ಬಜೆಟ್ ಪೂರ್ವಭಾವಿ ಸಮಾಲೋಚನೆಗಳನ್ನು ಮುಕ್ತಾಯಗೊಳಿಸಿದ ಹಣಕಾಸು ಸಚಿವೆ; ಜೆನ್ ಝೀ ಜೊತೆಗೂ ಪ್ರತ್ಯೇಕ ಸಭೆ
2027-28ರ ಬಜೆಟ್ ಅನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾಲೋಚನಾ ಸಭೆಗಳನ್ನು ನಡೆಸಿದ್ದಾರೆ. ನವೆಂಬರ್ 16ರಿಂದ 26ರವರೆಗೆ ಈ ಸಭೆಗಳು ನಡೆದಿವೆ. 13 ಕ್ಷೇತ್ರಗಳ 200ಕ್ಕೂ ಹೆಚ್ಚು ಸಂಘಟನೆಗಳು, ವ್ಯಕ್ತಿಗಳು, ಇತರ ಭಾಗಿದಾರರಿಂದ ಸಲಹೆಗಳನ್ನು ಸ್ವೀಕರಿಸಿದ್ದಾರೆ. 2027ರ ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ.

ನವದೆಹಲಿ, ನವೆಂಬರ್ 27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಬಜೆಟ್ಗಾಗಿ ಪೂರ್ವಭಾವಿ ಸಮಾಲೋಚನೆಗಳನ್ನು ಪೂರ್ಣಗೊಳಿಸಿದ್ದಾರೆ. 13 ಸೆಕ್ಟರ್ಗಳನ್ನು ಪ್ರತಿನಿಧಿಸುವ 200ಕ್ಕೂ ಹೆಚ್ಚು ಭಾಗಿದಾರರೊಂದಿಗೆ ಅವರು ಸಭೆಗಳನ್ನು ನಡೆಸಿ ಚರ್ಚಿಸಿದ್ದಾರೆ, ಸಲಹೆ ಸ್ವೀಕರಿಸಿದ್ದಾರೆ. ಇದರಲ್ಲಿ ಯುವ ಸಮುದಾಯದೊಂದಿಗೂ ಸಮಾಲೋಚನೆ ನಡೆಸಿರುವುದು ಒಳಗೊಂಡಿದೆ.
ನವೆಂಬರ್ 16ರಿಂದ 26ರವರೆಗೆ ಈ ಎಲ್ಲಾ ಸಮಾಲೋಚನಾ ಸಭೆಗಳು ನಡೆದಿವೆ. ವಿವಿಧ ಕ್ಷೇತ್ರಗಳ ಉದ್ಯಮ ಸಂಘಟನೆಗಳು, ಪರಿಣಿತರು, ಕಾರ್ಪೊರೇಟ್ ಮುಖಂಡರು, ಶಿಕ್ಷಣ ತಜ್ಞರು, ಯುವಸಮುದಾಯದ ಪ್ರತಿನಿಧಿಗಳು ಮೊದಲಾದವರು ಈ ಸಭೆಗಳಲ್ಲಿ ಪಾಲ್ಗೊಂಡು ತಮ್ಮ ಸಲಹೆ, ದುಗುಡ ದುಮ್ಮಾನಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಂತಿಮ ಹಂತದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿಶ್ವಾಸ
ಪ್ರಮುಖ ಶಿಫಾರಸುಗಳಲ್ಲಿ ಎಐ, ಮ್ಯಾನುಫ್ಯಾಕ್ಚರಿಂಗ್, ಉದ್ಯೋಗ ಇತ್ಯಾದಿ…
ಸಮಾಲೋಚನೆಗಳಲ್ಲಿ ಪಾಲ್ಗೊಂಡ 200ಕ್ಕೂ ಹೆಚ್ಚು ಭಾಗಿದಾರರು ಹಲವಾರು ಶಿಫಾರಸುಗಳನ್ನು ಹಣಕಾಸು ಸಚಿವರ ಮುಂದಿಟ್ಟಿದ್ದಾರೆ. ಕೃಷಿ ಉತ್ಪನ್ನಶೀಲತೆ ಬಲಪಡಿಸಲು ಜೈವಿಕ ರಸಗೊಬ್ಬರವನ್ನು ದೇಶೀಯವಾಗಿ ತಯಾರಿಸುವುದನ್ನು ಉತ್ತೇಜಿಸಬೇಕು, ಹೊಸ ಬಯೋತಂತ್ರಜ್ಞಾನ ಆಧಾರಿತ ಕೃಷಿ ಪರಿಕರಗಳ ತಯಾರಿಕೆಗೆ ಉತ್ತೇಜಿಸಬೇಕು ಎನ್ನುವ ಶಿಫಾರಸು ಕೃಷಿ ಕ್ಷೇತ್ರದ ಭಾಗಿದಾರರಿಂದ ಬಂದಿದೆ.
ಇನ್ನು, ಎಐ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು, ಸೈಬರ್ ಸೆಕ್ಯೂರಿಟಿ ಸನ್ನದತೆ ಹೆಚ್ಚಿಸಲು, ಕೌಶಲ್ಯಾಭಿವೃ್ಧಿ ಮತ್ತು ಉದ್ಯೋಗಸೃಷ್ಟಿ ಹೆಚ್ಚಿಸಲು ಇತ್ಯಾದಿಗೆ ಸಂಬಂಧಿಸಿದ ಭಾಗಿದಾರರು ತಮ್ಮ ಸಲಹೆಗಳನ್ನು ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದರು.
ಜೆನ್ ಝೀ ಜೊತೆ ನಿರ್ಮಲಾ ಸೀತಾರಾಮನ್ ಸಭೆ
ಹಣಕಾಸು ಸಚಿವರ ಪೂರ್ವಭಾವಿ ಬಜೆಟ್ ಸಮಾಲೋಚನೆಗಳಲ್ಲಿ ಜೆನ್ ಝೀ ಪ್ರತಿನಿಧಿಗಳೊಂದಿಗಿನ ಸಭೆಯೂ ಸೇರಿದೆ. ಯುವ ಸಮುದಾಯದ ಪ್ರತಿನಿಧಿಗಳೊಂದಿಗೆ ಬಜೆಟ್ ಸಂಬಂಧ ಪ್ರತ್ಯೇಕವಾಗಿ ಸಭೆ ನಡೆಸಿದ್ದು ಇದೇ ಮೊದಲು. ಉದ್ಯೋಗ, ಕೌಶಲ್ಯಾಭಿವೃದ್ಧಿ, ಎಐ, ಉದ್ಯಮಶೀಲತೆ ಇತ್ಯಾದಿ ಹಲವು ವಿಚಾರಗಳ ಬಗ್ಗೆ ಯುವಜನರು ಸಲಹೆಗಳನ್ನು ನೀಡಿದರು.
ಇದನ್ನೂ ಓದಿ: ಜೆಟ್ ಏರ್ವೇಸ್ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ, ಪಿಎಫ್ ಹಣ ನೀಡಿ: ಎನ್ಸಿಎಲ್ಎಟಿ ಆದೇಶ; 7 ವರ್ಷಗಳ ಹೋರಾಟಕ್ಕೆ ಜಯ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಬಜೆಟ್ ಪೂರ್ವಭಾವಿ ಸಮಾಲೋಚನೆಗಳ ಬಳಿಕ ವಿವಿಧ ಇಲಾಖೆಗಳೊಂದಿಗೆ ಪರಾಮರ್ಶೆ ನಡೆಸಿ ಬಜೆಟ್ನ ರೂಪುರೇಖೆ ಸಿದ್ಧಪಡಿಸಲಿದ್ದಾರೆ. 2027ರ ಫೆಬ್ರುವರಿ 1ರಂದು ಮುಂಗಡಪತ್ರ ಮಂಡನೆಯಾಗುವ ಸಾಧ್ಯತೆ ಇದೆ. ಅದು 2027-28ರ ಹಣಕಾಸು ವರ್ಷಕ್ಕೆ ಮಂಡನೆಯಾಗುವ ಬಜೆಟ್ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




