ಜೆರುಸಲೆಂ/ಟೆಲ್ ಅವೀವ್: ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಮಾರ್ಪಡುತ್ತಿರುವ ಇಸ್ರೇಲ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತ್ರಿಶಂಕು ಸ್ಥಿತಿ ತಲುಪಿದೆ. ಹಿಂದಿನ ಪ್ರಧಾನಿ ಬೆಂಝಮಿನ್ ನೆತನ್ಯಾಹು ಅವರಾಗಲಿ ಅಥವಾ ಪ್ರಮುಖ ಪ್ರತಿಪಕ್ಷವಾದ ಬ್ಲ್ಯೂ ಅಂಟ್ ವೈಟ್ ಪಕ್ಷವಾಗಲಿ ಅಧಿಕಾರದ ಪೀಠಕ್ಕೆ ಹತ್ತಿರವಾಗಿ, ರಾಷ್ಟ್ರದ ಚುಕ್ಕಾಣಿ ಹಿಡಿಯುವಲ್ಲಿ ಮುಗ್ಗರಿಸಿದೆ. ಹೀಗಾಗಿ ಒಂದೇ ವರ್ಷದಲ್ಲಿ ಇಸ್ರೇಲ್ ಮೂರನೆಯ ಬಾರಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ.
ಸೆಪ್ಟೆಂಬರ್ 17 ರಂದು ನಡೆದು ಸಂಸದೀಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಕಂಡುಬಂದಿದೆ. ಪರಿಸ್ಥಿತಿ ನಿಭಾಯಿಸಲು ಅಧ್ಯಕ್ಷ ರುವೆನ್ ರವ್ಲೀನ್ ಅವರು ಸರ್ಕಾರ ರಚಿಸುವುದಕ್ಕೆ 28 ದಿನಗಳ ಗಡುವು ವಿಧಿಸಿ, ನೆತನ್ಯಾಹುಗೆ ಆಹ್ವಾನ ನೀಡಿದ್ದರು. ಆ ಗಡುವು ಮುಗಿಯುತ್ತಾ ಬಂದಿದ್ದು, ನೆತನ್ಯಾಹು ಸುಗಮವಾಗಿ ಅಧಿಕಾರಕ್ಕೆ ಬರಲು ತೊಡಕಾಗಿದೆ.
ಸರ್ಕಾರ ರಚನೆಗೆ 120 ಸದಸ್ಯ ಬಲದ ಸಂಸತ್ತಿನಲ್ಲಿ ಮ್ಯಾಜಿಕ್ ನಂಬರ್ 61 ಆಗಿದೆ. ಬ್ಲ್ಯೂ ಅಂಟ್ ವೈಟ್ ಪಕ್ಷದ ಮಾಜಿ ಸೇನಾಧಿಕಾರಿ ಬೆನ್ನಿ ಗಂಝ್ ಅವರಿಗೆ 54 ಸದಸ್ಯರ ಬೆಂಬಲ ಇದೆ. ಅದೇ ನೆತನ್ಯಾಹು ಪಕ್ಷಕ್ಕೆ 56 ಸದಸ್ಯರ ಬೆಂಬಲವಿದೆ. ಹಾಗಾಗಿ, ಅಧ್ಯಕ್ಷ ರುವೆನ್ ನೆತನ್ಯಾಹುಗೆ ಸರ್ಕಾರ ರಚನೆಗೆ ಸೂಚಿಸಿದ್ದರು.
ಆದ್ರೆ ಸರ್ಕಾರ ರಚನೆ ನಿಟ್ಟಿನಲ್ಲಿ ನೆತನ್ಯಾಹು, ಬೆನ್ನಿ ಗಂಝ್ ಬೆಂಬಲ ಗಳಿಸಲು ಯತ್ನಿಸಿದರಾದರೂ ಇದುವರೆಗೂ ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ಬೆನ್ನಿ ಗಂಝ್, ನೆತನ್ಯಾಹು ಜೊತೆ ಕೈಜೋಡಿಸಲು ಸುತರಾಂ ಒಪ್ಪಿಲ್ಲ. ಹಾಗಾಗಿ ಅನಿವಾರ್ಯವಾಗಿ ಇಸ್ರೇಲ್ ಒಂದೇ ವರ್ಷದಲ್ಲಿ ಮೂರನೆಯ ಬಾರಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಿಸುವಂತಾಗಿದೆ.
Published On - 4:48 pm, Wed, 23 October 19