ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ

Iran Israel war updates: ಯುಎಇ, ಸೌದಿ ಅರೇಭಿಯಾ, ಲೆಬನಾನ್, ಬಹರೇನ್ ಕುವೇತ್ ಮೊದಲಾದ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ವೈಮಾನಿಕ ದಾಳಿಗಳು ಮುಂದುವರಿದಿವೆ. ಪಕ್ಕದ ದೇಶಗಳನ್ನು ಗುರಿ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷರು ವಾಗ್ದಾನ ಕೊಟ್ಟ ಬೆನ್ನಲ್ಲೇ ಈ ದಾಳಿಗಳಾಗಿವೆ. ಇದೇ ವೇಳೆ, ಇರಾನ್​ ಇಂಧನ ಪೂರೈಕೆ ಸರಪಳಿ ಕತ್ತರಿಸಲು ಇಸ್ರೇಲ್​ನಿಂದ ಆಯಿಲ್ ಟ್ಯಾಂಕ್​ಗಳ ಮೇಲೆ ದಾಳಿಯಾಗಿದೆ.

ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ
ಇರಾನ್ ದಾಳಿಯಿಂದ ಹೊತ್ತಿ ಉರಿಯುತ್ತಿರುವ ಕುವೇತ್​ನ ಆಯಿಲ್ ಟ್ಯಾಂಕ್

Updated on: Mar 08, 2026 | 11:49 AM

ನವದೆಹಲಿ, ಮಾರ್ಚ್ 8: ಅಮೆರಿಕದ ನೆಲೆಗಳನ್ನು ಹೊಂದಿರುವ ವಿವಿಧ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ವೈಮಾನಿಕ ದಾಳಿಗಳನ್ನು (Iran Attacks) ಮುಂದುವರಿಸಿದೆ. ಕುವೇತ್, ಬಹರೇನ್, ಕತಾರ್, ಸೌದಿ ಅರೇಬಿಯಾ, ಯುಎಇ, ಲೆಬನಾನ್ ದೇಶಗಳ ಮೇಲೆ ಇರಾನ್​ನಿಂದ ಡ್ರೋನ್, ಮಿಸೈಲ್​ಗಳಿಂದ ದಾಳಿಗಳಾಗಿವೆ. ನೆರೆಯ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್​ಕಿಯನ್ ಭರವವಸೆ ನೀಡಿದ ಒಂದೇ ದಿನದಲ್ಲಿ ಈ ಸಾಲು ಸಾಲು ದಾಳಿಗಳಾಗಿರುವುದು ಗಮನಾರ್ಹ.

ಕುವೇತ್ ಏರ್​ಪೋರ್ಟ್​ನಲ್ಲಿರುವ ಇಂಧನ ಟ್ಯಾಂಕ್​ಗಳನ್ನು ಗುರಿಯಾಗಿಸಿ ಇರಾನ್​ನಿಂದ ಡ್ರೋನ್ ದಾಳಿಯಾಗಿದೆ. ಇದರಿಂದ ಫುಯೆಲ್ ಟ್ಯಾಂಕ್ ಹೊತ್ತಿ ಉರಿಯುತ್ತಿದೆ. ಕುವೇತ್​ನ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಯತ್ನಿಸುತ್ತಿದೆ. ಇದೇ ವೇಳೆ, ಕುವೇತ್​ನಲ್ಲಿ ಮುನ್ನೆಚ್ಚರಿಕೆಯಾಗಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಲ್ಲಿನ ತೈಲ ಕಂಪನಿ ಹೇಳಿದೆ.

ಇದನ್ನೂ ಓದಿ: “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ”: ಇಂದೇ ಆಗುತ್ತ ಇರಾನ್​​​ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್

ಕತಾರ್ ಮೇಲೆ 10ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಿಂದ ದಾಳಿಯಾಗಿದೆ. ಆದರೆ, ಈ ಮಿಸೈಲ್​ನಗಳನ್ನು ಕತಾರ್​ನ ಡಿಫೆನ್ಸ್ ಸಿಸ್ಟಂಗಳು ತಡೆಯಲು ಯಶಸ್ವಿಯಾಗಿವೆ. ಸೌದಿ ಅರೇಬಿಯಾ ಹಾಗೂ ಇತರ ಗಲ್ಫ್ ದೇಶಗಳೂ ಕೂಡ ಇರಾನ್​ನಿಂದ ಕ್ಷಿಪಣಿ ಮತ್ತು ಡ್ರೋನ್​ಗಳ ದಾಳಿ ಎದುರಿಸಿವೆ.

ಬಹಳಷ್ಟು ವಿದೇಶಿಗರು ಇರುವ ದುಬೈನಲ್ಲಿ ಹಲವೆಡೆ ಸ್ಫೋಟಗಳಾಗಿರುವುದು ವರದಿಯಾಗಿದೆ. ಫೆಬ್ರುವರಿ 28ರಂದು ಯುದ್ಧ ಶುರುವಾದಾಗಿನಿಂದ ದುಬೈ ಹಾಗೂ ಯುಎಇಯ ಇತರ ನಗರಗಳಲ್ಲಿ 221 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 1,300ಕ್ಕೂ ಅಧಿಕ ಡ್ರೋನ್​ಗಳು ಪತ್ತೆಯಾಗಿವೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಇರಾನ್​ನ ಇಂಧನ ಪೂರೈಕೆ ಸ್ಥಗಿತಗೊಳಿಸಲು ಇಸ್ರೇಲ್ ಯತ್ನ

ಇಸ್ರೇಲ್ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಇರಾನ್​ನ ಹಲವು ತೈಲ ಸಂಗ್ರಹಗಾರಗಳನ್ನು ಗುರಿ ಮಾಡಿ ಈ ವಾರ ದಾಳಿ ಮಾಡಿವೆ. ಇರಾನ್​ನ ದೇಶೀಯ ಇಂಧನ ಪೂರೈಕೆ ಸರಪಳಿಗೆ ಭಂಗ ತರುವುದು ಇದರ ಉದ್ದೇಶ. ಮಿಲಿಟರಿ ಸರಕು ಸಾಗಣೆ, ನಾಗರಿಕ ಸಾರಿಗೆ, ವಿದ್ಯುತ್ ಉತ್ಪಾದನೆಗೆ ಅಡ್ಡಿ ಪಡಿಸುವುದು ಗುರಿ. ಇರಾನ್​ನ ಆಡಳಿತವನ್ನು ಕೆಳಗಿಸುವುದು ಅಂತಿಮ ಗುರಿ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Sun, 8 March 26

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us