ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೇಲೆ 2 ಬಾರಿ ಮಾರಣಾಂತಿಕ ದಾಳಿ; ಇರಾನ್ ಸಂಸದ ಮಾಹಿತಿ

ಇರಾನ್‌ನ ಹೊಸದಾಗಿ ನೇಮಕಗೊಂಡ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಕೋಮಾದಲ್ಲಿದ್ದಾರೆ, ವೈಮಾನಿಕ ದಾಳಿಯಲ್ಲಿ ಅವರ ತಂದೆ ಸಾವನ್ನಪ್ಪಿದ ನಂತರ ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ, ಅವರು ವಿರೂಪಗೊಂಡಿದ್ದಾರೆ ಎಂದು ಅಮೆರಿಕ ಹೇಳಿತ್ತು. ಇದರ ನಡುವೆ ಇರಾನ್ ಸಂಸದ ನೀಡಿರುವ ಹೇಳಿಕೆ ಭಾರೀ ಗಮನ ಸೆಳೆದಿದೆ. ಇರಾನಿನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೇಲೆ ಎರಡು ಬಾರಿ ಹತ್ಯೆ ಪ್ರಯತ್ನ ನಡೆದಿತ್ತು, ಆ ದಾಳಿಗಳಿಂದ ಅವರು ಬದುಕುಳಿದಿದ್ದಾರೆ ಎಂದು ಹೇಳಿದ್ದಾರೆ.

ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೇಲೆ 2 ಬಾರಿ ಮಾರಣಾಂತಿಕ ದಾಳಿ; ಇರಾನ್ ಸಂಸದ ಮಾಹಿತಿ
Mojtaba Khamenei

Updated on: Mar 13, 2026 | 7:44 PM

ವಾಷಿಂಗ್ಟನ್, ಮಾರ್ಚ್ 13: ಇರಾನ್‌ನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಇತ್ತೀಚಿನ ದಿನಗಳಲ್ಲಿ ಎರಡು ಮಾರಣಾಂತಿಕ ದಾಳಿಗಳಿಂದ ಬದುಕುಳಿದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಇರಾನ್ ಸಂಸತ್ ಸದಸ್ಯರೊಬ್ಬರು ತಿಳಿಸಿದ್ದಾರೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಹಗೆತನದ ಮಧ್ಯೆ ಈ ದಾಳಿಗಳು ನಡೆದಿವೆ ಎಂದು ಸಂಸದ ಮೊಹಮ್ಮದ್ರೆಜಾ ರೆಝಾಯಿ ಕೌಚಿ ಹೇಳಿದ್ದಾರೆ. ಇರಾನ್‌ನ ರಾಜ್ಯ ಸುದ್ದಿ ಸಂಸ್ಥೆ ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿಯೊಂದಿಗೆ ಮಾತನಾಡಿದ ಅವರು, ದೇಶದ ಮಾಜಿ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ನಿವಾಸದ ಮೇಲೆ ನಡೆದ ದಾಳಿಯ ಸಮಯದಲ್ಲಿ ಮೊಜ್ತಬಾ ಖಮೇನಿ ಕೂಡ ಹಾಜರಿದ್ದರು ಎಂದು ಹೇಳಿದ್ದಾರೆ.

ಅಮೆರಿಕ ಹಾಗೂ ಇಸ್ರೇಲ್​ನ ಮಾರಕ ದಾಳಿಯ ಸಮಯದಲ್ಲಿ ಮೊಜ್ತಬಾ ಖಮೇನಿ ಕೂಡ ಅಲಿ ಖಮೇನಿ ಜೊತೆಗೆ ಸ್ಥಳದಲ್ಲಿದ್ದರು. ಆದರೆ ಹತ್ಯೆ ಪ್ರಯತ್ನದಿಂದ ಮೊಜ್ತಬಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ರೆಝಾಯಿ ಕೌಚಿ ಹೇಳಿದ್ದಾರೆ. ಬಳಿಕ ಮೊಜ್ತಬಾ ಖಮೇನಿ ದಾಖಲಾಗಿದ್ದ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಮತ್ತೊಂದು ದಾಳಿ ನಡೆದಿತ್ತು. ಆದರೆ, ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ್ದಾರೆ. ಆದರೆ, ಅವರು ದಾಳಿ ನಡೆದ ಆಸ್ಪತ್ರೆಯ ಹೆಸರನ್ನು ಅಥವಾ ದಾಳಿಯ ನಿಖರವಾದ ಸ್ಥಳವನ್ನು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿದ್ದಾರಷ್ಟೇ, ಟ್ರಂಪ್ ಹೀಗ್ಯಾಕಂದ್ರು?

ಇದಕ್ಕೂ ಮೊದಲು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ಆರಂಭಿಕ ಹಂತದಲ್ಲಿ ಇರಾನ್‌ನ ಹೊಸ ನಾಯಕ ಗಾಯಗೊಂಡಿರಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಮೊಜ್ತಬಾ ಖಮೇನಿ ಈ ದಾಳಿಯಲ್ಲಿ ವಿರೂಪಗೊಂಡಿರುವ ಸಾಧ್ಯತೆಯಿದೆ, ಅವರು ಕೋಮಾದಲ್ಲಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಹತ್ಯೆಗೀಡಾದ ಅಯತೊಲ್ಲಾ ಅಲಿ ಖಮೇನಿ ಅವರ 56 ವರ್ಷದ ಮಗ ತೀವ್ರ ಗಾಯಗೊಂಡಿದ್ದಾರೆ ಮತ್ತು ಪ್ರಸ್ತುತ ಟೆಹ್ರಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಿಟಿಷ್ ಟ್ಯಾಬ್ಲಾಯ್ಡ್ ವರದಿ ಮಾಡಿತ್ತು. ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ, ಅವರ ಹೊಟ್ಟೆ, ಲಿವರ್​​ಗೆ ಗಂಭೀರ ಹಾನಿಯಾಗಿದೆ ಎಂದು ಹೇಳಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us