ಪೋಸ್ಟ್ ಆಫೀಸ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್: 20 ವರ್ಷದಲ್ಲಿ ನಾಲ್ಕು ಪಟ್ಟು ರಿಟರ್ನ್ಸ್ ಕೊಡುವ ಪ್ಲಾನ್
ಅಂಚೆ ಕಚೇರಿಯಲ್ಲಿ ಹಲವು ಸಣ್ಣ ಉಳಿತಾಯ ಯೋಜನೆಗಳಿವೆ. ಅತಿಹೆಚ್ಚು ಬಡ್ಡಿ ನೀಡುವ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪತ್ರವೂ ಒಂದು. ಇದರಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಲಂಪ್ಸಮ್ ಹೂಡಿಕೆ, ಕನಿಷ್ಠ 1,000 ರೂ ಹೂಡಿಕೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. 5 ವರ್ಷಕ್ಕೆ ಮೆಚ್ಯೂರಿಟಿ. 20 ವರ್ಷದವರೆಗೆ ಮರುಹೂಡಿಕೆ ಮಾಡುತ್ತಾ ಹೋದರೆ 4 ಪಟ್ಟು ಹೆಚ್ಚು ರಿಟರ್ನ್ಸ್ ಕೊಡುತ್ತದೆ.

ಷೇರು ಮಾರುಕಟ್ಟೆಯ ಏರಿಳಿತಗಳ ಭಯವಿಲ್ಲದೆ, ಸರ್ಕಾರಿ ಭದ್ರತೆಯೊಂದಿಗೆ ತಮ್ಮ ಉಳಿತಾಯದ ಹಣಕ್ಕೆ ಸ್ಥಿರ ಮತ್ತು ಉತ್ತಮ ಆದಾಯ ಬಯಸುವವರಿಗೆ ಭಾರತೀಯ ಅಂಚೆ ಇಲಾಖೆಯ ‘ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ’ (NSC – National Savings Certificate) ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ ಈ ಯೋಜನೆಯಡಿ ವಾರ್ಷಿಕ ಶೇ. 7.7 ರಷ್ಟು ಆಕರ್ಷಕ ಬಡ್ಡಿದರವನ್ನು ನೀಡಲಾಗುತ್ತಿದ್ದು, ಇದು ಅನೇಕ ಬ್ಯಾಂಕ್ ಸ್ಥಿರ ಠೇವಣಿಗಳಿಗಿಂತ (FD) ಹೆಚ್ಚಾಗಿದೆ.
ಭಾರತದಲ್ಲಿ ನೆಲೆಸಿರುವ ಯಾವುದೇ ನಾಗರಿಕರು ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟವರ ಹೆಸರಿನಲ್ಲಿ ರಾಷ್ಟ್ರೀಯ ಉಳಿತಾಯ ಖಾತೆ ತೆರೆಯಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪರವಾಗಿ ಪೋಷಕರು ಹೂಡಿಕೆ ಮಾಡಬಹುದು. ಈ ಸ್ಕೀಮ್ನಲ್ಲಿ ಜಂಟಿ ಖಾತೆ ತೆರೆಯಲು ಅವಕಾಶ ಇದೆ. ಇಬ್ಬರು ಅಥವಾ ಮೂವರು ವಯಸ್ಕರು ಸೇರಿ ಜಾಯಿಂಟ್ ಅಕೌಂಟ್ ತೆರೆಯಬಹುದು.
ಎನ್ಎಸ್ಸಿ ಹೂಡಿಕೆ ವಿವರ
- ಕನಿಷ್ಠ ಹೂಡಿಕೆ: 1,000 ರೂ
- ಮೆಚ್ಯೂರಿಟಿ ಅವಧಿ: 5 ವರ್ಷ
- ಬಡ್ಡಿದರ: ವಾರ್ಷಿಕವಾಗಿ ಶೇ. 7.7 ಬಡ್ಡಿ
- ಹೂಡಿಕೆ ಕ್ರಮ: ಒಂದು ಬಾರಿಯ ಹೂಡಿಕೆ (ಲಂಪ್ಸಮ್)
ಇದನ್ನೂ ಓದಿ: ಜೆಟ್ ಏರ್ವೇಸ್ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ, ಪಿಎಫ್ ಹಣ ನೀಡಿ: ಎನ್ಸಿಎಲ್ಎಟಿ ಆದೇಶ; 7 ವರ್ಷಗಳ ಹೋರಾಟಕ್ಕೆ ಜಯ
ಒಂದು ಲಕ್ಷ ರೂ ಹೂಡಿಕೆಗೆ ಎಷ್ಟು ಲಾಭ ಸಿಗುತ್ತದೆ?
NSC ಯೋಜನೆಯ ಮೂಲ ಅವಧಿ 5 ವರ್ಷಗಳು. ಆದರೆ, 5 ವರ್ಷ ಪೂರ್ಣಗೊಂಡ ನಂತರ ಬಂದ ಪೂರ್ತಿ ಮೊತ್ತವನ್ನು (ಅಸಲು + ಬಡ್ಡಿ) ನೀವು ಹಿಂಪಡೆಯದೆ ಮತ್ತೆ 5 ವರ್ಷಗಳ ಅವಧಿಗೆ ಮರುಹೂಡಿಕೆ (Reinvest) ಮಾಡುತ್ತಾ ಹೋದರೆ, ಚಕ್ರಬಡ್ಡಿಯ (Compounding) ಶಕ್ತಿಯಿಂದ ನಿಮ್ಮ ಹಣ ಭಾರಿ ಪ್ರಮಾಣದಲ್ಲಿ ಬೆಳೆಯುತ್ತದೆ.
ಪ್ರಸ್ತುತ ಇರುವ 7.7% ವಾರ್ಷಿಕ ಬಡ್ಡಿದರ ಮುಂದುವರಿಯುತ್ತದೆ ಎಂದು ಭಾವಿಸಿ, ನೀವು ಒಮ್ಮೆ ₹1,00,000 (ಒಂದು ಲಕ್ಷ ರೂಪಾಯಿ) ಹೂಡಿಕೆ ಮಾಡಿದರೆ ವಿವಿಧ ಅವಧಿಗಳಲ್ಲಿ ಸಿಗುವ ಅಂದಾಜು ಮೊತ್ತದ ವಿವರ ಇಲ್ಲಿದೆ:
- 5 ವರ್ಷಗಳ ಹೂಡಿಕೆ: ₹1,44,903 ರಿಟರ್ನ್ಸ್
- 10 ವರ್ಷಗಳ ಹೂಡಿಕೆ: ₹2,09,970 ರಿಟರ್ನ್ಸ್
- 15 ವರ್ಷಗಳ ಹೂಡಿಕೆ: ₹3,04,253 ರಿಟರ್ನ್ಸ್
- 20 ವರ್ಷಗಳ ಹೂಡಿಕೆ: ₹4,40,874 ರಿಟರ್ನ್ಸ್
ಇಲ್ಲಿ ಒಂದು ಲಕ್ಷ ರೂ ಹೂಡಿಕೆಯು 20 ವರ್ಷದಲ್ಲಿ 4.40 ಲಕ್ಷ ರೂ ಆಗುತ್ತದೆ ಈ ಬಡ್ಡಿದರದಲ್ಲಿ. ಅಂದರೆ, 20 ವರ್ಷದಲ್ಲಿ ಹೂಡಿಕೆ ನಾಲ್ಕು ಪಟ್ಟು ಹೆಚ್ಚುತ್ತದೆ. ಇಲ್ಲಿ ಕನಿಷ್ಠ ಹೂಡಿಕೆ 1,000 ರೂ ಇರುತ್ತದೆ. ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ. ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವುದು ಸುರಕ್ಷಿತವೇ? ಈ ವಿಷ್ಯಗಳು ನಿಮ್ಗೆ ತಿಳಿದಿರಲಿ
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನ ಇತರ ಫೀಚರ್ಸ್
- ತೆರಿಗೆ ವಿನಾಯಿತಿ: ಹಳೆಯ ತೆರಿಗೆ ಪದ್ಧತಿಯಡಿ (Old Tax Regime) ವಾರ್ಷಿಕ ₹1.5 ಲಕ್ಷದವರೆಗಿನ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
- ಟಿಡಿಎಸ್ ಕಡಿತವಿಲ್ಲ: ಮೆಚ್ಯೂರಿಟಿ ಸಮಯದಲ್ಲಿ ಅಂಚೆ ಕಚೇರಿಯು ಯಾವುದೇ ಟಿಡಿಎಸ್ (TDS) ಕಡಿತಗೊಳಿಸುವುದಿಲ್ಲ. ಆದರೆ 5ನೇ ವರ್ಷದ ಬಡ್ಡಿಯನ್ನು ಹೂಡಿಕೆದಾರರು ತಮ್ಮ ಆದಾಯ ತೆರಿಗೆ ವಿವರದಲ್ಲಿ ತೋರಿಸಿ ತೆರಿಗೆ ಪಾವತಿಸಬೇಕಾಗುತ್ತದೆ.
- ಸಾಲ ಸೌಲಭ್ಯ: ತುರ್ತು ಸಂದರ್ಭಗಳಲ್ಲಿ ಈ ಪ್ರಮಾಣಪತ್ರವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು (Collateral) ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು.
ಅವಧಿಗೆ ಮುನ್ನ ಹಣ ಹಿಂಪಡೆಯಬಹುದಾ?
5 ವರ್ಷಗಳ ಲಾಕ್-ಇನ್ ಅವಧಿಗೂ ಮುನ್ನ ಹಣ ಹಿಂಪಡೆಯಲು ಸಾಧ್ಯವಿಲ್ಲ. ಖಾತೆದಾರರ ಮರಣ ಅಥವಾ ನ್ಯಾಯಾಲಯದ ಆದೇಶದಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಧಿಪೂರ್ವ ಮುಕ್ತಾಯಕ್ಕೆ ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




