
ಮಾಸ್ಕೋ, ಜುಲೈ 9: ಭಾರತ ಮತ್ತು ರಷ್ಯಾ ನಡುವಿನ ಸ್ನೇಹದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹ ಗಟ್ಟಿಯಾಗುತ್ತಿದೆ. ಪುಟಿನ್ ತಮ್ಮ ನಿವಾಸದ ಅಂಗಳದಲ್ಲಿ ಪುಟ್ಟ ಎಲೆಕ್ಟ್ರಿಕ್ ಗಾಡಿಯಲ್ಲಿ ಮೋದಿಯನ್ನು ಕೂರಿಸಿಕೊಂಡು ಸುತ್ತಾಡಿಸಿದ ಘಟನೆ ನಡೆಯಿತು. ಸ್ವತಃ ಪುಟಿನ್ ಅವರೇ ಗೋಲ್ಫ್ ಕಾರ್ಟ್ ಅನ್ನು ಡ್ರೈವ್ ಮಾಡುತ್ತಿದ್ದರು. ಮೋದಿ ಅವರ ಪಕ್ಕದ ಸೀಟಿನಲ್ಲಿ ಕೂತು ಈ ಶಾರ್ಟ್ ಡ್ರೈವ್ ಅನ್ನು ಆನಂದಿಸುತ್ತಿದ್ದಂತಿತ್ತು.
ಪುಟ್ಟದಾದ ಕಾರ್ಟ್ ಎಲೆಕ್ಟ್ರಿಕ್ ಗಾಡಿಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತು ಮೋದಿ ಅವರಷ್ಟೇ ಅಲ್ಲದೆ ಇಬ್ಬರು ಇಂಟರ್ಪ್ರಿಟರ್ಗಳೂ ಇದ್ದರು. ತಮ್ಮ ನಿವಾಸದಲ್ಲಿನ ಉದ್ಯಾನದಾದ್ಯಂತ ಈ ಗಾಡಿ ಓಡಾಡಿತು. ಮೋದಿ ಮತ್ತು ಪುಟಿನ್ ಇಬ್ಬರೂ ಇಂಟರ್ಪ್ರಿಟರ್ಗಳ ಸಹಾಯದೊಂದಿಗೆ ಸಂವಾದ ನಡೆಸಿದ್ದು ಕಂಡು ಬಂದಿತು.
ಇದನ್ನೂ ಓದಿ: 2 ದಿನಗಳ ರಷ್ಯಾ ಪ್ರವಾಸಕ್ಕಾಗಿ ಮಾಸ್ಕೋ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಎಲೆಕ್ಟ್ರಿಕ್ ಗಾಡಿಯಿಂದ ಕೆಳಗಿಳಿದ ಬಳಿಕ ಇಬ್ಬರೂ ಉದ್ಯಾನದಲ್ಲಿ ನಡೆದರು. ಈ ವೇಳೆ ಇಂಟರ್ಪ್ರಿಟರ್ಗಳು ಜೊತೆಯಲ್ಲಿ ಇರಲಿಲ್ಲ. ಇಂಟರ್ಪ್ರಿಟರ್ಗಳ ಸಹಾಯವಿಲ್ಲದೇ ಇಬ್ಬರೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದಿರಬಹುದು.
ನರೇಂದ್ರ ಮೋದಿ ಅವರು ಎರಡು ದಿನದ ಭೇಟಿಗಾಗಿ ರಷ್ಯಾಗೆ ಆಗಮಿಸಿದ್ದಾರೆ. ನಿನ್ನೆ (ಜುಲೈ 8) ರಾತ್ರಿ ಮೋದಿ ಅವರಿಗೆ ಪುಟಿನ್ ಔತಣಕೂಟ ಏರ್ಪಡಿಸಿದ್ದರು.
ಇದನ್ನೂ ಓದಿ: ರಷ್ಯಾದಲ್ಲಿ ಪ್ರಧಾನಿ ಮೋದಿ; ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ವ್ಲಾದಿಮಿರ್ ಪುಟಿನ್ ಜೊತೆ ನರೇಂದ್ರ ಮೋದಿ ವಿವಿಧ ವಿಷಯಗಳ ಚರ್ಚೆ ನಡೆಸಿದರು. ಉಕ್ರೇನ್ ಯುದ್ಧ ನಿಲ್ಲಿಸುವ ಸಂಬಂಧವೂ ಮೋದಿ ಮಾತನಾಡಿದರು. ಈ ವೇಳೆ, ಕೆಲಸ ಸಿಗುವ ಆಮಿಷದಿಂದ ರಷ್ಯಾ ಸೇನೆಗೆ ಸಿಲುಕಿರುವ ಭಾರತೀಯರನ್ನು ಮುಕ್ತಗೊಳಿಸಲು ಮೋದಿ ಯತ್ನಿಸಿದ್ದಾರೆ. ಪುಟಿನ್ ಜತೆ ಸೋಮವಾರದ ಡಿನ್ನರ್ ವೇಳೆ ಈ ವಿಚಾರ ಪ್ರಸ್ತಾಪಿಸಿ ಭಾರತೀಯರ ಬಿಡುಗಡೆಗೆ ಮನವಿ ಮಾಡಿದರೆನ್ನಲಾಗಿದೆ.
ಪುಟಿನ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಷ್ಯಾ ಸೇನೆಯಲ್ಲಿರುವ ಭಾರತೀಯರನ್ನು ವಿಮುಕ್ತಗೊಳಿಸಲು ಪುಟನ್ ನಿರ್ಧರಿಸಿದ್ದಾರಂತೆ. ಅದೇ ವೇಳೆ, ವ್ಲಾದಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನದುಂಬಿ ಶ್ಲಾಘಿಸಿದರು. ಭಾರತಕ್ಕೆ ಮೋದಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ