
ದುಬೈ, ಜುಲೈ 16: ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಬಿಡುವಿಲ್ಲದ ತೈಲ ಸಾರಿಗೆ ಮಾರ್ಗವಾದ ಹಾಮರ್ಮಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಾಗತಿಕ ತೈಲ ಪೂರೈಕೆಗೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ ಯುಎಇ (UAE), ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಇರಾನ್‌ನ ಈ ಜಲಮಾರ್ಗದ ಮೇಲಿನ ತಮ್ಮ ಅವಲಂಬನೆಯನ್ನು ಶಾಶ್ವತವಾಗಿ ಕಡಿತಗೊಳಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿವೆ.
ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಭಾಗ ಹಾಗೂ ಭಾರತದ ದ್ರವೀಕೃತ ನೈಸರ್ಗಿಕ ಅನಿಲದ ಬಹುದೊಡ್ಡ ಪಾಲು ಪ್ರತಿದಿನ ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಈಗ ಈ ಮಾರ್ಗಕ್ಕೆ ಪರ್ಯಾಯವಾಗಿ ಗಲ್ಫ್ ರಾಷ್ಟ್ರಗಳು ಭೂಮಿಯ ಒಳಗಿನ ಬೃಹತ್ ಪೈಪ್‌ಲೈನ್‌ಗಳು ಮತ್ತು ಹೊಸ ಹೈಟೆಕ್ ಬಂದರುಗಳನ್ನು ನಿರ್ಮಿಸುತ್ತಿವೆ.
ಪ್ರಾದೇಶಿಕ ಅಸ್ಥಿರತೆ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಯುಎಇ, ಹಾರ್ಮುಜ್ ಜಲಸಂಧಿಯನ್ನು ಬಳಸದೆಯೇ ಕಚ್ಚಾ ತೈಲವನ್ನು ಸಾಗಿಸಬಲ್ಲ ತನ್ನ ಮಹತ್ವಾಕಾಂಕ್ಷೆಯ 252 ಮೈಲಿ ಉದ್ದದ ‘ಪಶ್ಚಿಮ-ಪೂರ್ವ’ ಪೈಪ್‌ಲೈನ್ ಯೋಜನೆಯನ್ನು ತೀವ್ರಗೊಳಿಸಿದೆ. ಈ ಯೋಜನೆಯ ಕೆಲಸ ಈಗಾಗಲೇ ಅರ್ಧದಷ್ಟು ಮುಗಿದಿದ್ದು, 2027 ರ ಕಟ್ಟುನಿಟ್ಟಿನ ಗಡುವಿನೊಳಗೆ ಇದನ್ನು ಪೂರ್ಣಗೊಳಿಸುವಂತೆ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮತ್ತಷ್ಟು ಓದಿ: ಮಹಾಯುದ್ಧದ ಭೀತಿ: ಇರಾನ್‌ನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ, MQ-9 ಡ್ರೋನ್ ಹೊಡೆದುರುಳಿಸಿದ ಇರಾನ್
ಅಸ್ತಿತ್ವದಲ್ಲಿರುವ ಫುಜೈರಾ ಜಾಲದೊಂದಿಗೆ ಈ ಹೊಸ ಪೈಪ್‌ಲೈನ್ ಸೇರಿದರೆ, ಯುಎಇ ದೇಶದ ಭೂ-ಆಧಾರಿತ ತೈಲ ರಫ್ತು ಸಾಮರ್ಥ್ಯವು ದಿನಕ್ಕೆ 3.6 ಮಿಲಿಯನ್ ಬ್ಯಾರೆಲ್‌ಗಳಿಗೆ ದ್ವಿಗುಣಗೊಳ್ಳಲಿದೆ. ವಿಶ್ವದ ಹೆಚ್ಚಿನ ಇಂಧನ ಕೆಲವೇ ಕೆಲವು ಚಾಕ್ ಪಾಯಿಂಟ್‌ಗಳ ಮೂಲಕ ಸಾಗುತ್ತಿರುವುದರಿಂದಲೇ ನಾವು ಒಂದು ದಶಕದ ಹಿಂದೆಯೇ ಈ ಸುರಕ್ಷಿತ ಹೂಡಿಕೆಯ ನಿರ್ಧಾರ ಕೈಗೊಂಡಿದ್ದೆವು ಎಂದು ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿಯ ಮುಖ್ಯಸ್ಥ ಸುಲ್ತಾನ್ ಅಲ್ ಜಾಬರ್ ತಿಳಿಸಿದ್ದಾರೆ.
ಮತ್ತೊಂದೆಡೆ ಇರಾಕ್ ಮತ್ತು ಸೌದಿ ಅರೇಬಿಯಾ ಕೂಡ ತಮ್ಮ ಆರ್ಥಿಕತೆಯ ರಕ್ಷಣೆಗಾಗಿ ಹೊಸ ಭೂ-ಸಾರಿಗೆ ಮಾರ್ಗಗಳನ್ನು ವಿಸ್ತರಿಸುತ್ತಿವೆ.
ಇರಾಕ್‌ನ 1.5 ಬಿಲಿಯನ್ ಡಾಲರ್ ಹೂಡಿಕೆ: ಇರಾಕ್ ಸರ್ಕಾರವು ತನ್ನ 435 ಮೈಲಿ ಉದ್ದದ ‘ಬಸ್ರಾ-ಹದಿತಾ’ ಪೈಪ್‌ಲೈನ್ ನಿರ್ಮಾಣಕ್ಕೆ ಚಾಲನೆ ನೀಡಿದೆ. ಇದು ದಿನಕ್ಕೆ 2.5 ಮಿಲಿಯನ್ ಬ್ಯಾರೆಲ್ ತೈಲವನ್ನು ನೇರವಾಗಿ ಜೋರ್ಡಾನ್, ಸಿರಿಯಾ ಮತ್ತು ಟರ್ಕಿ ದೇಶಗಳ ಟರ್ಮಿನಲ್ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲಿದೆ. ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಈ ಯೋಜನೆಯನ್ನು ದೇಶದ ರಾಷ್ಟ್ರೀಯ ಭದ್ರತಾ ಗುರಾಣಿ ಎಂದು ಕರೆದಿದ್ದಾರೆ.
ಸೌದಿ ಅರೇಬಿಯಾದ ಬೃಹತ್ ಯೋಜನೆ: ಸೌದಿ ಅರೇಬಿಯಾವು ತನ್ನ ರೆಡ್ ಸೀ ಕಚ್ಚಾ ತೈಲ ಪೈಪ್‌ಲೈನ್ ಸಾಮರ್ಥ್ಯವನ್ನು ದಿನಕ್ಕೆ ಬರೋಬ್ಬರಿ 9 ಮಿಲಿಯನ್ ಬ್ಯಾರೆಲ್‌ಗಳಿಗೆ ವಿಸ್ತರಿಸುವ ಬೃಹತ್ ಯೋಜನೆಯನ್ನು ಪರಿಶೀಲಿಸುತ್ತಿದೆ.
ಪೈಪ್‌ಲೈನ್‌ಗಳ ಜೊತೆಗೆ, ಯುಎಇ ಅತ್ಯಂತ ಚಾಣಾಕ್ಷ ಹೆಜ್ಜೆಯನ್ನಿಟ್ಟಿದೆ. ಹಾರ್ಮುಜ್ ಜಲಸಂಧಿಯ ಅರಬ್ಬಿ ಸಮುದ್ರದ ಬದಿಯಲ್ಲಿ ಹೊಸದೊಂದು ದೈತ್ಯ ಬಂದರು ಮತ್ತು ಕಂಟೇನರ್ ಟರ್ಮಿನಲ್ ನಿರ್ಮಿಸಲು ಯೋಜನೆ ರೂಪಿಸಿದೆ.
ದುಬೈ ಮೂಲದ ವಿಶ್ವಪ್ರಸಿದ್ಧ ಬಂದರು ನಿರ್ವಾಹಕ ಸಂಸ್ಥೆ ‘ಡಿಪಿ ವರ್ಲ್ಡ್’ಯುಎಇಯ ಪೂರ್ವ ಕರಾವಳಿಯಲ್ಲಿ ಈ ಬಹುಪಯೋಗಿ ಬಂದರನ್ನು ಅಭಿವೃದ್ಧಿಪಡಿಸಲಿದೆ. ಈ ಮೂಲಕ ದುಬೈ ತನ್ನ ಪ್ರಮುಖ ‘ಜೆಬೆಲ್ ಅಲಿ’ ಬಂದರಿನ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿ, ಅಸ್ಥಿರ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವ ಹೊಸ ಹಡಗು ಮಾರ್ಗವನ್ನು ಜಗತ್ತಿಗೆ ಪರಿಚಯಿಸಲಿದೆ.
ಜಾಗತಿಕ ಹೂಡಿಕೆ ಬ್ಯಾಂಕ್ ಆದ ‘ಗೋಲ್ಡ್‌ಮನ್ ಸ್ಯಾಚ್ಸ್’ ನ ಪ್ರಮುಖ ವಿಶ್ಲೇಷಕಿ ಅಲೆಕ್ಸಾಂಡ್ರಾ ಪೌಲಸ್ ಅವರ ವರದಿಯ ಪ್ರಕಾರ, ಪ್ರಸ್ತುತ ಗಲ್ಫ್ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಏಳು ಪ್ರಮುಖ ಪೈಪ್‌ಲೈನ್ ಯೋಜನೆಗಳು ಯಶಸ್ವಿಯಾದರೆ, 2028 ರ ಅಂತ್ಯದ ವೇಳೆಗೆ ಗಲ್ಫ್ ರಾಷ್ಟ್ರಗಳ ಒಟ್ಟು ತೈಲ ರಫ್ತಿನ ಶೇಕಡಾ 60 ರಷ್ಟು (ದಿನಕ್ಕೆ 7.3 ಮಿಲಿಯನ್ ಬ್ಯಾರೆಲ್) ಭಾಗವು ಹಾರ್ಮುಜ್ ಜಲಸಂಧಿಯ ಅಪಾಯವಿಲ್ಲದೆಯೇ ಸುರಕ್ಷಿತವಾಗಿ ಜಗತ್ತನ್ನು ತಲುಪಲಿದೆ.
ಈ ಪರ್ಯಾಯ ಮಾರ್ಗಗಳಿಗಾಗಿ ಶತಕೋಟಿ ಡಾಲರ್ ಸುರಿಯಲಾಗುತ್ತಿದ್ದರೂ, ಭೌಗೋಳಿಕವಾಗಿ ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಇಲ್ಲದೆಯಾಗಿಸಲು ಸಾಧ್ಯವಿಲ್ಲ ಎಂದು ಜಾಗತಿಕ ಇಂಧನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಇರಾನ್‌ನ ಇತ್ತೀಚಿನ ಸರಣಿ ಬೆದರಿಕೆಗಳು ಮಧ್ಯಪ್ರಾಚ್ಯದ ಆರ್ಥಿಕ ಭೂಪಟವನ್ನು ಹೊಸದಾಗಿ ಮರುವಿನ್ಯಾಸಗೊಳಿಸುತ್ತಿರುವುದಂತೂ ಸತ್ಯ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ