
ಜೆರುಸಲೇಂ, ಅಕ್ಟೋಬರ್ 28: ಇಸ್ರೇಲ್ ಸಾರ್ವತ್ರಿಕ ಚುನಾವಣೆಯ ಶೇ. 72ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಮೈತ್ರಿಕೂಟವು ಸಣ್ಣ ಪ್ರಮಾಣದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಮಧ್ಯೆ, ನೆತನ್ಯಾಹು ಅವರನ್ನು ಅಧಿಕಾರದಿಂದ ದೂರವಿಡಲು ಇಸ್ರೇಲ್‌ನ ಎಡಪಂಥೀಯ ನಾಯಕರು ಪ್ರಮುಖ ವಿರೋಧ ಪಕ್ಷಗಳು ಮತ್ತು ಅರಬ್ ನೇತೃತ್ವದ ಪಕ್ಷಗಳ ನಡುವೆ ಐಕ್ಯತೆ ಹಾಗೂ ಮೈತ್ರಿಗೆ ಕರೆ ನೀಡಿದ್ದಾರೆ. ಸದ್ಯಕ್ಕೆ ಇಸ್ರೇಲ್‌ನ 120 ಸದಸ್ಯ ಬಲದ ಪಾರ್ಲಿಮೆಂಟ್ ನಲ್ಲಿ ಶೇ. 72ರಷ್ಟು ಮತಗಳ ಎಣಿಕೆಯಂತೆ ನೆತನ್ಯಾಹು ಅವರ ‘ಲಿಕುಡ್’ ನೇತೃತ್ವದ ಮೈತ್ರಿಕೂಟವು ಬಹುಮತದ ಗಡಿ (61 ಸ್ಥಾನಗಳು) ತಲುಪಲು ತೀವ್ರ ಹೆಣಗಾಟ ನಡೆಸುತ್ತಿದ್ದು, ಸರ್ಕಾರ ರಚನೆಯತ್ತ ಸಾಗಿದೆ.
ವಿರೋಧ ಪಕ್ಷಗಳ ಪೈಪೋಟಿ:
ಮಾಜಿ ಮಿಲಿಟರಿ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ನೇತೃತ್ವದ ಮಧ್ಯಪಂಥೀಯ ಮೈತ್ರಿಕೂಟವು ಸಹ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗಳಿಸಿದ್ದು, ಅಂತಿಮ ಶೇಕಡಾವಾರು ಮತಗಳು ಬರುವವರೆಗೆ ಯಾವುದೇ ಬಣಕ್ಕೆ ಸಂಪೂರ್ಣ ಸ್ಪಷ್ಟತೆ ಸಿಕ್ಕಿಲ್ಲ.
ಇದನ್ನೂ ಓದಿ: ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿಗೆ ನೆತನ್ಯಾಹು ಆಹ್ವಾನ; ಪೈಲಟ್ ಸ್ಮಿತ್ ಮಚ್ಚರ್ ಜೊತೆ ಆಗಮಿಸಲು ಮನವಿ
ಇಸ್ರೇಲ್‌ನ 120 ಸದಸ್ಯ ಬಲದ ಪಾರ್ಲಿಮೆಂಟ್ನಲ್ಲಿ ಸರ್ಕಾರ ರಚನೆಗೆ 61 ಸ್ಥಾನಗಳ ಅಗತ್ಯವಿದೆ. ಚುನಾವಣೆಯ ನಂತರ ಪ್ರಕಟವಾದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮಾಜಿ ಸೇನಾ ಮುಖ್ಯಸ್ಥ ಹಾಗೂ ರಾಜಕೀಯ ರಂಗಕ್ಕೆ ಹೊಸಬರಾದ ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣ ಮತ್ತು ನೆತನ್ಯಾಹು ಅವರ ಬಲಪಂಥೀಯ ಕೂಟದ ನಡುವೆ ಭಾರಿ ನಿಕಟ ಪೈಪೋಟಿ (ತಲಾ 51 ಸ್ಥಾನಗಳು) ಇರುವುದಾಗಿ ಭವಿಷ್ಯ ನುಡಿದಿದ್ದವು. ನಾಯಕರು 61 ಸ್ಥಾನಗಳ ಬಹುಮತದ ಗಡಿಯಿಂದ ದೂರ ಉಳಿದಿರುವುದರಿಂದ, ಅಂತಿಮ ಫಲಿತಾಂಶದ ನಂತರ ಸಣ್ಣ ಪಕ್ಷಗಳು ಹಾಗೂ ಅರಬ್ ಪಕ್ಷಗಳ ಬೆಂಬಲ ಪಡೆಯಲು ಅಥವಾ ಮೈತ್ರಿಕೂಟ ರಚಿಸಲು ತೀವ್ರ ರಾಜಕೀಯ ಕಸರತ್ತು ನಡೆಯುವ ಸಾಧ್ಯತೆಯಿದೆ.
ಇಸ್ರೇಲ್‌ನ ಎಡಪಂಥೀಯ ನಾಯಕರು ಹಾಗೂ ರಾಜಕೀಯ ವಿಶ್ಲೇಷಕರು, ನೆತನ್ಯಾಹು ಮತ್ತೆ ಅಧಿಕಾರ ಹಿಡಿಯುವುದನ್ನು ತಡೆಯಬೇಕಾದರೆ ಯಹೂದಿ ನೇತೃತ್ವದ ವಿರೋಧ ಪಕ್ಷಗಳು ಮತ್ತು ಅರಬ್ ನೇತೃತ್ವದ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು ಎಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯಾರಿಗೂ ಸಿಗದ 61 ಮ್ಯಾಜಿಕ್ ನಂಬರ್: ಅತಂತ್ರ ಸಂಸತ್ತಿನತ್ತ ಇಸ್ರೇಲ್, ನೆತನ್ಯಾಹು ಹಾಗೂ ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ
ನೆತನ್ಯಾಹು ಕಟ್ಟುನಿಟ್ಟಿನ ನಿಲುವು:
ಪ್ರತಿಪಕ್ಷಗಳ ಈ ನಡೆಯ ನಡುವೆಯೂ ಪ್ರಧಾನಿ ನೆತನ್ಯಾಹು ತಮ್ಮ ಪಟ್ಟು ಸಡಿಲಿಸಿಲ್ಲ. ಅರಬ್ ಆಧಾರಿತ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವ ಅಥವಾ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸೈನಿಕರ ಮತಗಳು ನಿರ್ಣಾಯಕ:
ಇನ್ನೂ ಎಣಿಕೆಯಾಗಬೇಕಿರುವ ಯೋಧರು, ರಾಜತಾಂತ್ರಿಕರು ಮತ್ತು ಡಬಲ್ ಲಕೋಟೆಗಳ ಮತಗಳು ಅಂತಿಮ ಫಲಿತಾಂಶದ ಚಿತ್ರಣವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ಇಡೀ ಜಗತ್ತು ಇಸ್ರೇಲ್ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದೆ.
ಇಸ್ರೇಲ್ನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಶೇ. 77.7 ರಷ್ಟು ಭಾರಿ ಮತದಾನ ದಾಖಲಾಗಿದ್ದು, ಇದು 2022 ರ ಚುನಾವಣೆಗಿಂತ ಶೇ. 7.1ರಷ್ಟು ಹೆಚ್ಚಾಗಿದೆ. ಇದು ಇಸ್ರೇಲ್ನಲ್ಲಿ 1999ರ ನಂತರ ದಾಖಲಾದ ಅತ್ಯಧಿಕ ಮತದಾನವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ