AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ವಚೆಯ ಕಾಂತಿ, ತೂಕ ಇಳಿಕೆ ಹೆಸರಲ್ಲಿ ಬರುವ ಜಾಹೀರಾತು ನಂಬುವ ಮುನ್ನ ಎಚ್ಚರ: ಶೇ.95ರಲ್ಲಿ ನಿಯಮ ಉಲ್ಲಂಘನೆ ಪತ್ತೆ!

ಆನ್‌ಲೈನ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸುವ ದಾರಿತಪ್ಪಿಸುವ ಜಾಹೀರಾತುಗಳ ಹಾವಳಿ ಆತಂಕಕಾರಿಯಾಗಿ ಹೆಚ್ಚಾಗಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಪತ್ತೆಹಚ್ಚಿದ ಒಟ್ಟು ನಿಯಮ ಉಲ್ಲಂಘನೆಗಳಲ್ಲಿ ಬರೋಬ್ಬರಿ ಶೇ. 98ರಷ್ಟು ಡಿಜಿಟಲ್ ವೇದಿಕೆಗಳಲ್ಲೇ ಕಂಡುಬಂದಿವೆ.

ತ್ವಚೆಯ ಕಾಂತಿ, ತೂಕ ಇಳಿಕೆ ಹೆಸರಲ್ಲಿ ಬರುವ ಜಾಹೀರಾತು ನಂಬುವ ಮುನ್ನ ಎಚ್ಚರ: ಶೇ.95ರಲ್ಲಿ ನಿಯಮ ಉಲ್ಲಂಘನೆ ಪತ್ತೆ!
Influencer Ads
ರಮೇಶ್ ಬಿ. ಜವಳಗೇರಾ
|

Updated on:Nov 26, 2026 | 5:32 PM

Share

ಬೆಂಗಳೂರು, ನವೆಂಬರ್ 26: ತ್ವಚೆಯ ಕಾಂತಿ, ತೂಕ ಇಳಿಕೆ ಹೆಸರಲ್ಲಿ ಬರುವ ಇನ್‌ಫ್ಲುಯೆನ್ಸರ್ ಜಾಹೀರಾತು ನಂಬುವ ಮುನ್ನ ಎಚ್ಚರವಹಿಸಬೇಕು. ಯಾಕಂದ್ರೆ, ಶೇ. 95ರಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಪತ್ತೆಹಚ್ಚಿದ ಒಟ್ಟು ನಿಯಮ ಉಲ್ಲಂಘನೆಗಳಲ್ಲಿ ಬರೋಬ್ಬರಿ ಶೇ. 98ರಷ್ಟು ಡಿಜಿಟಲ್ ವೇದಿಕೆಗಳಲ್ಲೇ ಕಂಡುಬಂದಿವೆ. ಅದರಲ್ಲೂ ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ) ವೇದಿಕೆಗಳಲ್ಲೇ ಶೇ. 73.4ರಷ್ಟು ಉಲ್ಲಂಘನೆಗಳು ದಾಖಲಾಗಿವೆ ಎಂದು ಎಎಸ್‌ಸಿಐ ತನ್ನ 2026-27ರ ಅರ್ಧವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಆರು ತಿಂಗಳಲ್ಲಿ 2,308 ಜಾಹೀರಾತುಗಳ ವಿರುದ್ಧ ಬಂದ 3,951 ದೂರುಗಳನ್ನು ಪರಿಶೀಲಿಸಲಾಗಿದ್ದು, ಇದರಲ್ಲಿ ಶೇ. 94ರಷ್ಟು ಜಾಹೀರಾತುಗಳನ್ನು ತಿದ್ದುಪಡಿ ಮಾಡಬೇಕಾಯಿತು. ಶೇ. 72ರಷ್ಟು ಜಾಹೀರಾತುಗಳು ಸುಳ್ಳು ಮಾಹಿತಿ ನೀಡಿ ಗ್ರಾಹಕರನ್ನು ದಾರಿತಪ್ಪಿಸುತ್ತಿದ್ದರೆ, ಶೇ. 30ರಷ್ಟು ಹಾನಿಕಾರಕ ಉತ್ಪನ್ನ ಅಥವಾ ಅಸುರಕ್ಷಿತ ಸನ್ನಿವೇಶಗಳನ್ನು ಉತ್ತೇಜಿಸುತ್ತಿದ್ದವು ಎಂದು ಎಎಸ್‌ಸಿಐ ಹೇಳಿದೆ.

ಮೆಟಾದಲ್ಲಿ ಭಾರೀ ನಿಯಮ ಉಲ್ಲಂಘನೆ

ಮೆಟಾ ವೇದಿಕೆಗಳಲ್ಲಿ ಒಟ್ಟು 1,563 ಜಾಹೀರಾತುಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಇವುಗಳಲ್ಲಿ ಶೇ. 90ರಷ್ಟು ಹಣ ಕೊಟ್ಟು ಪ್ರಚಾರ ಮಾಡಿದ ಜಾಹೀರಾತುಗಳಾಗಿದ್ದು, ಶೇ. 41ರಷ್ಟು ನಿಷೇಧಿತ ವಸ್ತುಗಳಿಗೆ ಸಂಬಂಧಿಸಿವೆ. ಆನ್‌ಲೈನ್ ಹಣದ ಆಟಗಳನ್ನು ನಿಷೇಧಿಸುವ ‘ಆನ್‌ಲೈನ್ ಗೇಮಿಂಗ್ ಕಾಯ್ದೆ–2025’ ಜಾರಿಯಲ್ಲಿದ್ದರೂ, ಅಕ್ರಮ ಹಾಗೂ ವಿದೇಶಿ ಬೆಟ್ಟಿಂಗ್ ಜಾಹೀರಾತುಗಳು ಇನ್ನೂ ನಿಂತಿಲ್ಲ. ನಿಷೇಧಿತ ವಿಭಾಗದ ಒಟ್ಟು 633 ಪ್ರಕರಣಗಳನ್ನು ಸರ್ಕಾರಕ್ಕೆ ವರದಿ ಮಾಡಲಾಗಿದ್ದು, ಇದರಲ್ಲಿ 590 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದ ಜಾಹೀರಾತುಗಳು (ಐ4ಸಿ ಮತ್ತು ವಾರ್ತಾ ಸಚಿವಾಲಯಕ್ಕೆ ದೂರು), 28 ಔಷಧಗಳು ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ 1954ರ ಉಲ್ಲಂಘನೆ, 6 ಮದ್ಯ, 4 ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮ ಉಲ್ಲಂಘನೆ ಹಾಗೂ 5 ಇತರ ಪ್ರಕರಣಗಳು ಸೇರಿವೆ. ಜೊತೆಗೆ ತೆಲಂಗಾಣ ರೇರಾ ಒಪ್ಪಂದದಡಿ 333 ರಿಯಲ್ ಎಸ್ಟೇಟ್ ಜಾಹೀರಾತುಗಳನ್ನು ಹಾಗೂ ನಿಯಮ ಪಾಲಿಸದ ಇನ್ನೂ 136 ಜಾಹೀರಾತುಗಳನ್ನು ಕ್ರಮಕ್ಕಾಗಿ ಸಂಬಂಧಿತ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ ಎಂದು ಎಎಸ್‌ಸಿಐ ತಿಳಿಸಿದೆ.

ಯಾವ್ಯಾವ ವಿಭಾಗದಲ್ಲಿ ಹೆಚ್ಚು ಉಲ್ಲಂಘನೆ?

ಅಕ್ರಮ ಬೆಟ್ಟಿಂಗ್ ನಂತರ ಪರ್ಸನಲ್ ಕೇರ್ (456), ರಿಯಲ್ ಎಸ್ಟೇಟ್ (360), ಆಹಾರ ಮತ್ತು ಪಾನೀಯ (312), ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ (95), ಆರೋಗ್ಯ ಸೇವೆ (82) ಹಾಗೂ ಶಿಕ್ಷಣ (68) ವಿಭಾಗಗಳಲ್ಲಿ ಅತಿ ಹೆಚ್ಚು ಉಲ್ಲಂಘನೆಗಳು ನಡೆದಿವೆ. ಒಟ್ಟು ಪ್ರಕರಣಗಳಲ್ಲಿ ಶೇ. 90ರಷ್ಟು ಈ ಏಳು ವಿಭಾಗಗಳಲ್ಲೇ ಇವೆ.

ಇನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ 659 ಜಾಹೀರಾತುಗಳ ಪೈಕಿ ಶೇ. 95ರಷ್ಟು ಜಾಹೀರಾತುಗಳಲ್ಲಿ ತಪ್ಪುಗಳು ಕಂಡುಬಂದಿವೆ. ಇದರಲ್ಲಿ ಪರ್ಸನಲ್ ಕೇರ್‌ನ 263 ಹಾಗೂ ಆಹಾರ-ಪಾನೀಯದ 181 ಜಾಹೀರಾತುಗಳಲ್ಲಿ ಅದು ಹಣ ಪಡೆದ ಪ್ರಚಾರ ಎಂಬುದನ್ನು ಸ್ಪಷ್ಟವಾಗಿ ತಿಳಿಸದಿರುವುದು ಪತ್ತೆಯಾಗಿದೆ.

ತ್ವಚೆ ಮತ್ತು ಕೂದಲಿನ ಬದಲಾವಣೆಯ ಬಗ್ಗೆ ಅತಿಯಾದ ಸುಳ್ಳು ಭರವಸೆ, ಸುರಕ್ಷತೆ ಹಾಗೂ ಪರಿಸರದ ಬಗ್ಗೆ ಆಧಾರರಹಿತ ಮಾಹಿತಿಗಳು ಹೆಚ್ಚಾಗಿ ಕಂಡುಬಂದಿವೆ. ಆಹಾರ ಮತ್ತು ಪಾನೀಯ ವಿಭಾಗದ ಶೇ. 74ರಷ್ಟು ಪ್ರಕರಣಗಳು ಆರೋಗ್ಯ ಪೂರಕ (ನ್ಯೂಟ್ರಾಸ್ಯುಟಿಕಲ್) ಉತ್ಪನ್ನಗಳಿಗೆ ಸಂಬಂಧಿಸಿದ್ದು, ಪಿಸಿಒಡಿ, ರಕ್ತಹೀನತೆ, ಕ್ಯಾನ್ಸರ್ ಅಪಾಯ, ಹೃದಯದ ಆರೋಗ್ಯ ಹಾಗೂ ಬೇಗ ತೂಕ ಇಳಿಸುವ ಆಧಾರರಹಿತ ಭರವಸೆಗಳು ಪತ್ತೆಯಾಗಿವೆ.

ಸಾರ್ವಜನಿಕರಿಂದಲೂ ಹೆಚ್ಚಿದ ದೂರು

ಒಟ್ಟು ಉಲ್ಲಂಘನೆಗಳಲ್ಲಿ ಶೇ. 85ರಷ್ಟನ್ನು ಎಎಸ್‌ಸಿಐ ತಾನಾಗಿಯೇ ಪತ್ತೆಹಚ್ಚಿದ್ದರೆ, ಸಾರ್ವಜನಿಕರಿಂದ ಬಂದ ದೂರುಗಳು ಕಳೆದ ವರ್ಷಕ್ಕಿಂತ ಶೇ. 20ರಷ್ಟು ಹೆಚ್ಚಾಗಿ 1,347ಕ್ಕೆ ತಲುಪಿವೆ. ಇದರಲ್ಲಿ ಶೇ. 84ರಷ್ಟು ದೂರುಗಳು ‘ತಾರಾ’ (TARA) ವೇದಿಕೆ ಮೂಲಕ ಬಂದಿವೆ. ಜಾಹೀರಾತುದಾರರು ಸ್ವಯಂಪ್ರೇರಿತವಾಗಿ ತಪ್ಪು ತಿದ್ದಿಕೊಳ್ಳುವ ಪ್ರಮಾಣ ಶೇ. 86ರಷ್ಟಿದೆ. ದೂರುಗಳನ್ನು ಬಗೆಹರಿಸುವ ಸಮಯ ನಾಲ್ಕು ವರ್ಷಗಳಲ್ಲಿ 30 ದಿನಗಳಿಂದ 15 ದಿನಗಳಿಗೆ ಇಳಿದಿದೆ. ಜಾಹೀರಾತುದಾರರು ಯಾವುದೇ ತಕರಾರು ತೆಗೆಯದೆ ಒಪ್ಪಿಕೊಂಡ ಪ್ರಕರಣಗಳು ಶೇ. 71ರಷ್ಟಿದ್ದು, ಅವು ಸರಾಸರಿ 8 ದಿನಗಳಲ್ಲೇ ಇತ್ಯರ್ಥವಾಗಿವೆ. ಹಾಗೆಯೇ ಶೇ. 83.5ರಷ್ಟು ಇನ್‌ಫ್ಲುಯೆನ್ಸರ್ ಜಾಹೀರಾತುಗಳನ್ನು 6 ದಿನಗಳಲ್ಲಿ ತಿದ್ದುಪಡಿ ಮಾಡಲಾಗಿದೆ.

“ಡಿಜಿಟಲ್ ಜಗತ್ತಿನ ವೇಗಕ್ಕೆ ತಕ್ಕಂತೆ ಗ್ರಾಹಕರ ಹಿತರಕ್ಷಣೆಯೂ ವೇಗವಾಗಬೇಕು. ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ನಿರಂತರ ಎಚ್ಚರಿಕೆ ಅಗತ್ಯ,” ಎಂದು ಎಎಸ್‌ಸಿಐ ಸಿಇಒ ಮನೀಷಾ ಕಪೂರ್ ತಿಳಿಸಿದ್ದಾರೆ.

1985ರಲ್ಲಿ ಸ್ಥಾಪನೆಯಾದ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಎಫ್‌ಎಸ್‌ಎಸ್‌ಎಐ, ಆಯುಷ್, ವಾರ್ತಾ ಸಚಿವಾಲಯದ ಸಹಯೋಗ ಹಾಗೂ 2023ರ ‘ಎಎಸ್‌ಸಿಐ ಅಕಾಡೆಮಿ’ ಮೂಲಕ ದೇಶದಲ್ಲಿ ಜಾಹೀರಾತು ಶಿಸ್ತು ಕಾಪಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Thu, 26 November 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More