ನಿಮ್ಮ ಆಲೋಚನಾ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ: ಯುವಜನರಿಗೆ ಮಾಜಿ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಸಲಹೆ
ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಯುವಜನತೆಗೆ ಕೃತಕ ಬುದ್ಧಿಮತ್ತೆ (AI) ಕುರಿತು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ನಿಮ್ಮ ಸ್ವಂತ ಆಲೋಚನಾ ಸಾಮರ್ಥ್ಯವನ್ನು ಕಳೆದುಕೊಳ್ಳಬೇಡಿ. ಅರಿವಿನ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ ಎಂದು ಸಲಹೆ ನೀಡಿದ್ದಾರೆ. ರಾಜ್ ಶಮಾನಿ ಅವರ ಪೋಡ್ಕ್ಯಾಸ್ಟ್ನಲ್ಲಿ ಅವರು ಮಾತನಾಡುತ್ತಿದ್ದರು.

ನವದೆಹಲಿ, ನವೆಂಬರ್ 8: ಕೃತಕ ಬುದ್ಧಿಮತ್ತೆಯ ಮೇಲೆ ಅತಿಯಾದ ಅವಲಂಬನೆಯು ಯುವಜನರ ಆಲೋಚನಾ ಸಾಮರ್ಥ್ಯಕ್ಕೆ ಮಾರಕ ಎಂದು ಐಎಂಎಫ್ನ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಎಚ್ಚರಿಸಿದ್ದಾರೆ. ‘ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಅತ್ಯಂತ ಉಪಯುಕ್ತ ಸಾಧನವಾಗಿದ್ದರೂ, ಪ್ರತಿಯೊಂದಕ್ಕೂ ಅದರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿ ನಿಮ್ಮ ಸ್ವಂತ ಆಲೋಚನಾ ಶಕ್ತಿಯನ್ನು ಅದಕ್ಕೆ ಒಪ್ಪಿಸಬೇಡಿ’ ಎಂದು 25 ವರ್ಷದ ಯುವಜನರಿಗೆ ಅವರು ಕಿವಿಮಾತು ಹೇಳಿದ್ದಾರೆ.
ವೇಗವಾಗಿ ಬದಲಾಗುತ್ತಿರುವ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಯುವಕರು ಕೇವಲ ತಂತ್ರಜ್ಞಾನದ ಬಳಕೆಗೆ ಸೀಮಿತವಾಗದೆ, ಸ್ವಂತಿಕೆ, ವಿಮರ್ಶಾತ್ಮಕ ಆಲೋಚನೆ (Critical thinking) ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ಆರ್ಥಿಕ ತಜ್ಞರೂ ಆದ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಕುಂದು
ಎಐನಿಂದಾಗಿ ಇಂದಿನ ಮಕ್ಕಳಲ್ಲಿ ಕಲಿಕೆ ಮತ್ತು ವಿಮರ್ಶೆಯ ಸಾಮರ್ಥ್ಯ ಕಡಿಮೆ ಆಗಿದೆ ಎಂದು ಅಭಿಪ್ರಾಯಪಟ್ಟ ಅವರು, ಇದನ್ನು ಕೋವಿಡ್ ಸಂದರ್ಭಕ್ಕೆ ಹೋಲಿಸಿದ್ದಾರೆ.
‘2020ರ ಕೋವಿಡ್ ಸಾಂಕ್ರಾಮಿಕ ಸಂದರ್ಭದ ಭಾವನೆ ಬರುತ್ತದೆ. ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ತಮ್ಮ ಕಲಿಕೆಯಲ್ಲಿ ಭಾರೀ ವ್ಯತ್ಯಯ ಕಂಡಿದ್ದರು. ಈಗ ಎಐನಲ್ಲೂ ಅಂಥದ್ದೇ ಸಮಸ್ಯೆಯನ್ನು ಕಾಣುತ್ತಿದ್ದೇವೆ’ ಎಂದು ಗೀತಾ ಗೋಪಿನಾಥ್ ವಿವರಿಸಿದ್ದಾರೆ.
ಹಾರ್ವರ್ಡ್ನಲ್ಲಿನ ವಾತಾವರಣವನ್ನೂ ಉಲ್ಲೇಖಿಸಿದ ಗೀತಾ
ಇಂದಿನ ವಿದ್ಯಾರ್ಥಿಗಳು ಶಾಲೆಯ ಅಸೈನ್ಮೆಂಟ್ಗಳನ್ನು ಮಾಡಲು ಎಐ ಮೇಲೆ ಅವಲಂಬಿತವಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು ತಾವು ಬೋಧನೆ ಮಾಡುವ ಹಾರ್ವರ್ಡ್ ಇನ್ಸ್ಟಿಟ್ಯೂಟ್ನಲ್ಲಿನ ಪರಿಸ್ಥಿತಿಯ ಉದಾಹರಣೆ ಕೊಟ್ಟಿದ್ದಾರೆ.
‘ಹಾರ್ವರ್ಡ್ನಲ್ಲೂ ಇದನ್ನು ಗಮನಿಸಬಹುದು. ಅಲ್ಲಿಯ ಮಕ್ಕಳು ಮನೆಯಲ್ಲಿ ಮಾಡಿದ್ದಕ್ಕೂ, ಶಾಲೆಯಲ್ಲಿ ಅವರನ್ನು ಪರೀಕ್ಷಿಸಿದ್ದಕ್ಕೂ ಬಹಳಷ್ಟು ವ್ಯತ್ಯಾಸ ಕಂಡುಬರುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನ ಖರೀದಿ; 21 ವರ್ಷದಲ್ಲಿ ಸರಾಸರಿ ರಿಟರ್ನ್ಸ್ ಶೇ. 15ಕ್ಕಿಂತಲೂ ಅಧಿಕ
ಉದ್ಯೋಗ ರಂಗದ ಮೇಲೆ AI ಪ್ರಭಾವ
ಜಾಗತಿಕ ಮಟ್ಟದಲ್ಲಿ AI ತಂತ್ರಜ್ಞಾನದ ಅಳವಡಿಕೆ ವೇಗವಾಗಿ ಹೆಚ್ಚುತ್ತಿದ್ದು, ಇದು ಉದ್ಯೋಗಾವಕಾಶಗಳು ಮತ್ತು ಉತ್ಪಾದಕತೆಯ ಮೇಲೆ ಬೀರುವ ಪರಿಣಾಮಗಳ ಕುರಿತು ಯುವ ವೃತ್ತಿಪರರು ಎಚ್ಚೆತ್ತುಕೊಳ್ಳಬೇಕು ಹಾಗೂ ತಂತ್ರಜ್ಞಾನದ ಜೊತೆಗೆ ಮಾನವೀಯ ಬುದ್ಧಿವತ್ತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಖ್ಯಾತ ಯೂಟ್ಯೂಬರ್ ಮತ್ತು ಪೋಡ್ಕ್ಯಾಸ್ಟರ್ ರಾಜ್ ಶಮಾನಿ ಅವರ ಪೋಡ್ಕ್ಯಾಸ್ಟ್ನಲ್ಲಿ ಗೀತಾ ಗೋಪಿನಾಥ್ ಅವರು ಮಾತನಾಡುತ್ತಾ ಒಂದಷ್ಟು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




