ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು: ಜಗತ್ತು 26/11, ಪಹಲ್ಗಾಮ್ ದಾಳಿಯನ್ನು ಮರೆತಿಲ್ಲ

ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನದ ಭಯೋತ್ಪಾದನೆ ಬೆಂಬಲ ನೀತಿಯನ್ನು ತೀವ್ರವಾಗಿ ಖಂಡಿಸಿದೆ. 26/11 ಮುಂಬೈ ಮತ್ತು ಪಹಲ್ಗಾಮ್ ದಾಳಿಗಳನ್ನು ಜಗತ್ತು ಮರೆತಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಆರೋಪಿಸಿದೆ. ಭಯೋತ್ಪಾದನೆಯ ನಿರ್ಮೂಲನೆಗೆ ಕಠಿಣ ಕ್ರಮಗಳು ಮತ್ತು ಹೊಣೆಗಾರಿಕೆ ಅತ್ಯಗತ್ಯ ಎಂದು ಭಾರತ ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು: ಜಗತ್ತು 26/11, ಪಹಲ್ಗಾಮ್ ದಾಳಿಯನ್ನು ಮರೆತಿಲ್ಲ
ವಿಶ್ವಸಂಸ್ಥೆ
Image Credit source: India at UN, NY X Account

Updated on: Oct 08, 2026 | 2:43 PM

ನ್ಯೂಯಾರ್ಕ್​, ಅಕ್ಟೋಬರ್ 08: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪದ ವಿಚಾರದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ತರಾಟೆಗೆ ತೆಗೆದುಕೊಂಡಿದೆ. 2008ರ ಮುಂಬೈ 26/11 ದಾಳಿ ಮತ್ತು 2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯನ್ನು ಜಗತ್ತು ಮರೆತಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಆರನೇ ಸಮಿತಿಯಲ್ಲಿ ನಡೆದ ಚರ್ಚೆಯ ವೇಳೆ ಪಾಕಿಸ್ತಾನದ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ರಘು ಪುರಿ, ಭಯೋತ್ಪಾದನೆಗೆ ಹಣಕಾಸು ಮತ್ತು ಆಶ್ರಯ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪಾಕಿಸ್ತಾನ ಬಲಿಪಶುವಿನಂತೆ ನಟಿಸುತ್ತಿದೆ

ಪಾಕಿಸ್ತಾನ ತನ್ನನ್ನು ಭಯೋತ್ಪಾದನೆಯ ಬಲಿಪಶು ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ತನ್ನ ನೆರೆ ರಾಷ್ಟ್ರಗಳಲ್ಲಿ ದಾಳಿ ನಡೆಸುವ ಸಂಘಟನೆಗಳಿಗೆ ಬೆಂಬಲ ನೀಡುವ ಮೂಲಕ ನಿಯಂತ್ರಣ ತಪ್ಪಿದ ಶಕ್ತಿಗಳನ್ನು ಬೆಳೆಸಿದೆ ಎಂದು ರಘು ಪುರಿ ಆರೋಪಿಸಿದರು. ಜೈಶ್-ಎ-ಮೊಹಮ್ಮದ್‌ನಂತಹ ಸಂಘಟನೆಗಳ ಬಗ್ಗೆ ಪಾಕಿಸ್ತಾನ ಈ ಹಿಂದೆ ವಿಶ್ವಸಂಸ್ಥೆಯಲ್ಲೇ ವಿಭಿನ್ನ ಹೇಳಿಕೆಗಳನ್ನು ನೀಡಿತ್ತು. ಇಂತಹ ಹೇಳಿಕೆಗಳನ್ನು ಜಗತ್ತು ಈ ಹಿಂದೆಯೂ ನೋಡಿದೆ ಎಂದು ಅವರು ಹೇಳಿದರು.

ಪೋಸ್ಟ್​

ಭಯೋತ್ಪಾದನೆಗೆ ಸುರಕ್ಷಿತ ತಾಣ ಇರಬಾರದು

ಭಯೋತ್ಪಾದಕ ಸಂಘಟನೆಗಳು ರಾಜಕೀಯ ಶಕ್ತಿಯ ನೆರಳಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ವ್ಯವಸ್ಥೆಯೇ ದುರ್ಬಲವಾಗುತ್ತದೆ ಎಂದು ಭಾರತ ಹೇಳಿದೆ. ಭಯೋತ್ಪಾದನೆ ವಿರುದ್ಧದ ಹೋರಾಟ ಪರಿಣಾಮಕಾರಿಯಾಗಬೇಕಾದರೆ ಜವಾಬ್ದಾರಿಯನ್ನು ಗುರುತಿಸುವುದು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದು ಅತ್ಯಗತ್ಯ ಎಂದು ರಘು ಪುರಿ ಹೇಳಿದರು.

ಧರ್ಮದ ಆಧಾರದ ಮೇಲಿನ ದಾಳಿ

ಪಹಲ್ಗಾಮ್‌ನಲ್ಲಿ ಬಲಿಯಾದ ಅಮಾಯಕರನ್ನು ಅವರ ರಾಜಕೀಯ ದೃಷ್ಟಿಕೋನದ ಬಗ್ಗೆ ಕೇಳಿರಲಿಲ್ಲ, ಅವರ ಧರ್ಮ ಯಾವುದೆಂದು ಕೇಳಿ ಹತ್ಯೆ ಮಾಡಲಾಯಿತು. ಇಂತಹ ಪರಿಸ್ಥಿತಿ ಇರುವಾಗ ಪಾಕಿಸ್ತಾನವು ಧಾರ್ಮಿಕ ದ್ವೇಷದ ವಿರುದ್ಧ ಮಾತನಾಡುವುದು ದೊಡ್ಡ ವಿಪರ್ಯಾಸ ಎಂದು ವಾಗ್ದಾಳಿ ನಡೆಸಿದರು.

ಮತ್ತಷ್ಟು ಓದಿ: ಆಂಧ್ರದಲ್ಲಿ ಪಾಕ್ ನಂಟಿರುವ ಗೂಢಚರ್ಯೆ ಜಾಲ ಪತ್ತೆ; ಇಬ್ಬರ ಬಂಧನ, ಹಲವು ನೌಕಾಪಡೆ ಸಿಬ್ಬಂದಿ ಮೇಲೆ ಅನುಮಾನ

ಮಸೂದ್ ಅಜರ್ ನಾಟಕ ಬಯಲು:

ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಗ್ಗೆ ಪಾಕಿಸ್ತಾನ ಹೊಂದಿರುವ ದ್ವಂದ್ವವನ್ನು ಬಯಲಿಗೆಳೆದ ಭಾರತ, ಕೆಲವು ತಿಂಗಳ ಹಿಂದಷ್ಟೇ ಇದೇ ವೇದಿಕೆಯಲ್ಲಿ ಜೈಶ್ ಅನ್ನು ನಿಷ್ಕ್ರಿಯ ಸಂಘಟನೆ ಎಂದು ಪಾಕ್ ಕರೆದಿತ್ತು. ಈಗ ಅವನ ಬಂಧನಕ್ಕೆ ಬಹುಮಾನ ಘೋಷಿಸುವ ನಾಟಕವಾಡುತ್ತಿದೆ. ಮಾಧ್ಯಮಗಳೇ ಆತನನ್ನು ಸಂಪರ್ಕಿಸುತ್ತಿರುವಾಗ, ಆತ ಎಲ್ಲಿದ್ದಾನೆ ಎಂಬುದು ಪಾಕ್ ಸರ್ಕಾರಕ್ಕೆ ಚೆನ್ನಾಗಿ ತಿಳಿದಿದೆ ಎಂದು ಸ್ಪಷ್ಟಪಡಿಸಿತು.

ಆಪರೇಷನ್ ಸಿಂಧೂರ್ ಮತ್ತು ಪಾಕ್ ಸುಳ್ಳುಗಳು

ಭಾರತದ ಸೇನಾ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನದ ವಾದವನ್ನು ತಳ್ಳಿಹಾಕಿದ ರಘು ಪುರಿ, “ಬಾಂಬ್ ದಾಳಿಗೆ ತುತ್ತಾದ ವಾಯುನೆಲೆಗಳು ಮತ್ತು ನಾಶವಾದ ರನ್‌ವೇಗಳು ಪಾಕಿಸ್ತಾನಕ್ಕೆ ವಿಜಯದಂತೆ ಕಂಡರೆ, ಆ ಭ್ರಮೆಯನ್ನು ಅವರು ಸಂಭ್ರಮಿಸಬಹುದು” ಎಂದು ತಿರುಗೇಟು ನೀಡಿದರು. ಪಾಕಿಸ್ತಾನವು ಕೇವಲ ತಪ್ಪು ಮಾಹಿತಿ ಮತ್ತು ಸುಳ್ಳು ನಿರೂಪಣೆಗಳ ಪ್ರಚಾರದಲ್ಲೇ ತೊಡಗಿದೆ. 2024ರ ಚುನಾವಣಾ ಅಕ್ರಮಗಳ ಆರೋಪ ಹೊತ್ತಿರುವ ಫಾರ್ಮ್ 47 ಸರ್ಕಾರದಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಬೂದುಪಟ್ಟಿ

ಉಗ್ರರಿಗೆ ಆರ್ಥಿಕ ನೆರವು ನೀಡುವುದನ್ನು ಮತ್ತು ಮನಿ ಲಾಂಡರಿಂಗ್ ತಡೆಯುವಲ್ಲಿ ವಿಫಲವಾದ ಕಾರಣ ಪಾಕಿಸ್ತಾನವನ್ನು 2018 ರಿಂದ 2022 ರವರೆಗೆ ಎಫ್​ಎಟಿಎಫ್ ‘ಗ್ರೇ ಲಿಸ್ಟ್’ನಲ್ಲಿ ಇರಿಸಲಾಗಿತ್ತು. ಮುಂಬರುವ ಪ್ಯಾರಿಸ್ ಎಫ್‌ಎಟಿಎಫ್ ಸಭೆಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ಹಣಕಾಸು ಅಕ್ರಮಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಆಂತರಿಕ ವಿರೋಧಾಭಾಸ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಇತ್ತೀಚೆಗೆ ತಮ್ಮ ಪ್ರಾಂತ್ಯಕ್ಕೆ ನೆರೆ ದೇಶಗಳಿಗಿಂತ ನೆರೆಯ ಪ್ರಾಂತ್ಯಗಳಿಂದಲೇ ಹೆಚ್ಚಿನ ಭದ್ರತಾ ಬೆದರಿಕೆಯಿದೆ ಎಂದು ಒಪ್ಪಿಕೊಂಡಿದ್ದನ್ನು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ, ಪಾಕಿಸ್ತಾನದ ಮುಖವಾಡವನ್ನು ಕಳಚಿತು.

ಭಾರತದ ಸ್ಪಷ್ಟ ಎಚ್ಚರಿಕೆ:

ಭಾರತವು ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಬದ್ಧವಾಗಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯು ಮುಂದುವರಿದರೆ ಪಾಕಿಸ್ತಾನ ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನೇರ ಸಂದೇಶ ರವಾನಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:43 pm, Thu, 8 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us