
ಟೆಹ್ರಾನ್, ಆಗಸ್ಟ್ 24: ವಿಶ್ವದ ಕಚ್ಚಾ ತೈಲ ಸಾಗಣೆಯ ಐದನೇ ಒಂದು ಭಾಗದಷ್ಟು ಪೂರೈಕೆಯನ್ನು ನಿಯಂತ್ರಿಸುವ ಆಯಕಟ್ಟಿನ ಹಾರ್ಮುಜ್ ಜಲಸಂಧಿ(Hormuz Strait) ವಿಚಾರವಾಗಿ ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ತನ್ನ ಆರ್ಥಿಕ ಒತ್ತಡವನ್ನು ಮುಂದುವರೆಸಿದರೆ, ಜಲಸಂಧಿಯ ಮೂಲಕ ಒಂದು ಹನಿ ತೈಲವನ್ನೂ ರಫ್ತು ಮಾಡಲು ಬಿಡುವುದಿಲ್ಲ ಎಂದು ಇರಾನ್ ಸೋಮವಾರ ನೇರ ಎಚ್ಚರಿಕೆ ನೀಡಿದೆ.
ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ನಾಯಕ ಮೊಹ್ಸೆನ್ ರೆಜೈ ಅವರು, ಅಮೆರಿಕದ ಪರವಾಗಿ ನಿಲ್ಲುವ ಯಾವುದೇ ದೇಶವನ್ನು ಯುದ್ಧದಲ್ಲಿ ಭಾಗಿಯಾದ ಶತ್ರು ದೇಶವೆಂದೇ ಪರಿಗಣಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕವು ಆರ್ಥಿಕ ದಿಗ್ಬಂಧನ ಮುಂದುವರಿಸಿದರೆ, ಪರ್ಷಿಯನ್ ಕೊಲ್ಲಿಯಿಂದ ಹೊರಡುವ ಯಾವುದೇ ದೇಶದ ತೈಲ ಟ್ಯಾಂಕರ್‌ಗಳಿಗೂ ಹಾರ್ಮುಜ್ ಮಾರ್ಗದಲ್ಲಿ ಸಾಗಲು ಬಿಡುವುದಿಲ್ಲ ಎಂದು ಇರಾನ್ ತಿಳಿಸಿದೆ.
ಟ್ರಂಪ್ ಹೇಳಿಕೆಗೆ ಆಕ್ರೋಶ: ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸಲು ಅಥವಾ ಅಮೆರಿಕದ ನಿಯಂತ್ರಣಕ್ಕೆ ತರಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತೀವ್ರವಾಗಿ ಖಂಡಿಸಿದೆ.
ಮತ್ತಷ್ಟು ಓದಿ:
ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ
ಓಮನ್ ಒಪ್ಪಂದ ಮತ್ತು ರಾಜತಾಂತ್ರಿಕ ಬಿಕ್ಕಟ್ಟು
ಇರಾನ್ ಮತ್ತು ಓಮನ್ ದೇಶಗಳು ಜಲಸಂಧಿ ಮೂಲಕ ಸಾಗುವ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸುವ ವ್ಯವಸ್ಥೆಯ ಬಗ್ಗೆ ಚರ್ಚಿಸುತ್ತಿವೆ. ಆದರೆ ಇದಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಹಾರ್ಮುಜ್ ಮಾರ್ಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಹಡಗುಗಳು ಪರ್ಯಾಯ ಮಾರ್ಗಗಳನ್ನು ಅವಲಂಬಿಸುತ್ತಿದ್ದು, ಸಂಚಾರ ಗಣನೀಯವಾಗಿ ಇಳಿಕೆಯಾಗಿದೆ.
ಭಾರತವು ತನ್ನ ಕಚ್ಚಾ ತೈಲ ಆಮದಿನ ಬಹುಪಾಲು ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೇ ಹಾರ್ಮುಜ್ ಜಲಸಂಧಿಯ ಮೂಲಕ ಪಡೆಯುತ್ತದೆ. ಈ ಜಲಮಾರ್ಗದಲ್ಲಿ ಯಾವುದೇ ಅಡೆತಡೆ ಉಂಟಾದರೂ ಜಾಗತಿಕ ತೈಲ ಬೆಲೆ ಗಗನಕ್ಕೇರಿ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಮತ್ತು ಹಣದುಬ್ಬರ ಹೆಚ್ಚಾಗುವ ಅಪಾಯವಿರುತ್ತದೆ.
ಜಾಗತಿಕ ತೈಲ ಸರಬರಾಜು ಮಾರ್ಗ: ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್ ಮತ್ತು ಕತಾರ್ ದೇಶಗಳ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಹಾರ್ಮುಜ್ ಜಲಸಂಧಿಯೇ ಜೀವನಾಡಿಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ