ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ರಾಜೀನಾಮೆ: ಮಧ್ಯಂತರ ಸಿಇಒ ಆಗಿ ಕೊಲೆಟ್ ಕ್ರೆಸ್ ನೇಮಕ
ಎನ್ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ತಮ್ಮ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದು, 33 ವರ್ಷಗಳ ಸುದೀರ್ಘ ಸೇವೆಯನ್ನು ಅಂತ್ಯಗೊಳಿಸಿದ್ದಾರೆ. ಕಂಪನಿಯ ಸಿಎಫ್ಒ ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಿಸಲಾಗಿದೆ. ಎನ್ವಿಡಿಯಾದ ನಾಯಕತ್ವದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದ್ದು, ಹಾರ್ವೆ ಸಿ. ಜೋನ್ಸ್ ಅವರನ್ನು ನಿರ್ದೇಶಕರ ಮಂಡಳಿಯ ಮೊದಲ ಅಧ್ಯಕ್ಷರಾಹಿ ಆಯ್ಕೆಯಾಗಿದ್ದಾರೆ.

ವಾಷಿಂಗ್ಟನ್, ನವೆಂಬರ್ 12: ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿ ಎನ್ವಿಡಿಯಾದ (Nvidia) ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ನಿರ್ದೇಶಕರ ಮಂಡಳಿ ಸದಸ್ಯ ಸ್ಥಾನಗಳಿಗೆ ಜೆನ್ಸನ್ ಹುವಾಂಗ್ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ಚೀನಾ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಶಂಕಿಸಿದ್ದ ಮಹಿಳೆಯೊಂದಿಗಿನ ಅವರ ಸಂಬಂಧದ ಕುರಿತ ವರದಿ ನಡುವೆಯೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಈ ನಿರ್ಗಮನದೊಂದಿಗೆ ಹುವಾಂಗ್ ಅವರು ಸಹ-ಸ್ಥಾಪಿಸಿ ಮುನ್ನಡೆಸಿದ್ದ ಕಂಪನಿಯಲ್ಲಿ 33 ವರ್ಷಗಳ ಸುದೀರ್ಘ ಸೇವೆ ಅಂತ್ಯಗೊಂಡಿದೆ. ಗ್ರಾಫಿಕ್ಸ್ ಚಿಪ್ ತಯಾರಿಕಾ ಕಂಪನಿಯಾಗಿದ್ದ ಎನ್ವಿಡಿಯಾವನ್ನು ಜಗತ್ತಿನ ಅತ್ಯಂತ ಪ್ರಭಾವಶಾಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಎನ್ವಿಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹಾಗೂ ಮುಖ್ಯ ಹಣಕಾಸು ಅಧಿಕಾರಿ (CFO) ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಕ ಮಾಡಲಾಗಿದೆ. ಶಾಶ್ವತ ಉತ್ತರಾಧಿಕಾರಿಯನ್ನು ನೇಮಿಸುವವರೆಗೆ ಅವರು ಸಿಇಒ ಜವಾಬ್ದಾರಿಯ ಜೊತೆಗೆ ಸಿಎಫ್ಒ ಹುದ್ದೆಯನ್ನೂ ಮುಂದುವರಿಸಲಿದ್ದಾರೆ. ಶಾಶ್ವತ ಸಿಇಒ ನೇಮಕಕ್ಕಾಗಿ ನಿರ್ದೇಶಕರ ಮಂಡಳಿ ಹುಡುಕಾಟ ಆರಂಭಿಸಿದ್ದು, ಕಂಪನಿಯ ಆಂತರಿಕ ಹಾಗೂ ಬಾಹ್ಯ ಅಭ್ಯರ್ಥಿಗಳನ್ನು ಪರಿಗಣಿಸಲಿದೆ.
ಇದನ್ನೂ ಓದಿ: ಜೆನ್ಸನ್ ಹುವಾಂಗ್ ಸುತ್ತ ವಿವಾದ: ಎನ್ವಿಡಿಯಾದ ಎಐ ರಹಸ್ಯ ಮಾಹಿತಿ ಚೀನಾಕ್ಕೆ ಸೋರಿಕೆಯಾಯಿತೇ?
ಯಾರು ಈ ಕೊಲೆಟ್ ಕ್ರೆಸ್?
ಕೊಲೆಟ್ ಕ್ರೆಸ್ ಅವರು 2013ರ ಸೆಪ್ಟೆಂಬರ್ನಲ್ಲಿ ಎನ್ವಿಡಿಯಾ ಕಂಪನಿಗೆ ಸೇರ್ಪಡೆಯಾಗಿದ್ದರು. ಕಳೆದ 13 ವರ್ಷಗಳಲ್ಲಿ ಕಂಪನಿಯ ಬೆಳವಣಿಗೆ ಮತ್ತು ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎನ್ವಿಡಿಯಾಗೆ ಸೇರುವ ಮೊದಲು ಅವರು ಸುಮಾರು 25 ವರ್ಷಗಳ ಕಾಲ ಸಿಸ್ಕೋ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಹಿರಿಯ ಹಣಕಾಸು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ದೊಡ್ಡ ತಂತ್ರಜ್ಞಾನ ಕಂಪನಿಗಳ ಹಣಕಾಸು ನಿರ್ವಹಣೆ, ಕಾರ್ಪೊರೇಟ್ ಕಾರ್ಯತಂತ್ರ, ಕಾರ್ಯಾಚರಣೆ ಮತ್ತು ಹಣಕಾಸು ಯೋಜನೆಗಳಲ್ಲಿ ಅವರಿಗೆ ಅಪಾರ ಅನುಭವವಿದೆ.
ಜೆನ್ಸನ್ ಹುವಾಂಗ್ ಅವರ ನಾಯಕತ್ವದಲ್ಲಿ ರೂಪುಗೊಂಡ ಬೆಳವಣಿಗೆಯ ವೇಗವನ್ನು ಮುಂದುವರಿಸುವುದೇ ತಮ್ಮ ಆದ್ಯತೆಯಾಗಿದ್ದು, ಕಂಪನಿಯ ಪ್ರಸ್ತುತ ಕಾರ್ಯತಂತ್ರದಲ್ಲಿ ಅನಗತ್ಯ ಬದಲಾವಣೆ ಮಾಡುವುದಿಲ್ಲ ಎಂದು ಕೊಲೆಟ್ ಕ್ರೆಸ್ ತಿಳಿಸಿದ್ದಾರೆ. ನಮ್ಮ ನಾಯಕತ್ವ ತಂಡದೊಂದಿಗೆ ಸೇರಿ, ಕಳೆದ 33 ವರ್ಷಗಳಲ್ಲಿ ಜೆನ್ಸನ್ ನಿರ್ಮಿಸಿರುವ ಅಸಾಧಾರಣ ಅಡಿಪಾಯದ ಮೇಲೆ ಕಂಪನಿಯನ್ನು ಮತ್ತಷ್ಟು ಮುನ್ನಡೆಸಲು ನಾನು ಬದ್ಧಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ವೇಗವರ್ಧಿತ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿನ ಕಾರ್ಯವನ್ನು ಮುಂದುವರಿಸುವುದರ ಜೊತೆಗೆ ಗ್ರಾಹಕರು, ಪಾಲುದಾರರು, ಡೆವಲಪರ್ಗಳು ಮತ್ತು ಷೇರುದಾರರ ಹಿತಾಸಕ್ತಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ನಿರ್ದೇಶಕರ ಮಂಡಳಿಗೆ ನೂತನ ಅಧ್ಯಕ್ಷರ ನೇಮಕ
ಎನ್ವಿಡಿಯಾದ ನಾಯಕತ್ವದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದ್ದು, ಹಾರ್ವೆ ಸಿ. ಜೋನ್ಸ್ ಅವರನ್ನು ನಿರ್ದೇಶಕರ ಮಂಡಳಿಯ ಮೊದಲ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಉದ್ಯಮಶೀಲತೆ, ತಂತ್ರಜ್ಞಾನ ನಿರ್ವಹಣೆ ಮತ್ತು ವೆಂಚರ್ ಹೂಡಿಕೆ ಕ್ಷೇತ್ರಗಳಲ್ಲಿ ಜೋನ್ಸ್ ಅವರಿಗೆ 30 ವರ್ಷಗಳಿಗೂ ಹೆಚ್ಚಿನ ಅನುಭವವಿದ್ದು ಈ ಹಿಂದೆ ಅವರು ಸೈನಾಪ್ಸಿಸ್ (Synopsys) ಕಂಪನಿಯ ಸಿಇಒ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
