ಎನ್‌ವಿಡಿಯಾ ಹುದ್ದೆ ಉಳಿಸಿಕೊಳ್ಳಲು ಹೋರಾಡುವಂತೆ ಜೆನ್ಸನ್ ಹುವಾಂಗ್‌ಗೆ ಟ್ರಂಪ್ ಕರೆ, ಆದರೂ ಸಿಇಒ ಸ್ಥಾನಕ್ಕೆ ರಾಜೀನಾಮೆ

ಚೀನಾ ಗೂಢಚಾರಿಕೆ ಆರೋಪ ಎದುರಿಸುತ್ತಿರುವ ಮಹಿಳೆಯೊಂದಿಗೆ ಸಂಬಂಧದ ವಿವಾದದ ನಡುವೆ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ರಾಜೀನಾಮೆ ನೀಡಿದ್ದಾರೆ. ತಮ್ಮ ಹುದ್ದೆ ಉಳಿಸಿಕೊಳ್ಳಲು ಹೋರಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಲಹೆ ನೀಡಿದ್ದರೂ, ಹುವಾಂಗ್ ರಾಜೀನಾಮೆ ನೀಡಿದ್ದು, ಕಂಪನಿಯ ನಿರ್ಧಾರವಾಗಿದೆ. ಇದರಿಂದ ಎನ್‌ವಿಡಿಯಾ ಷೇರುಗಳ ಮೇಲೆ ಪರಿಣಾಮ ಬೀರಿದೆ. ಮಧ್ಯಂತರ ಸಿಇಒ ಆಗಿ ಕೊಲೆಟ್ ಕ್ರೆಸ್ ನೇಮಕಗೊಂಡಿದ್ದಾರೆ.

ಎನ್‌ವಿಡಿಯಾ ಹುದ್ದೆ ಉಳಿಸಿಕೊಳ್ಳಲು ಹೋರಾಡುವಂತೆ ಜೆನ್ಸನ್ ಹುವಾಂಗ್‌ಗೆ ಟ್ರಂಪ್ ಕರೆ, ಆದರೂ ಸಿಇಒ ಸ್ಥಾನಕ್ಕೆ ರಾಜೀನಾಮೆ
ಡೊನಾಲ್ಡ್​ ಟ್ರಂಪ್

Updated on: Nov 13, 2026 | 9:06 AM

ವಾಷಿಂಗ್ಟನ್, ನವೆಂಬರ್ 13: ಅಮೆರಿಕದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಎನ್‌ವಿಡಿಯಾದ ಮುಖ್ಯಸ್ಥರಾಗಿದ್ದ ಜೆನ್ಸನ್ ಹುವಾಂಗ್ ಅವರ ಸುತ್ತ ವಿವಾದ ತೀವ್ರಗೊಂಡಿದೆ. ಚೀನಾದ ಬೇಹುಗಾರಿಕೆ ಆರೋಪ ಎದುರಿಸುತ್ತಿರುವ ಮಹಿಳೆಯೊಂದಿಗೆ ಹುವಾಂಗ್ ಸಂಬಂಧ ಹೊಂದಿದ್ದರು ಎಂಬ ವರದಿಗಳ ಬೆನ್ನಲ್ಲೇ ಅವರು ಕಂಪನಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆ ನೀಡುವ ಕೆಲವೇ ದಿನಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ, ತಮ್ಮ ಹುದ್ದೆ ಉಳಿಸಿಕೊಳ್ಳಲು ಹೋರಾಡುವಂತೆ ಸಲಹೆ ನೀಡಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ನವೆಂಬರ್ 10ರಂದು ಟ್ರಂಪ್ ಅವರು ಹುವಾಂಗ್‌ಗೆ ಕರೆ ಮಾಡಿದ್ದರು. ಈ ವೇಳೆ ಎನ್‌ವಿಡಿಯಾ ಮುಖ್ಯಸ್ಥ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಪ್ರಯತ್ನಗಳನ್ನು ವಿರೋಧಿಸುವಂತೆ ಪ್ರೋತ್ಸಾಹಿಸಿದ್ದರು ಎನ್ನಲಾಗಿದೆ. ಈ ದೂರವಾಣಿ ಸಂಭಾಷಣೆಯ ಬಗ್ಗೆ ಮಾಹಿತಿ ಹೊಂದಿದ್ದ ಇಬ್ಬರನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ ಎಂದು ರಾಯಿಟರ್ಸ್ ತಿಳಿಸಿದೆ. ಆದರೆ ಈ ಮಾತುಕತೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

Loading...

ವಿವಾದದ ನಡುವೆಯೂ ಹುವಾಂಗ್‌ಗೆ ಟ್ರಂಪ್ ಬೆಂಬಲ
ಜೆನ್ಸನ್ ಹುವಾಂಗ್ ಅವರು ಎನ್‌ವಿಡಿಯಾ ಕಂಪನಿಯ ಸಹ-ಸ್ಥಾಪಕರು. ಕಳೆದ 33 ವರ್ಷಗಳಿಂದ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರಕ್ಕೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳನ್ನು ತಯಾರಿಸುವ ಮೂಲಕ ಎನ್‌ವಿಡಿಯಾ ಜಾಗತಿಕ ಮಟ್ಟದಲ್ಲಿ ಪ್ರಮುಖ ಕಂಪನಿಯಾಗಿ ಬೆಳೆದಿದೆ.

ಹುವಾಂಗ್ ಮತ್ತು ಟ್ರಂಪ್ ನಡುವೆ ಉತ್ತಮ ಸಂಬಂಧವಿತ್ತು. ಹುವಾಂಗ್ ವಿರುದ್ಧದ ಆರೋಪಗಳು ಬಹಿರಂಗವಾದ ನಂತರವೂ ಟ್ರಂಪ್ ಅವರಿಗೆ ಬೆಂಬಲ ನೀಡಿದ್ದರು. ಹುವಾಂಗ್‌ಗೆ ಸಂಬಂಧಿಸಿದ ಮಹಿಳೆ ಚೀನಾದ ಗೂಢಚಾರಿಣಿ ಎಂಬುದು ಅವರಿಗೆ ತಿಳಿದಿರಲಿಲ್ಲ ಎಂದು ತಾವು ನಂಬಿರುವುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: ಚೀನಾದ ಗೂಢಚಾರಿಣಿ ಸೇರಿ ಇಬ್ಬರ ಜತೆ ವಿವಾಹೇತರ ಸಂಬಂಧದ ಆರೋಪ, ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್‌ ಕುರ್ಚಿಗೆ ಕಂಟಕ

ಚೀನಾದ ಮಹಿಳೆಯೊಂದಿಗೆ ಸಂಬಂಧದ ಆರೋಪ
ಆಲಿಸ್ ಹುವಾಂಗ್ ಎಂಬ ಚೀನಾದ ಉದ್ಯಮಿಯೊಂದಿಗೆ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ವರದಿಗಳು ಹೊರಬಂದಿದ್ದವು. ಆಲಿಸ್ ಹುವಾಂಗ್ ಸಿಂಗಾಪುರ ಮೂಲದ ಮೆಗಾಸ್ಪೀಡ್ ಎಂಬ ಕಂಪನಿಯ ಮಾಜಿ ಕಾರ್ಯನಿರ್ವಾಹಕರಾಗಿದ್ದರು. ಅಮೆರಿಕದ ಗುಪ್ತಚರ ಸಂಸ್ಥೆಗಳು ಆಲಿಸ್ ಹುವಾಂಗ್ ಚೀನಾದ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಶಂಕಿಸಿದ್ದವು. ಆದರೆ ಅವರು ನಿಜವಾಗಿಯೂ ಚೀನಾಕ್ಕಾಗಿ ಗೂಢಚಾರಿಕೆ ನಡೆಸಿದ್ದಾರೆ ಎಂಬುದಕ್ಕೆ ಇನ್ನೂ ನಿರ್ಣಾಯಕ ಸಾರ್ವಜನಿಕ ಸಾಕ್ಷ್ಯ ಹೊರಬಂದಿಲ್ಲ. ಈ ಆರೋಪಗಳನ್ನು ಚೀನಾ ಕೂಡ ನಿರಾಕರಿಸಿದೆ.

ಈ ಸಂಬಂಧದ ವರದಿಗಳು ಎನ್‌ವಿಡಿಯಾದ ರಾಷ್ಟ್ರೀಯ ಭದ್ರತೆ ಮತ್ತು ಚೀನಾಕ್ಕೆ ಚಿಪ್ ಮಾರಾಟದ ವಿಚಾರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕೊನೆಗೂ ಸಿಇಒ ಸ್ಥಾನಕ್ಕೆ ರಾಜೀನಾಮೆ
ವಿವಾದ ತೀವ್ರಗೊಂಡ ಬೆನ್ನಲ್ಲೇ ನವೆಂಬರ್ 12ರಂದು ಎನ್‌ವಿಡಿಯಾ ಆಡಳಿತ ಮಂಡಳಿ ಜೆನ್ಸನ್ ಹುವಾಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಿಸಲಾಗಿದೆ. ಅವರು ಸದ್ಯಕ್ಕೆ ಸಿಎಫ್‌ಒ ಜವಾಬ್ದಾರಿಯನ್ನೂ ಮುಂದುವರಿಸಲಿದ್ದಾರೆ.

ಹುವಾಂಗ್ ಕಂಪನಿಯ ಆಡಳಿತ ಮಂಡಳಿಯಿಂದಲೂ ಹೊರಬಂದಿದ್ದಾರೆ. ಹೊಸ ಶಾಶ್ವತ ಸಿಇಒ ಆಯ್ಕೆಗಾಗಿ ಕಂಪನಿ ಹುಡುಕಾಟ ಆರಂಭಿಸಿದೆ. ಕಂಪನಿಯ ಮೊದಲ ಮಂಡಳಿ ಅಧ್ಯಕ್ಷರಾಗಿ ಹಾರ್ವೆ ಜೋನ್ಸ್ ಅವರನ್ನು ನೇಮಿಸಲಾಗಿದೆ.

ಟಿಮ್ ಕುಕ್ ಹೆಸರು ಸೂಚಿಸಿದ ಟ್ರಂಪ್
ಹುವಾಂಗ್ ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನಕ್ಕೆ ಯಾರು ಬರಬೇಕು ಎಂಬ ಬಗ್ಗೆಯೂ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಆಪಲ್‌ನ ಮಾಜಿ ಸಿಇಒ ಟಿಮ್ ಕುಕ್ ಅವರು ಎನ್‌ವಿಡಿಯಾ ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ದಂತಕಥೆಯ ಸ್ಥಾನಕ್ಕೆ ಮತ್ತೊಬ್ಬ ದಂತಕಥೆ ಬರಬೇಕು ಎಂಬ ಅರ್ಥದಲ್ಲಿ ಅವರು ಬರೆದಿದ್ದಾರೆ.

ಎನ್‌ವಿಡಿಯಾ ಷೇರುಗಳ ಮೇಲೂ ಪರಿಣಾಮ
ಜೆನ್ಸನ್ ಹುವಾಂಗ್ ಅವರ ರಾಜೀನಾಮೆ ಕಂಪನಿಯ ಹೂಡಿಕೆದಾರರಲ್ಲೂ ಆತಂಕ ಮೂಡಿಸಿದೆ. ರಾಜೀನಾಮೆ ಪ್ರಕಟವಾದ ದಿನ ಎನ್‌ವಿಡಿಯಾ ಷೇರುಗಳು ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡವು. ನಂತರದ ವಹಿವಾಟಿನಲ್ಲಿ ಸ್ವಲ್ಪ ಚೇತರಿಕೆ ಕಂಡರೂ ದಿನದ ಅಂತ್ಯಕ್ಕೆ ಶೇ.4.3ರಷ್ಟು ಕುಸಿತ ದಾಖಲಿಸಿವೆ ಎಂದು ವರದಿಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us