ಹೊಸ ಸಂವಿಧಾನ ಪ್ರತಿಗಳಲ್ಲಿ ಸಮಾಜವಾದಿ, ಜಾತ್ಯತೀತ ಪದಗಳೇ ಕಣ್ಮರೆ: ಅಧೀರ್ ರಂಜನ್ ಆಕ್ಷೇಪ
Adhir Ranjan Chaudury: ನೂತನ ಸಂಸತ್ ಭವನದಲ್ಲಿ ಸದಸ್ಯರಿಗೆ ವಿತರಿಸಲಾಗಿದ್ದ ಸಂವಿಧಾನದ ಪ್ರತಿಗಳಲ್ಲಿ ಕಾಂಸ್ಟಿಟ್ಯೂಶನ್ ಪ್ರೀ ಆಂಬಲ್ನಲ್ಲಿ ಸೋಷಿಯಲಿಸ್ಟ್, ಸೆಕ್ಯೂಲರ್ ಪದಗಳನ್ನು ಒಳಗೊಳ್ಳಲಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎರಡು ಪದಗಳು ಇಲ್ಲದಿರುವುದು ನಿಜಕ್ಕೂ ಆತಂಕದ ವಿಚಾರ. ಸರ್ಕಾರ ಬಹಳ ಬುದ್ಧಿವಂತಿಕೆ ತೋರಿದೆ ಎಂದು ಅವರು ಟೀಕಿಸಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 20: ನಿನ್ನೆ ಸಂಸದರಿಗೆ ನೀಡಲಾಗಿರುವ ಹೊಸ ಸಂವಿಧಾನ ಪ್ರತಿಗಳಲ್ಲಿ (Constitution Copy) ಸಮಾಜವಾದಿ, ಜಾತ್ಯತೀತ ಪದವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ತಗಾದೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಹೊಸ ಸಂಸದೀಯ ಭವನದಲ್ಲಿ ಮೊದಲ ಕಾರ್ಯಕಲಾಪ ನಡೆದಿತ್ತು. ಆಗ ಎಲ್ಲರಿಗೂ ಹೊಸ ಸಂವಿಧಾನದ ಹೊತ್ತಿಗೆಗಳನ್ನು ನೀಡಲಾಗಿತ್ತು. ಮೂಲ ಸಂವಿಧಾನದ ಪೀಠಿಕೆಯಲ್ಲಿ (Constitution Preamble) ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಬಣ್ಣಿಸಲಾಗಿದೆ. ಹೊಸ ಸಂವಿಧಾನದ ಪ್ರತಿಯಲ್ಲಿರುವ ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯತೀತ ಪದಗಳನ್ನು ಒಳಗೊಳ್ಳಲಾಗಿಲ್ಲ ಎನ್ನಲಾಗಿದೆ.
‘ಇವತ್ತು (ಸೆ. 19) ನಮಗೆ ಹೊಸ ಸಂವಿಧಾನ ಪ್ರತಿಗಳನ್ನು ಕೊಡಲಾಗಿದೆ. ನಮ್ಮ ಕೈಲಿರುವ ಈ ಸಂವಿಧಾನ ಪುಸ್ತಕದ ಪೀಠಿಕೆಯಲ್ಲಿ ಸೋಷಿಯಲಿಸ್ಟ್ ಸೆಕ್ಯೂಲರ್ ಪದಗಳೇ ಇಲ್ಲ’ ಎಂದು ಅಧೀರ್ ರಂಜನ್ ಚೌಧುರಿ ನಿನ್ನೆ ಹೇಳಿದರೆಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಚರ್ಚೆ ಇಂದು; ಸೋನಿಯಾ ಮುಂದಾಳತ್ವದಲ್ಲಿ ಕಾಂಗ್ರೆಸ್ ಸಜ್ಜು; ಕೈ ಪಾಳಯದ ವಾದವೇನಿರಬಹುದು?
ಕುತೂಹಲವೆಂದರೆ, ಸೋಷಿಯಲಿಸ್ಟ್ ಮತ್ತು ಸೆಕ್ಯೂಲರ್ ಎಂಬ ಪದಗಳನ್ನು ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತ ಸಂದರ್ಭದಲ್ಲಿ ಸಂವಿಧಾನದ ತಿದ್ದುಪಡಿ ಮಾಡಿ ಸೇರಿಸಿದ್ದರು. ಈ ಎರಡು ಪದಗಳನ್ನು ಸಂವಿಧಾನದಿಂದ ತೆಗೆಯಲು ಈಗ ಸರಕಾರ ಹೊರಟಿದೆ ಎಂದು ಕೆಲವಾರು ವರ್ಷಗಳಿಂದ ವಿಪಕ್ಷಗಳು ಆಕ್ಷೇಪಿಸುತ್ತಾ ಬರುತ್ತಿವೆ.
‘1976ರಲ್ಲಿ ತಿದ್ದುಪಡಿ ಮಾಡಿದ ಬಳಿಕ ಈ ಪದಗಳನ್ನು ಸೇರಿಸಲಾಯಿತು ಎಂಬುದು ಗೊತ್ತಿದೆ. ಆದರೆ, ಇವತ್ತು ನಮ್ಮ ಕೈಗೆ ಇತ್ತ ಸಂವಿಧಾನದ ಪ್ರತಿಯಲ್ಲಿ ಈ ಪದಗಳು ಇಲ್ಲವೆಂದರೆ ಅದು ಆತಂಕದ ಸಂಗತಿ ಎನಿಸುತ್ತದೆ. ಅವರ ಉದ್ದೇಶ ಸಂಶಯಾಸ್ಪದವಾಗಿದೆ. ಬಹಳ ಬುದ್ಧಿವಂತಿಕೆಯಿಂದ ಈ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ಆತಂಕ ತರುವ ವಿಚಾರ. ಈ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕೆಂದಿದ್ದೆ. ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ’ ಎಂದು ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ಪ್ರಧಾನಿ ಮೋದಿ ತೆಲಂಗಾಣವನ್ನು ಅವಮಾನಿಸಿದ್ದಾರೆ: ರಾಹುಲ್ ಗಾಂಧಿ
ಇನ್ನು, ದೇಶಕ್ಕೆ ಭಾರತ್ ಹೆಸರಿಡುವ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಇಂಡಿಯಾ ಮತ್ತು ಭಾರತ್ ಮಧ್ಯೆ ಅನಗತ್ಯವಾಗಿ ವ್ಯತ್ಯಾಸ ಸೃಷ್ಟಿಸಲು ಯಾರೂ ಯತ್ನಿಸಬಾರದು. ಭಾರತದ ಸಂವಿಧಾನದ ಪ್ರಕಾರ ಇವೆರಡರ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ