ಇದು ಹಾಲಿವುಡ್ ಸ್ಪೈ ಥ್ರಿಲ್ಲರ್ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ
ಎನ್‌ವಿಡಿಯಾ ಸಂಸ್ಥೆಯ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಢಚಾರಿ ಶಂಕಿತಳೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾರೆನ್ನುವ ಸುದ್ದಿ ಇದೆ. ಜೆನ್ಸೆನ್ ಕೂಡ ತಾನು ಪರಸ್ತ್ರೀಯೊಂದಿಗೆ ಸಂಬಂಧ ಹೊಂದಿ, ತನ್ನ ಪತ್ನಿ ಮತ್ತು ಮಕ್ಕಳಿಗೆ ದ್ರೋಹ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಜೆನ್ಸೆನ್ ಜೊತೆ ಅಫೇರ್ ಇದ್ದ ಮಹಿಳೆಯನ್ನು ಅಲೈಸ್ ಹುವಾಂಗ್ ಎಂದು ಗುರುತಿಸಲಾಗಿದೆ. ಈಕೆ ಚೀನಾದ ಏಜೆಂಟ್ ಎಂದು ಅಮೆರಿಕದ ಗುಪ್ತಚರರು ಶಂಕಿಸಿದ್ದಾರೆ.

ವಾಷಿಂಗ್ಟನ್, ನವೆಂಬರ್ 9: ವಿಶ್ವದ ಅತ್ಯಂತ ಶಕ್ತಿಶಾಲಿ ಎಐ ಚಿಪ್ ತಯಾರಕ ಸಂಸ್ಥೆಯಾದ ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರು ದೊಡ್ಡ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಜೆನ್ಸೆನ್ ಹುವಾಂಗ್ ಅವರು ವಿದೇಶೀ ಗುಪ್ತಚರ ಕಾರ್ಯಾಚರಣೆಗೆ ಗುರಿಯಾಗಿದ್ದಾರೆ ಎನ್ನುವಂತಹ ಸುದ್ದಿಗಳು ಹರಿದಾಡುತ್ತಿವೆ. ಚೀನಾ ಪರ ಗೂಢಚಾರಿಕೆ ಮಾಡುತ್ತಿದ್ದಾಳೆಂದು ಶಂಕಿಸಲಾದ ಮಹಿಳೆಯೊಬ್ಬಳ ಜೊತೆ ಜೆನ್ಸೆನ್ ಹುವಾಂಗ್ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ಎನ್‌ವಿಡಿಯಾ ಸಿಇಒ ಜೆನ್ಸೆನ್ ಕೂಡ ತಾನು ತನ್ನ ಪತ್ನಿ ಮತ್ತು ಮಕ್ಕಳಿಗೆ ದ್ರೋಹ ಎಸಗಿದ್ದಾಗಿ ಹೇಳಿಕೊಂಡಿರುವುದು ವರದಿಯಾಗಿದೆ. ಪರಸ್ತ್ರೀಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರಾದರೂ ಆ ಮಹಿಳೆ ಯಾರೆಂದು ಹೆಸರಿಸಿಲ್ಲ. ಇವೆಲ್ಲವೂ ಕೂಡ ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಗೂಢಚಾರಿಕೆ ನೆಟ್ವರ್ಕ್ ಅದೆಷ್ಟು ಗಾಢವಾಗಿರಬಹುದು ಎಂಬುದನ್ನು ತೋರಿಸುತ್ತದೆ.
ಎನ್‌ವಿಡಿಯಾ ಅತ್ಯಂತ ಶಕ್ತಿಶಾಲಿ ಎಐ ಚಿಪ್ಗಳನ್ನು ತಯಾರಿಸಲು ಪಳಗಿದೆ. ಚೀನಾಗೂ ಕೂಡ ಆ ಮಟ್ಟಿಗಿನ ಚಿಪ್ ತಯಾರಿಸಲು ಆಗಿಲ್ಲ. ಈ ಕಾರಣಕ್ಕೆ ಎನ್ವಿಡಿಯಾದ ಅತ್ಯಂತ ಸುಧಾರಿತ ಚಿಪ್‌ಗಳ ರಫ್ತನ್ನು ಅಮೆರಿಕ ನಿರ್ಬಂಧಿಸಿದೆ. ಜೆನ್ಸೆನ್ ಹುವಾಂಗ್ ಅವರು ಈ ಈ ನಿಷೇಧ ಕ್ರಮ ಹಿಂಪಡೆಯಬೇಕೆಂದು ಹಲವು ಬಾರಿ ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದುಂಟು. ಹೀಗಾಗಿ, ಜೆನ್ಸೆನ್ ಅವರು ಚೀನಾ ಗೂಢಚಾರಿಣಿಯ ಜಾಲಕ್ಕೆ ಬಿದ್ದಿರಬಹುದು ಎನ್ನುವಂತಹ ಶಂಕೆಯನ್ನು ಕೆಲವರು ವ್ಯಕ್ತಪಡಿಸುತ್ತಿರುವುದುಂಟು.
ಇದನ್ನೂ ಓದಿ: ನಿಮ್ಮ ಆಲೋಚನಾ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ: ಯುವಜನರಿಗೆ ಮಾಜಿ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಸಲಹೆ
ಎನ್‌ವಿಡಿಯಾ ಕಂಪನಿ ಮಂಡಳಿಯಿಂದ ತನಿಖೆ
ಈ ಬೆಳವಣಿಗೆಯ ಬೆನ್ನಲ್ಲೇ ಎನ್‌ವಿಡಿಯಾ ಕಂಪನಿಯ ನಿರ್ದೇಶಕರ ಮಂಡಳಿಯು (Board of Directors) ಈ ವಿಷಯದ ಕುರಿತು ಆಂತರಿಕ ತನಿಖೆಗೆ ಆದೇಶಿಸಿದೆ. ಕಂಪನಿಯ ಭದ್ರತೆ ಮತ್ತು ಗೌಪ್ಯ ದತ್ತಾಂಶಗಳಿಗೆ ಇದರಿಂದ ಏನಾದರೂ ಧಕ್ಕೆಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಸಂಚಲನ: ಕೃತಕ ಬುದ್ಧಿಮತ್ತೆ (AI) ಚಿಪ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎನ್‌ವಿಡಿಯಾ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕೇಳಬಂದಿರುವ ಈ ಆರೋಪವು ಜಾಗತಿಕ ಟೆಕ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜೆನ್ಸೆನ್ ಜೊತೆ ನಿಕಟವಾದ ಶಂಕಿತ ಗೂಢಚಾರಿಣಿ ಅಲೈಸ್
ಜೆನ್ಸೆನ್ ಹುವಾಂಗ್ ಜೊತೆ ನಿಕಟವಾಗಿದ್ದಳೆನ್ನಲಾದ ಮತ್ತು ಚೀನೀ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯನ್ನು ಅಲೈಸ್ ಹುವಾಂಗ್ ಎಂದು ಗುರುತಿಸಲಾಗಿದೆ. ಈಕೆ ವಿವಿಧ ಕ್ಷೇತ್ರಗಳಲ್ಲಿ ದುಡಿದಿರುವ ಅನುಭವ ಹೊಂದಿದ್ದಾಳೆ. ಚೀನಾದಲ್ಲಿ ಪತ್ರಕರ್ತೆಯಾಗಿ ಆಕೆಯ ಗುರುತು ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾಳೆ. ಹೂಡಿಕೆ ಸಂಸ್ಥೆಗಳಲ್ಲೂ ಕೆಲಸ ಮಾಡಿದ್ದಾಳೆ. ಶಾಂಘೈ ಹೆಕ್ಸಿ ಇನ್ವೆಸ್ಟ್ಮೆಂಟ ಮ್ಯಾನೇಜ್ಮೆಂಟ್, ಎಚ್ಎಸ್ಬಿಸಿ ಮೊದಲಾದ ಸಂಸ್ಥೆಗಳಲ್ಲಿ ಈಕೆ ಕೆಲಸ ಮಾಡಿದ್ದಿದೆ. ಪ್ರಸಕ್ತ ಈಕೆ ಸಿಂಗಾಪುರ್ ಮೂಲದ ಮೆಗಾಸ್ಪೀಡ್ ಕಂಪನಿ ಜೊತೆ ಇದ್ದಾಳೆ.
ಈಕೆಯನ್ನು ಚೀನಾ ತನ್ನ ಗುಪ್ತಚರ ನೆಟ್ವರ್ಕ್ಗೆ ನಿಯುಕ್ತಗೊಳಿಸಿದೆ ಎನ್ನುವುದು ಅಮೆರಿಕದ ಗುಪ್ತಚರ ಸಂಸ್ಥೆಗಳ ಶಂಕೆ. ಈಕೆ ಹಿಂದೆ ಕೆಲಸ ಮಾಡುತ್ತಿದ್ದ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಕಂಪನಿಯು 7Road ಎನ್ನುವ ಚೀನೀ ಕಂಪನಿಗೆ ಸೇರಿದ್ದಾಗಿದೆ. ಈಗ ಕೆಲಸ ಮಾಡುತ್ತಿರುವ ಮೆಗಾಸ್ಪೀಡ್ ಕೂಡ ಇದೇ 7Road ಸಂಸ್ಥೆಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ: ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ
ಮೆಗಾಸ್ಪೀಡ್ ಮತ್ತು ಎಐ ಚಿಪ್‌ಗಳ ಮಾರಾಟ
ಆದರೆ, ಇದರ ಕಥೆ ಇಷ್ಟೇ ಅಲ್ಲ. ಮೆಗಾಸ್ಪೀಡ್ ಅನ್ನು 2023ರಲ್ಲಿ ಸ್ಥಾಪಿಸಲಾಗಿತ್ತು. ಅದನ್ನು ಅಲೈಸ್ ಹುವಾಂಗ್ ಅವರೇ ಮುನ್ನಡೆಸುತ್ತಿದ್ದರು. ನಂತರ ಸ್ವಿಫ್ಟ್ಡಾಟಾ ಎನ್ನುವ ಕಂಪನಿಗೆ ಇದರ ಮಾರಾಟವಾಯಿತು. ಆ ಬಳಿಕವೂ ಕಂಪನಿ ಜೊತೆ ಅಲೈಸ್ ಸ್ಥಾನ ಮುಂದುವರಿದಿತ್ತು.
ಇಲ್ಲಿ ಸಂಶಯ ಬರುವಂತಹ ಸಂಗತಿ ಎಂದರೆ, ಎನ್ವಿಡಿಯಾದ ಪ್ರಮುಖ ಗ್ರಾಹಕ ಸಂಸ್ಥೆಗಳಲ್ಲಿ ಮೆಗಾಸ್ಪೀಡ್ ಒಂದು. ಕಳೆದ ಎರಡು ವರ್ಷದಲ್ಲಿ 4.8 ಬಿಲಿಯನ್ ಡಾಲರ್ ಮೌಲ್ಯದ ಎನ್‌ವಿಡಿಯಾ ಚಿಪ್ಗಳನ್ನು ಮೆಗಾಸ್ಪೀಡ್ ಖರೀದಿಸಿದೆ. ಅಮೆರಿಕದ ಶಂಕೆ ಏನೆಂದರೆ, ಈ ಚಿಪ್ಗಳು ಮೆಗಾಸ್ಪೀಡ್ ಮೂಲಕ ಚೀನಾಗೆ ಕಳ್ಳಸಾಗಣೆ ಆಗುತ್ತಿರಬಹುದು.
ಸದ್ಯ, ಎನ್‌ವಿಡಿಯಾ ಈ ಪ್ರಕರಣದಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ. ಜೆನ್ಸೆನ್ ಹುವಾಂಗ್ ತಾನು ಪರಿಸ್ತ್ರೀ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎನ್ವಿಡಿಯಾದ ಷೇರುಗಳು ಕುಸಿಯುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




