
ಸ್ಟಾಕ್‌ಹೋಮ್, ಅಕ್ಟೋಬರ್ 8: 2026ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಯು ಕೆನಡಾದ ಲೇಖಕಿ ಆನ್ ಕಾರ್ಸನ್ ಅವರಿಗೆ ಒಲಿದಿದೆ. ಸಾಂಪ್ರದಾಯಿಕ ಸಾಹಿತ್ಯ ಪರಂಪರೆಯೊಂದಿಗೆ ರೋಚಕ ಸಂವಾದ ನಡೆಸುತ್ತಾ, ಸಮಕಾಲೀನ ಸಾಹಿತ್ಯ ಕ್ಷೇತ್ರಕ್ಕೆ ನೂತನ ರೂಪಗಳನ್ನು ತಂದುಕೊಟ್ಟ ಅವರ ಸಾಹಸಮಯ ಹಾಗೂ ಸೃಜನಶೀಲ ಕೃತಿಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಪ್ರಕಟಿಸಿದೆ.
ಸಮಕಾಲೀನ ಕಾವ್ಯ ಮತ್ತು ಗದ್ಯ ಕ್ಷೇತ್ರದ ಅತ್ಯಂತ ವಿಶಿಷ್ಟ ಲೇಖಕಿ, ಕೆನಡಾದ ಕವಿ ಹಾಗೂ ಸಾಹಿತಿ ಆನ್ ಕಾರ್ಸನ್ ಅವರಿಗೆ 2026ರ ಪ್ರತಿಷ್ಠಿತ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಒಲಿದಿದೆ. ನೊಬೆಲ್ ಸಮಿತಿಯು ಪ್ರಶಸ್ತಿ ಕುರಿತು ಕರೆ ಮಾಡಿದಾಗ ಆನ್ ಕಾರ್ಸನ್ ಐಸ್‌ಲ್ಯಾಂಡ್‌ನಲ್ಲಿದ್ದರು. ಈ ಪ್ರಶಸ್ತಿಯ ಸುದ್ದಿ ತಿಳಿದ ಕ್ಷಣವನ್ನು ಸ್ಮರಿಸಿದ ಕಾರ್ಸನ್, “ನಾನು ಐಸ್‌ಲ್ಯಾಂಡ್‌ನಲ್ಲಿ ಗಾಳಿಯ ಸದ್ದನ್ನು ಆಲಿಸುತ್ತಿದ್ದಾಗ ಈ ಕರೆ ಬಂದಿತು” ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
BREAKING NEWS
The 2026 #NobelPrize in Literature is awarded to the Canadian author Anne Carson, “for her bold and inventive oeuvre that, in playful dialogue with the classical tradition, has created new forms for contemporary literature.” https://t.co/YRvlRghlGG— The Nobel Prize (@NobelPrize) October 8, 2026
76 ವರ್ಷದ ಆನ್ ಕಾರ್ಸನ್ ಅವರು ಕಾವ್ಯ, ಗದ್ಯ, ಸಾಂಪ್ರದಾಯಿಕ ಅಭಿಜಾತ ಸಾಹಿತ್ಯ ಮತ್ತು ಅನುವಾದಗಳ ನಡುವಿನ ಮಿತಿಗಳನ್ನು ಮೀರಿ ಬರೆಯುವ ವೈಶಿಷ್ಟ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರಾಚೀನ ಗ್ರೀಕ್ ಸಾಹಿತ್ಯವನ್ನು ಆಧುನಿಕ ವಿಷಯಗಳೊಂದಿಗೆ ಸಂಯೋಜಿಸಿ ಬರೆಯುವಲ್ಲಿ ಅವರು ಅತ್ಯಂತ ಪ್ರಸಿದ್ಧರು.
ಇದನ್ನೂ ಓದಿ: ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್, ಕೆನ್ಸೊ ಸೊವಾಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ
ಪ್ರಸಿದ್ಧ ಕೃತಿಗಳು:
ಆಟೋಬಯೋಗ್ರಫಿ ಆಫ್ ರೆಡ್, ದಿ ಬ್ಯೂಟಿ ಆಫ್ ದಿ ಹಸ್ಬೆಂಡ್ ಮತ್ತು ರಾಂಗ್ ನಾರ್ಮಾ ಅವರ ಪ್ರಮುಖ ಕೃತಿಗಳು. ಜೊತೆಗೆ ಪ್ರಾಚೀನ ಗ್ರೀಕ್‌ನ ಸ್ಯಾಫೋ ಮತ್ತು ಯುರಿಪಿಡೀಸ್ ಅವರ ಮಹತ್ವದ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅವರು ಮೆಕ್‌ಗಿಲ್, ಪ್ರಿನ್ಸ್‌ಟನ್ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ (ಬರ್ಕ್ಲಿ) ಕ್ಲಾಸಿಕ್ಸ್ ಮತ್ತು ಸಾಹಿತ್ಯ ವಿಭಾಗದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.
WATCH LIVE: Join us for the announcement of the 2026 Nobel Prize in Literature.
Hear the breaking news first.
Where are you watching from?
#NobelPrize https://t.co/ONhGnjPQpg
— The Nobel Prize (@NobelPrize) October 8, 2026
ಸಾಹಿತ್ಯ ನೊಬೆಲ್ ಪ್ರಶಸ್ತಿಯ ಹಿನ್ನೆಲೆ:
ನೊಬೆಲ್ ಪ್ರಶಸ್ತಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, 1901ರಿಂದ 2025ರವರೆಗೆ 118 ಬಾರಿ ಒಟ್ಟು 122 ಜನರಿಗೆ ಸಾಹಿತ್ಯ ನೋಬೆಲ್ ನೀಡಲಾಗಿದೆ. 2025ರ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯನ್ ಲೇಖಕ ಲಾಸ್ಲೋ ಕ್ರಾಸ್ನಾಹೋರ್ಕಾಯ್ ಅವರಿಗೆ ನೀಡಲಾಗಿತ್ತು. ಇದುವರೆಗೆ ಒಟ್ಟು 18 ಮಹಿಳೆಯರು ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. 1909ರಲ್ಲಿ ಪ್ರಶಸ್ತಿ ಪಡೆದ ಸ್ವೀಡನ್‌ನ ಸೆಲ್ಮಾ ಲೇಗರ್ಲೋಫ್ ಮೊದಲ ಮಹಿಳಾ ಸಾಧಕಿಯಾಗಿದ್ದಾರೆ.
ಪ್ರಸ್ತುತ ಸಾಲಿನ ನೊಬೆಲ್ ಬಹುಮಾನ ಮೊತ್ತ 12 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 11 ಕೋಟಿ ರೂ.ಗೂ ಹೆಚ್ಚು) ಆಗಿದೆ.
1907ರಲ್ಲಿ 41ನೇ ವಯಸ್ಸಿನಲ್ಲಿ ಪ್ರಶಸ್ತಿ ಪಡೆದ ರಡ್ಯಾರ್ಡ್ ಕಿಪ್ಲಿಂಗ್ ಅತ್ಯಂತ ಕಿರಿಯ ಸಾಹಿತ್ಯ ನೊಬೆಲ್ ವಿಜೇತರಾದರೆ, 2007ರಲ್ಲಿ 87ನೇ ವಯಸ್ಸಿನಲ್ಲಿ ಪ್ರಶಸ್ತಿ ಪಡೆದ ಡೋರಿಸ್ ಲೆಸ್ಸಿಂಗ್ ಅತ್ಯಂತ ಹಿರಿಯ ವಯಸ್ಸಿನವರಾಗಿದ್ದಾರೆ.
ಪ್ರಶಸ್ತಿ ನೀಡದ ವರ್ಷಗಳು:
ವಿಶ್ವಯುದ್ಧಗಳ ಕಾರಣ ಸೇರಿದಂತೆ 1914, 1918, 1935, 1940, 1941, 1947 ಮತ್ತು 1943ರ ಒಟ್ಟು 7 ವರ್ಷಗಳಲ್ಲಿ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿರಲಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ