
ಜೆರುಸಲೆಮ್, ಆಗಸ್ಟ್ 25: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್(Iran)ನಡುವಿನ ಶೀತಲ ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅತ್ಯಂತ ಆಘಾತಕಾರಿ ಹಾಗೂ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಇಬ್ಬರು ಪುತ್ರರಲ್ಲಿ ಒಬ್ಬನನ್ನು ಹತ್ಯೆ ಮಾಡಲು ಇರಾನ್ ನೇರ ಸಂಚು ರೂಪಿಸಿತ್ತು ಎಂದು ಅವರು ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಹತ್ಯೆ ಯತ್ನದ ಗಂಭೀರ ಆರೋಪ: “ನಂಬಲಾಗದ ಸಂಗತಿಯೊಂದು ನಡೆದಿದೆ. ಇರಾನ್ ನನ್ನ ಪುತ್ರರಲ್ಲಿ ಒಬ್ಬನನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಪ್ರಯತ್ನಿಸಿತ್ತು. ಈ ಕಾರಣದಿಂದಲೇ ಭದ್ರತೆ ನೀಡುವುದು ಕೇವಲ ಐಷಾರಾಮಿಯಲ್ಲ, ಪ್ರಾಣ ರಕ್ಷಣೆಗೆ ಅತ್ಯಗತ್ಯ” ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ವಿಪಕ್ಷ ನಾಯಕನಿಗೆ ಭದ್ರತೆ ಬೆಂಬಲ: ಮುಂಬರುವ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿರುವ ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್‌ಗೆ ಶಿನ್ ಬೆಟ್ ಭದ್ರತೆ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಮಾತನಾಡಿದ ನೆತನ್ಯಾಹು, ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾಯಕರಿಗೆ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಪ್ರತಿಪಾದಿಸಿದರು.
ಮತ್ತಷ್ಟು ಓದಿ: ಇರಾನ್‌ಗೆ ನೆರವು ನೀಡಿದರೆ ಆರ್ಥಿಕವಾಗಿ ಸರ್ವನಾಶ, ವಿಶ್ವದ ರಾಷ್ಟ್ರಗಳಿಗೆ ಟ್ರಂಪ್ ಖಡಕ್ ಎಚ್ಚರಿಕೆ
ನೆತನ್ಯಾಹು ಅವರಿಗೆ ಯೈರ್ ಮತ್ತು ಅವ್ನರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಕಿರಿಯ ಮಗ ಅವ್ನರ್ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದರೆ, ಹಿರಿಯ ಮಗ ಯೈರ್ (35) ಅಮೆರಿಕದ ಮಿಯಾಮಿಯಲ್ಲಿ ನೆಲೆಸಿದ್ದು, ಶಿನ್ ಬೆಟ್ ರಕ್ಷಣೆಯಲ್ಲಿದ್ದಾರೆ.
ಇಸ್ರೇಲಿ ಮಾಧ್ಯಮಗಳ ಪ್ರಕಾರ, ಈ ಹತ್ಯೆ ಯತ್ನದ ಮಾಹಿತಿ ಭದ್ರತಾ ಸಂಸ್ಥೆಗಳಿಗೆ ಮೊದಲೇ ತಿಳಿದಿತ್ತು. ಆದರೆ ನ್ಯಾಯಾಲಯದ ಆದೇಶದ ಕಾರಣದಿಂದ ಇದನ್ನು ಇಷ್ಟು ದಿನ ಗೌಪ್ಯವಾಗಿಡಲಾಗಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್‌ನ ಉನ್ನತ ನಾಯಕರು, ವಿಜ್ಞಾನಿಗಳು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಿದೇಶಿ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಗುಪ್ತಚರ ಎಚ್ಚರಿಕೆಗಳು ಬಂದಿವೆ.
ಭದ್ರತಾ ವೆಚ್ಚದ ಚರ್ಚೆ: ವಿದೇಶದಲ್ಲಿರುವ ಪ್ರಧಾನಿಯ ಕುಟುಂಬಕ್ಕೆ ಭಾರಿ ವೆಚ್ಚದಲ್ಲಿ ಇಸ್ರೇಲಿ ತೆರಿಗೆದಾರರ ಹಣದಿಂದ ಭದ್ರತೆ ನೀಡಲಾಗುತ್ತಿದೆ ಎಂಬ ಆಂತರಿಕ ಟೀಕೆಗಳ ನಡುವೆಯೇ ನೆತನ್ಯಾಹು ಈ ವಿಷಯವನ್ನು ಬಹಿರಂಗಪಡಿಸಿರುವುದು ಭದ್ರತಾ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಕಾರ್ಯತಂತ್ರದ ಭಾಗವಾಗಿಯೂ ನೋಡಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ