ಜೆಟ್ ಏರ್ವೇಸ್ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ, ಪಿಎಫ್ ಹಣ ನೀಡಿ: ಎನ್‌ಸಿಎಲ್‌ಎಟಿ ಆದೇಶ; 7 ವರ್ಷಗಳ ಹೋರಾಟಕ್ಕೆ ಜಯ
ಜೆಟ್ ಏರ್‌ವೇಸ್‌ನ ಅರ್ಹ ಮಾಜಿ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ (PF) ಮೊತ್ತವನ್ನು ಎರಡು ವಾರದೊಳಗೆ ನೀಡಬೇಕು ಎಂದು ಎನ್‌ಸಿಎಲ್‌ಎಟಿ ನ್ಯಾಯಮಂಡಳಿಯು ಲಿಕ್ವಿಡೇಟರ್ಗೆ ತಿಳಿಸಿದೆ. ಈ ಬಾಕಿ ಹಣಕ್ಕೆ ಬಡ್ಡಿ ಸೇರಿಸಿ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸುಮಾರು 480 ಕೋಟಿ ರೂ ವ್ಯಯವಾಗಬಹುದು. ಜೆಟ್ ಏರ್‌ವೇಸ್‌ನ ಆಸ್ತಿಗಳನ್ನು ಮಾರಿ ಅದರಿಂದ ಬಂದ ಹಣದಿಂದ ಸಾಲದಾತರು ಮೊದಲಾದವರಿಗೆ ಹಂಚಲಾಗುತ್ತಿದೆ.

ನವದೆಹಲಿ, ನವೆಂಬರ್ 26: ಏಳು ವರ್ಷಗಳ ಹಿಂದೆ ಕಾರ್ಯಾಚರಣೆ ನಿಲ್ಲಿಸಿದ್ದ ಜೆಟ್ ಏರ್ವೇಸ್ ಸಂಸ್ಥೆಯ ಮಾಜಿ ಉದ್ಯೋಗಿಗಳಿಗೆ ರಿಲೀಫ್ ನೀಡುವ ಸುದ್ದಿ ಬಂದಿದೆ. ಅರ್ಹ ಮಾಜಿ ಉದ್ಯೋಗಿಗಳಿಗೆ ಬಾಕಿ ಉಳಿದಿರುವ ಗ್ರಾಚ್ಯುಟಿ ಮತ್ತು ಪ್ರಾವಿಡೆಂಟ್ ಫಂಡ್ (ಪಿಎಫ್) ಹಣವನ್ನು ಬಡ್ಡಿಸಹಿತವಾಗಿ ಎರಡು ವಾರದೊಳಗೆ ಪಾವತಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (NCLAT) ಲಿಕ್ವಿಡೇಟರ್ ಸತೀಶ್ ಕುಮಾರ್ ಗುಪ್ತಾ ಅವರಿಗೆ ಸೂಚಿಸಿದೆ. ಇದಕ್ಕೆ ಸುಮಾರು 480 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ.
ನ್ಯಾಯಮಂಡಳಿಯ ಆದೇಶದಂತೆ, ಗ್ರಾಚ್ಯುಟಿ ಮೊತ್ತವನ್ನು ನೇರವಾಗಿ ಅರ್ಹ ಉದ್ಯೋಗಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಮತ್ತು ಬಾಕಿ ಇರುವ ಪಿಎಫ್ ಕೊಡುಗೆಗಳನ್ನು ಪಿಎಫ್ ಕಚೇರಿಯ ಮೂಲಕ ಸಂಬಂಧಿತ ಉದ್ಯೋಗಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಜೆಟ್ ಏರ್ವೇಸ್ನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಉದ್ಯೋಗಿಗಳು ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ.
ಸಾಲದಾತರ ಮೇಲ್ಮನವಿ ವಜಾ ಮತ್ತು ಸುಪ್ರೀಂ ಕೋರ್ಟ್ ಮುದ್ರೆ
ಕಂಪನಿಯು ಈ ಸೌಲಭ್ಯಗಳಿಗಾಗಿ ಪ್ರತ್ಯೇಕ ನಿಧಿಯನ್ನು ಮೀಸಲಿಟ್ಟಿಲ್ಲದಿದ್ದರೂ, ಉದ್ಯೋಗಿಗಳ ಪಿಎಫ್ ಮತ್ತು ಗ್ರಾಚ್ಯುಟಿ ಬಾಕಿಯನ್ನು ಪೂರ್ಣವಾಗಿ ಪಾವತಿಸಲೇಬೇಕು ಎಂದು ಜೂನ್ 30ರಂದು ಎನ್‌ಸಿಎಲ್‌ಎಟಿ ತೀರ್ಪು ನೀಡಿತ್ತು.
ಉದ್ಯೋಗಿಗಳ ಬಾಕಿ ಮೊತ್ತವನ್ನು ಲಿಕ್ವಿಡೇಷನ್ ಆಸ್ತಿಯ (liquidation estate) ಭಾಗವಾಗಿ ಪರಿಗಣಿಸಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮತ್ತು ಇತರ ಹಣಕಾಸು ಸಾಲದಾತರು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮಂಡಳಿ ತಿರಸ್ಕರಿಸಿತ್ತು; ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ಸಹ ಈ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದರಿಂದ ಉದ್ಯೋಗಿಗಳ ಹಕ್ಕುಗಳು ಮತ್ತಷ್ಟು ಬಲಗೊಂಡಿದ್ದವು.
ಜೆಟ್ ಏರ್ವೇಸ್ ಪುನಾರಂಭಗೊಳ್ಳುವುದಿಲ್ಲವಾ?
2019ರ ಏಪ್ರಿಲ್ ತಿಂಗಳಲ್ಲಿ ಜೆಟ್ ಏರ್ವೇಸ್ ತನ್ನ ಕಾರ್ಯಾಚರಣೆ ನಿಲ್ಲಿಸಿತು. ಅದನ್ನು ಮಾರುವ ಪ್ರಯತ್ನ ನಡೆಯಿತು. 2021ರಲ್ಲಿ ಯುಎಐ ಮೂಲದ ಉದ್ಯಮಿ ಮುರಾರಿ ಲಾಲ್ ಜಲನ್ ಮತ್ತು ಬ್ರಿಟನ್ ಮೂಲಕ ಕಲ್ರಾಕ್ ಕ್ಯಾಪಿಟಲ್ ಸಂಸ್ಥೆಗಳ ಗುಂಪು (ಜೆಕೆಸಿ) ಜೆಟ್ ಏರ್ವೇಸ್ ಅನ್ನು ಖರೀದಿಸಲು ಆಯ್ಕೆಯಾಗಿತ್ತು. ಜೆಟ್ ಏರ್‌ವೇಸ್‌ನ ಸಾಲಗಳನ್ನು ತೀರಿಸಿ ವಿಮಾನ ಹಾರಾಟ ಕಾರ್ಯಾಚರಣೆ ಪುನಾರಂಭಗೊಳ್ಳುವ ಯೋಜನೆಯನ್ನು ಪ್ರಸ್ತಾಪಿಸಿತು. ಇದಕ್ಕೆ ಎನ್ಸಿಎಲ್ಟಿಯಿಂದ ಅನುಮೋದನೆ ಕೂಡ ಸಿಕ್ಕಿತ್ತು. ಆದರೆ, ಬೇರೆ ಬೇರೆ ಕಾರಣಗಳಿಗೆ ಈ ಪ್ಲಾನ್ ಜಾರಿಯಾಗಲಿಲ್ಲ.
ಇದನ್ನೂ ಓದಿ: ಎನ್ ಚಂದ್ರಶೇಖರನ್ ಮರುನೇಮಕ ವಿರುದ್ಧ ಬಾಂಬೆ ಹೈಕೋರ್ಟ್ ಕೋರ್ಟ್ ಮೊರೆಬೀಳಲಿರುವ ಟಾಟಾ ಟ್ರಸ್ಟ್ಸ್
2024ರಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಜೆಟ್ ಏರ್ವೇಸ್ ಅನ್ನು ಖರೀದಿಸಲು ಬಂದ ಆ ಕನ್ಸಾರ್ಟಿಯಂನ ಬ್ಯಾಂಕ್ ಗ್ಯಾರಂಟಿ ಬಗ್ಗೆ ಅನುಮಾನಪಟ್ಟಿತು. ಜೆಟ್ ಏರ್‌ವೇಸ್‌ನ ಮಾಲಿಕತ್ವವನ್ನು ಜಲನ್-ಕಲ್ರಾಕ್ ಕನ್ಸಾರ್ಟಿಯಂಗೆ ವರ್ಗಾಯಿಸಬೇಕೆನ್ನುವ ಎನ್‌ಸಿಎಲ್‌ಎಟಿ ಆದೇಶವನ್ನು ಸುಪ್ರೀಂಕೋರ್ಟ್ 2024ರ ನವೆಂಬರ್ 7ರಂದು ರದ್ದುಗೊಳಿಸಿತು. ಜೆಟ್ ಏರ್ವೇಸ್ ಅನ್ನು ಲಿಕ್ವಿಡೇಶನ್ಗೆ ಒಳಪಡಿಸುವಂತೆ (ಆಸ್ತಿಗಳನ್ನು ಮಾರುವುದು) ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




