ತಟಸ್ಥ ನಿಲುವು: ಉಕ್ರೇನ್ ಪ್ರದೇಶಗಳ ಮೇಲೆ ರಷ್ಯಾದ ಹಿಡಿತ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಮತ್ತೆ ದೂರ ದೂರ

| Updated By: ಸಾಧು ಶ್ರೀನಾಥ್​

Updated on: Oct 13, 2022 | 12:01 PM

ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ನಡುವಣ ಯುದ್ಧ ವಿಷಯದಲ್ಲಿ "ಸಂವಾದ ಮತ್ತು ರಾಜತಾಂತ್ರಿಕವಾಗಿ ಶಾಂತಿಯುತ ಪರಿಹಾರಕ್ಕೆ ಶ್ರಮಿಸುವ ದೃಢ ಸಂಕಲ್ಪದೊಂದಿಗೆ, ಭಾರತವು ವಿಶ್ವಸಂಸ್ಥೆಯ ನಿರ್ಧಾರದಿಂದ ದೂರವಿರಲು ನಿರ್ಧರಿಸಿದೆ" ಎಂದು ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.

ತಟಸ್ಥ ನಿಲುವು: ಉಕ್ರೇನ್ ಪ್ರದೇಶಗಳ ಮೇಲೆ ರಷ್ಯಾದ ಹಿಡಿತ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಮತ್ತೆ ದೂರ ದೂರ
ಉಕ್ರೇನ್ ಪ್ರದೇಶಗಳ ಮೇಲೆ ರಷ್ಯಾ ಸ್ವಾಧೀನ ನಿರ್ಣಯ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಮತ್ತೆ ದೂರ
Follow us on

Russia-Ukraine war: ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ನಡುವಣ ಯುದ್ಧ ಮುಂದುವರಿದಿದ್ದು, ಭಾರತ ಈ ವಿಷಯದಲ್ಲಿ ಶಾಂತಿ ಪರಿಹಾರ ಬಯಸಿ ತನ್ನ ನಿರ್ಣಯಕ್ಕೆ ದೃಢವಾಗಿ ಅಂಟಿಕೊಂಡಿದೆ. ಉಕ್ರೇನ್ ಪ್ರದೇಶಗಳನ್ನು (Ukrainian territories) ರಷ್ಯಾ ಸ್ವಾಧೀನ ಪಡಿಸಿಕೊಳ್ಳುವ (Russia`s annexation) ನಿರ್ಣಯವನ್ನು ಖಂಡಿಸುವ ನಿರ್ಧಾರವನ್ನು ವಿಶ್ವಸಂಸ್ಥೆ (UNGA resolution) ಹೊಂದಿದೆ. ಆದರೆ ಈ ನಿರ್ಧಾರದಿಂದ ಭಾರತ ಮತ್ತೆ ದೂರವೇ ಉಳಿದಿದೆ.

ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ (Ruchira Kamboj) ಅವರು ಭಾರತದ ನಿರ್ಧಾರವನ್ನು ಸ್ಪಷ್ಟ ಮಾತುಗಳಲ್ಲಿ ವಿವರಿಸಿದ್ದಾರೆ. “ಸಂವಾದ ಮತ್ತು ರಾಜತಾಂತ್ರಿಕವಾಗಿ ಶಾಂತಿಯುತ ಪರಿಹಾರಕ್ಕೆ ಶ್ರಮಿಸುವ ದೃಢ ಸಂಕಲ್ಪದೊಂದಿಗೆ, ಭಾರತವು ವಿಶ್ವಸಂಸ್ಥೆಯ ನಿರ್ಧಾರದಿಂದ ದೂರವಿರಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ತನ್ಮೂಲಕ, ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ನಿರ್ಣಯದ ಮೇಲೆ ಭಾರತ ಮತ್ತೆ ತನ್ನ ತಟಸ್ಥತೆಯನ್ನು ಕಾಯ್ದುಕೊಂಡಿದೆ. ಬುಧವಾರ ನಡೆದ ಯುಎನ್‌ಜಿಎ ತುರ್ತು ಅಧಿವೇಶನದಲ್ಲಿ ಭಾರತ ಈ ನಿಲುವು ತಾಳಿದೆ. ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಇದು ಭಾರತ ಸರ್ಕಾರದ ಉತ್ತಮ ಚಿಂತನೆಯ ರಾಷ್ಟ್ರೀಯ ನಿರ್ಣಯಕ್ಕೆ ಹೊಂದಿಕೆಯಾಗಿದೆ ಎಂದು ಹೇಳಿದ್ದಾರೆ. ವಿಷಾದಕರ ಸಮಸ್ಯೆಗೆ (ರಷ್ಯಾ ಮತ್ತು ಉಕ್ರೇನ್ ಯುದ್ಧ) ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಕಿವಿಮಾತು ಹೇಳಿದರು. UNGA ನಿರ್ಣಯವು 143 ಮತಗಳನ್ನು ಪಡೆದವು. ಕೇವಲ ಐದು ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದವು. 35 ಗೈರು ಹಾಜರಾದವು. ಆದಾಗ್ಯೂ, ರಷ್ಯಾದ ಪ್ರತ್ಯೇಕತೆಯನ್ನು ಎತ್ತಿ ತೋರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತದೊಂದಿಗೆ ನಿರ್ಣಯ ಅಂಗೀಕಾರವಾಗಿದೆ.

ಭಾರತದ ನಿರ್ಧಾರವನ್ನು ವಿವರಿಸಿದ ರುಚಿರಾ ಕಾಂಬೋಜ್, “ಪರಸ್ಪರ ಸಂವಾದ ಮತ್ತು ರಾಜತಾಂತ್ರಿಕ ನೀತಿಯ ಅನುಸಾರ ಶಾಂತಿಯುತ ಪರಿಹಾರಕ್ಕಾಗಿ ಶ್ರಮಿಸುವ ದೃಢ ಸಂಕಲ್ಪದೊಂದಿಗೆ, ಭಾರತವು ದೂರವಿರಲು ನಿರ್ಧರಿಸಿದೆ” ಎಂದು ಹೇಳಿದರು. ಅವರು ರಷ್ಯಾವನ್ನು ಹೆಸರಿಸದೆ ಆ ರಾಷ್ಟ್ರವನ್ನು ಟೀಕೆಗೆ ಗುರಿಪಡಿಸಿದರು. “ಮಾನವ ಜೀವಗಳ ಬೆಲೆಗೆ ಯಾವುದೂ, ಎಂದಿಗೂ ಪರಿಹಾರವಾಗಿ ಬರುವುದಿಲ್ಲ ಎಂದು ನಾವು ಸತತವಾಗಿ ಪ್ರತಿಪಾದಿಸಿದ್ದೇವೆ. ಹಗೆತನ ಮತ್ತು ಹಿಂಸಾಚಾರವನ್ನು ಹೆಚ್ಚಿಸುವುದು ಯಾರದೇ ಹಿತಾಸಕ್ತಿ ಅಲ್ಲ” ಎಂದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಯುಎನ್​ ಅಸೆಂಬ್ಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಡಿದ ಭಾಷಣವನ್ನು ಅವರು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು ಯುದ್ಧ ಸಂದರ್ಭದಲ್ಲಿ ಉಕ್ರೇನ್‌ಗೆ ಬೆಂಬಲ ಸೂಚಿಸಿದರು. “ನಾವು ಯುಎನ್ ಚಾರ್ಟರ್ ಮತ್ತು ಅದರ ಸಂಸ್ಥಾಪಕ ತತ್ವಗಳನ್ನು ಗೌರವಿಸುವ ಬದಿಯಲ್ಲಿದ್ದೇವೆ” ಎಂದಿದ್ದರು.

ಕಾಶ್ಮೀರ ವಿಷಯವನ್ನು ಮತ್ತೆ ಕೆದಕಿದ ಪಾಕಿಸ್ತಾನ:

ಯುಎನ್ ಅಸೆಂಬ್ಲಿ ಅಧಿವೇಶನವು ಮತ್ತೆ ಪಾಕಿಸ್ತಾನದ ಅರೆಬರೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಅಜೆಂಡಾದಲ್ಲಿನ ವಿಷಯವನ್ನು ಲೆಕ್ಕಿಸದೆ, ಕಾಶ್ಮೀರವನ್ನು ಮಧ್ಯೆ ತರುವ ತನ್ನ ಗಿಮಿಕ್‌ಗೆ ಮತ್ತೆ ಪಾಕಿಸ್ತಾನ ಅಂಟಿಕೊಂಡಿತು. ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಪಾಕಿಸ್ತಾನವು ವಿಶ್ವಸಂಸ್ಥೆ ವೇದಿಕೆಯನ್ನು ‘ಕ್ಷುಲ್ಲಕ ಮತ್ತು ಅರ್ಥಹೀನ ಹೇಳಿಕೆಗಳೊಂದಿಗೆ’ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ತಳ್ಳಿಹಾಕಿದರು.

ನಿರ್ಣಯಕ್ಕೆ ಗೈರುಹಾಜರಾದ ಇಸ್ಲಾಮಾಬಾದ್‌ನ ಖಾಯಂ ಪ್ರತಿನಿಧಿ ಮುನೀರ್ ಅಕ್ರಮ್, ಕಾಶ್ಮೀರದ “ಅಕ್ರಮ ಸ್ವಾಧೀನ” ವನ್ನು ಔಪಚಾರಿಕಗೊಳಿಸುವ ಭಾರತದ ಪ್ರಯತ್ನಗಳ ಬಗ್ಗೆ “ಇದೇ ರೀತಿಯ ಕಾಳಜಿ ಅಥವಾ ಖಂಡನೆ” ಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

Published On - 11:35 am, Thu, 13 October 22