AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರಿಗೆ 5 ಸಾವಿರ ರೂ. ನಿರುದ್ಯೋಗ ಭತ್ಯೆ, 25 ಲಕ್ಷ ಸರ್ಕಾರಿ ಉದ್ಯೋಗ; ಯುಪಿ ಚುನಾವಣೆಗೆ ಸಮಾಜವಾದಿ ಪಕ್ಷ ಪ್ರಣಾಳಿಕೆ ಬಿಡುಗಡೆ

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ (ಎಸ್​ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಇಂದು ಲಕ್ನೋದಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ಜನ್-ಮನ್ ಕಾ ಮ್ಯಾನಿಫೆಸ್ಟೋ’ ಎಂದು ಹೆಸರಿಸಲಾಗಿರುವ ಈ ಪ್ರಣಾಳಿಕೆಯಲ್ಲಿ ಯುವಕರು, ಮಹಿಳೆಯರು, ರೈತರು ಮತ್ತು ಹಿಂದುಳಿದ ವರ್ಗಗಳಿಗೆ ಹಲವು ಭರವಸೆಗಳನ್ನು ನೀಡಲಾಗಿದೆ ಎಂದು ಪಕ್ಷ ತಿಳಿಸಿದೆ. ಅಖಿಲೇಶ್ ಯಾದವ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಪ್ರಕಾರ, ರಾಜ್ಯದಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹಾಗೂ ಉದ್ಯೋಗ ಸಿಗುವವರೆಗೂ ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 5,000 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಲಾಗಿದೆ. ಇದರ ಜೊತೆಗೆ ಖಾಸಗಿ ವಲಯದಲ್ಲಿ 2 ಕೋಟಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಗುರಿಯನ್ನೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಯುವಕರಿಗೆ 5 ಸಾವಿರ ರೂ. ನಿರುದ್ಯೋಗ ಭತ್ಯೆ, 25 ಲಕ್ಷ ಸರ್ಕಾರಿ ಉದ್ಯೋಗ; ಯುಪಿ ಚುನಾವಣೆಗೆ ಸಮಾಜವಾದಿ ಪಕ್ಷ ಪ್ರಣಾಳಿಕೆ ಬಿಡುಗಡೆ
ಅಖಿಲೇಶ್ ಯಾದವ್Image Credit source: PTI
ಸುಷ್ಮಾ ಚಕ್ರೆ
|

Updated on: Nov 26, 2026 | 7:03 PM

Share

ಲಕ್ನೋ, ನವೆಂಬರ್ 26: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷದ (ಎಸ್​ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗ, ಆರ್ಥಿಕ ನೆರವು ಮತ್ತು ಸಾಮಾಜಿಕ ಕಲ್ಯಾಣವನ್ನು ಕೇಂದ್ರೀಕರಿಸಿದ ಹಲವು ಭರವಸೆಗಳನ್ನು ಘೋಷಿಸಿದ್ದಾರೆ. ಪದವೀಧರರಿಗೆ ಉದ್ಯೋಗ ಸಿಗುವವರೆಗೂ ಮಾಸಿಕ 5,000 ರೂ. ಭತ್ಯೆ, 5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ಮತ್ತು ಹಿರಿಯ ಮಹಿಳಾ ಕುಶಲಕರ್ಮಿಗಳಿಗೆ ವಾರ್ಷಿಕ 40,000 ರೂ. ಪಿಂಚಣಿ ನೀಡುವ ಪ್ರಮುಖ ವಾಗ್ದಾನಗಳು ಇದರಲ್ಲಿ ಸೇರಿವೆ.

‘ಜನ್-ಮನ್ ಕಾ ಮ್ಯಾನಿಫೆಸ್ಟೋ’ (ಜನರ ಪ್ರಣಾಳಿಕೆ) ಎಂಬ ಶೀರ್ಷಿಕೆಯ ಈ ಪ್ರಣಾಳಿಕೆಯು, ಇತರ ವಲಯಗಳಲ್ಲಿ 2 ಕೋಟಿಯಿಂದ 3 ಕೋಟಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಜಾತಿ ಜನಗಣತಿ ನಡೆಸುವುದು ಮತ್ತು 5 ರೂ.ಗೆ ಊಟ ನೀಡುವ ‘ಸಮಾಜವಾದಿ ಕ್ಯಾಂಟೀನ್’ಗಳನ್ನು ತೆರೆಯುವ ಭರವಸೆಯನ್ನೂ ನೀಡಿದೆ. ಈ ಪ್ರಣಾಳಿಕೆಯಲ್ಲಿ ಉದ್ಯೋಗ ಮತ್ತು ಆರ್ಥಿಕ ಬೆಂಬಲಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಪ್ರತಿಯೊಬ್ಬ ಪದವೀಧರರಿಗೆ ಉದ್ಯೋಗ ಅಥವಾ ಉದ್ಯೋಗಾವಕಾಶ ಸಿಗುವವರೆಗೂ ತಿಂಗಳಿಗೆ 5,000 ರೂ. ಭತ್ಯೆ ನೀಡುವುದಾಗಿ ಸಮಾಜವಾದಿ ಪಕ್ಷ ಭರವಸೆ ನೀಡಿದೆ. ಅಲ್ಲದೆ ಪದವೀಧರರಿಗೆ ಉದ್ಯೋಗ ಒದಗಿಸುವ ವಾಗ್ದಾನವನ್ನೂ ಪಕ್ಷ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 1.27 ಕೋಟಿ ಹಿಂದೂ ಮತದಾರರ ಹೆಸರು ಕಣ್ಮರೆ; ವಿಪಕ್ಷಗಳ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ

5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವ ಗುರಿಯನ್ನು ಪಕ್ಷ ನಿಗದಿಪಡಿಸಿಕೊಂಡಿದೆ. ಇದರ ಜೊತೆಗೆ ಖಾಸಗಿ ವಲಯಗಳಲ್ಲಿ 2 ಕೋಟಿಯಿಂದ 3 ಕೋಟಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಭರವಸೆಯನ್ನು ಪ್ರತ್ಯೇಕವಾಗಿ ನೀಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಚಿತ ಶಾಲಾ ಶಿಕ್ಷಣ ನೀಡುವುದಾಗಿ ಮತ್ತು ಮುಚ್ಚಲ್ಪಟ್ಟಿರುವ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸುವುದಾಗಿ ಸಮಾಜವಾದಿ ಪಕ್ಷ ಘೋಷಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಕುಟುಂಬಗಳಿಗೆ 10 ಲಕ್ಷದವರೆಗೆ ಆರೋಗ್ಯ ವಿಮೆ ಒದಗಿಸುವುದು ಹಾಗೂ ರಾಜ್ಯದಲ್ಲಿ 5 ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: ಸೌರವ್ ದಾಸ್​ಗೆ ಮಾತ್ರವಲ್ಲದೆ ಸಿಜೆಪಿಯ ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿ

ಹಿರಿಯ ಮಹಿಳಾ ಕುಶಲಕರ್ಮಿಗಳಿಗೆ ವಾರ್ಷಿಕ 40,000 ರೂ. ಪಿಂಚಣಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಪಿಡಿಎ ಸಮುದಾಯಗಳು, ಮಹಿಳೆಯರು ಮತ್ತು ಬಡವರಿಗಾಗಿ ಸಮಾಜವಾದಿ ಕ್ಯಾಂಟೀನ್‌ಗಳನ್ನು ತೆರೆಯಲು ಪಕ್ಷ ಪ್ರಸ್ತಾಪಿಸಿದ್ದು, ಇಲ್ಲಿ 5 ರೂ.ಗೆ ಊಟ ಲಭ್ಯವಿರಲಿದೆ. ಪ್ರಣಾಳಿಕೆ ಬಿಡುಗಡೆಗೆ ಸಂವಿಧಾನ ದಿನವನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬುದನ್ನು ವಿವರಿಸುವಾಗ ಅಖಿಲೇಶ್ ಯಾದವ್ ಅವರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ‘ಅಚ್ಛೇ ದಿನ್’ (ಒಳ್ಳೆಯ ದಿನಗಳು) ಭರವಸೆ ಈಡೇರಿಲ್ಲ ಎಂದು ಹೇಳಿದ ಅವರು, ಆಡಳಿತ ಪಕ್ಷದ ಅಧಿಕಾರಾವಧಿ ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂದು ಪ್ರತಿಪಾದಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More