ಜಸ್ಟೀಸ್ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಆರೋಪ ಇದೆ. ಭಾರತದಲ್ಲಿ ಇದನ್ನು 2019ರಲ್ಲಿ ನಿಷೇಧಿಸಲಾಗಿದೆ. ಈ ಉಗ್ರ ಸಂಘಟನೆಯ ಲೀಗಲ್ ಕೌನ್ಸಲ್ ಆಗಿರುವ ಗುರಪಟ್ವಂತ್ ಪನ್ನುನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.

‘ಭಾರತೀಯ ಹಿಂದೂಗಳೇ ಕೆನಡಾ ಬಿಟ್ಟು ತೊಲಗಿ, ಭಾರತಕ್ಕೆ ಹೋಗಿ. ನೀವು ಭಾರತವನ್ನು ಬೆಂಬಲಿಸುತ್ತಿರುವುದು ಮಾತ್ರವಲ್ಲ, ಖಲಿಸ್ತಾನೀ ಪರ ಸಿಖ್ಖರ ಅಭಿಪ್ರಾಯ ಮತ್ತು ವಾಕ್​ಸ್ವಾತಂತ್ರ್ಯ ಹತ್ತಿಕ್ಕುವ ಕಾರ್ಯಕ್ಕೆ ಬೆಂಬಲವನ್ನೂ ನೀಡುತ್ತಿದ್ದೀರಿ,’ ಎಂದು ಪನ್ನುಮ್ ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಸಂವಿಧಾನ ಪ್ರತಿಗಳಲ್ಲಿ ಸಮಾಜವಾದಿ, ಜಾತ್ಯತೀತ ಪದಗಳೇ ಕಣ್ಮರೆ: ಅಧೀರ್ ರಂಜನ್ ಆಕ್ಷೇಪ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಭಾರತ ಸರ್ಕಾರದ ವಿರುದ್ಧ ಸೋಮವಾರ ಆರೋಪ ಮಾಡಿದ ಸಂದರ್ಭದಲ್ಲೇ ಗುರಪಟ್ವಂತ್ ಪನ್ನುಂ ಅವರ ಈ ವಿಡಿಯೋ ವೈರಲ್ ಆಗಿ ಹಬ್ಬುತ್ತಿದೆ.

ಕೆನಡಾ ಹಿಂದೂಗಳಿಗೆ ಆತಂಕ

ಕೆನಡಿಯನ್ ಹಿಂದೂಸ್ ಫಾರ್ ಹಾರ್ಮನಿ ಸಂಘಟನೆಯ ವಕ್ತಾರ ವಿಜಯ್ ಜೈನ್ ಅವರು ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈಗ ಪೂರ್ಣಪ್ರಮಾಣದಲ್ಲಿ ಹಿಂದೂಫೋಬಿಯಾವನ್ನು ಕಾಣುತ್ತಿದ್ದೇವೆ ಎಂದಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರ ಇದೆ ಎಂದು ಪ್ರಧಾನಿ ಟ್ರುಡೋ ಮಾಡಿರುವ ಆರೋಪವು ಹಿಂದೂಫೋಬಿಯಾವನ್ನು ಹೆಚ್ಚಿಸುತ್ತಿದೆ. 1985ರಲ್ಲಿ ಕೆನಡಿಯನ್ ಹಿಂದೂಗಳ ಜೀವಹರಣವಾಗಿದ್ದು ಮರುಕಳಿಸಬಹುದು ಎಂದೂ ವಿಜಯ್ ಜೈನ್ ಆತಂಕ ತೋರ್ಪಡಿಸಿದ್ದಾರೆ.

ಇದನ್ನೂ ಓದಿ: ಭಾರತವನ್ನು ಕೆರಳಿಸಲು ಪ್ರಯತ್ನಿಸುತ್ತಿಲ್ಲ, ನಮಗೆ ಉತ್ತರ ಬೇಕು: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಏರ್ ಇಂಡಿಯಾದ ಮಾಂಟ್ರಿಯಲ್ ಬಾಂಬೆ ವಿಮಾನದ ಮೇಲೆ 1985ರ ಜೂನ್ 24ರಂದು ಖಲಿಸ್ತಾನೀ ಉಗ್ರರು ಬಾಂಬ್ ಹಾಕಿದ್ದರು. ಆ ದುರಂತದಲ್ಲಿ 329 ಮಂದಿ ಬಲಿಯಾಗಿದ್ದರು. ಆಗ ಖಲಿಸ್ತಾನೀ ಭಯೋತ್ಪಾದನೆ ಉಗ್ರವಾಗಿದ್ದ ದಿನಗಳು. ಕೆನಡಾದ ಇತಿಹಾದಲ್ಲೇ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ ಅದಾಗಿತ್ತು. ಪ್ರತೀ ವರ್ಷ ಜೂನ್ 23ರಂದು ಆ ಘೋರ ದಿನವನ್ನು ನೆನಪಿಸಿಕೊಳ್ಳಲಾಗುತ್ತದೆ.

ಈಗ್ಗೆ ಕೆಲವಾರು ವರ್ಷಗಳಿಂದ ಖಲಿಸ್ತಾನೀ ಚಟುವಟಿಕೆ ಮತ್ತೆ ಗರಿಗೆದರಿದೆ. ಕೆಲ ತಿಂಗಳ ಹಿಂದೆ ಕೊಲೆಯಾದ ಹರ್ದೀಪ್ ಸಿಂಗ್ ನಿಜ್ಜರ್ ಕೂಡ ಉಗ್ರ ಕೃತ್ಯಗಳಲ್ಲಿ ತೊಡಗಿದ್ದವನೇ. ಬಹಳ ಮಂದಿ ಖಲಿಸ್ತಾನೀ ಉಗ್ರರು ಕೆನಡಾದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತ ವಿರೋಧಿ ಗೋಡೆಬರಹಗಳು, ಘೋಷಣೆಗಳು, ಹಿಂದೂ ಮಂದಿರಗಳ ಮೇಲೆ ದಾಳಿ ಇತ್ಯಾದಿ ಹಲವು ಘಟನೆಗಳು ಇತ್ತೀಚೆಗೆ ಸಂಭವಿಸಿವೆ. ಕೆನಡಾದಲ್ಲಿ ಹಿಂದೂಫೋಬಿಯಾ ಇರುವುದನ್ನು ಅಧಿಕೃತವಾಗಿ ಪರಿಗಣಿಸಲು ಅಲ್ಲಿನ ಕೆಲ ವರ್ಗದ ಜನರು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ